“ಸುಪ್ರಿಂ ಕೋರ್ಟ್–ನೇಮಿತ ಸಮಿತಿಯಿಂದ ಕಾರ್ಪೊರೇಟ್–ಪಕ್ಷಪಾತಿ ಶಿಫಾರಸುಗಳು”
ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಗಳಲ್ಲಿ ರೈತರು ಸಂಯುಕ್ತ ಕಿಸಾನ್ ಮೋರ್ಚಾ ನೇತೃÀತ್ವದಲ್ಲಿ ಹೋರಾಟ ಆರಂಭಿಸಿದ ಮೂರು ತಿಂಗಳ ನಂತರ, ಜನವರಿ 2021ರಲ್ಲಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರು ನೇಮಿಸಿದ್ದ ಸಮಿತಿಯ ಶಿಫಾರಸು ಈಗ ಕೇಂದ್ರ ಸರಕಾರವೇ ತಾನು ತಂದ ಆ ಕಾಯ್ದೆಗಳನ್ನು ರದ್ದು ಮಾಡಿದ ನಾಲ್ಕು ತಿಂಗಳ ನಂತರ, ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ಬಂದ ಕೆಲವು ದಿನಗಳ ನಂತರ ಬಿಡುಗಡೆಯಾಗಿದೆ. ಇದರಲ್ಲಿ ಈ ಕಾಯ್ದೆಗಳಿಗೆ ದೇಶದ ಬಹುಪಾಲು ರೈತರ ಬೆಂಬಲವಿದ್ದು ಇದನ್ನು ರದ್ದು ಮಾಡಿರುವುದರಿಂದ ಭಾರೀ ಪ್ರಮಾಣದಲ್ಲಿರುವ ರೈತರ “ಮೌನ ಬಹುಮತಕ್ಕೆ ಅನ್ಯಾಯವಾಗಿದೆ ಎಂದು ಅದು ಹೇಳಿರುವುದಾಗಿ ವರದಿಯಾಗಿದೆ.
ಈ ಸಮಿತಿ ಈ ಕೃಷಿ ಕಾಯ್ದೆಗಳನ್ನು ಮತ್ತೆ ತರಲು ಶಿಫಾರಸು ಮಾಡುತ್ತಿದೆಯೇ? ಇದನ್ನು ಬಲವಾಗಿ ಖಂಡಿಸುವುದಾಗಿ ಈ ಸಮಿತಿಯನ್ನು ಬಹಿಷ್ಕರಿಸಿದ್ದ ದೊಡ್ಡ ರೈತ ಸಂಘಟನೆಗಳಲ್ಲಿ ಒಂದಾದ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಹೇಳಿದೆ. ಈ ಸಮಿತಿಯ ಶಿಫಾರಸುಗಳು ಕಾರ್ಪೊರೇಟ್-ಪರ ಪಕ್ಷಪಾತದಿಂದ ಕೂಡಿವೆ ಎಂದೂ ಅದು ಹೇಳಿದೆ.
ಈ ಸಮಿತಿಗೆ ಆಗಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರು ನೇಮಿಸಿದ್ದವರೆಲ್ಲರೂ ಈ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದವರಾದ್ದರಿಂದ, ಅದರಿಂದ ನ್ಯಾಯಯುತ ಶಿಫಾರಸುಗಳು ಸಾಧ್ಯವಿಲ್ಲ ಎಂದೇ ಸಂಯುಕ್ತ ಕಿಸಾನ್ ಮೋರ್ಚಾಕ್ಕೆ ಸೇರಿದ ರೈತ ಸಂಘಟನೆಗಳು ಇದನ್ನು ಬಹಿಷ್ಕರಿಸಿ ಹೋರಾಟ ಮುಂದುವರೆಸಿದವು, ಕೊನೆಗೂ ಈ ಕಾಯ್ದೆಗಳನ್ನು ಸರಕಾರವೇ ರದ್ದುಮಾಡುವಂತೆ ಮಾಡುವಲ್ಲಿ ಯಶಸ್ವಿಯಾದವು. ಇದಕ್ಕೆ ನೇಮಕರಾದ ಒಬ ರೈತ ಮುಖಂಡರು ಈ ಸಮಿತಿಯಲ್ಲಿ ಸದಸ್ಯರಾಗಿ ಕೆಲಸ ಮಾಡಲು ನಿರಾಕರಿಸಿದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಸಮಿತಿಯ ಸದಸ್ಯರಲ್ಲಿ ಒಬ್ಬರೂ ಮತ್ತು ಶೇತಕರಿ ಸಂಘಟನ್ ಎಂಬ ಮಹಾರಾಷ್ಟದ ಒಂದು ರೈತ ಸಂಘಟನೆಯ ಮುಖಂಡರೂ ಆಗಿರುವ ಅನಿಲ್ ಜೈಸಿಂಗ್ ಘನ್ವತ್ ಸಿಮಿತಿಯ ವರದಿ/ಶಿಫಾರಸುಗಳನ್ನು ಮಾರ್ಚ್ 21ರಂದು ಬಿಡುಗಡೆ ಮಾಡಿರುವುದಾಗಿ ವರದಿಯಾಗಿದೆ. ಅವರು ಇದನ್ನು ಬಿಡುಗಡೆ ಮಾಡುವಂತೆ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಬರೆದಿದ್ದರಂತೆ, ಮತ್ತು ಅವರು ಬಿಡುಗಡೆ ಮಾಡದಿದ್ದರೆ ತಾನೇ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದರಂತೆ. ಈಗ ಅದನ್ನು ಬಿಡುಗಡೆ ಮಾಡುತ್ತ “ಈ ಮೂರು ಕಾಯ್ದೆಗಳು ರದ್ದಾಗಿವೆ. ಆದ್ದರಿಂದ ಇದೀಗ ಪ್ರಸ್ತುತವಲ್ಲ” ಎಂದು ಹೇಳಿರುವುದಾಗಿಯೂ ವರದಿಯಾಗಿದೆ.
ಈ ಸಮಿತಿ ಸಂವಾದ ನಡೆಸಿದ ರೈತ ಸಂಘಟನೆಗಳಲ್ಲಿ 85.7% ಇದನ್ನು ಬೆಂಬಲಿಸಿದ್ದಾರೆ, ಕೇವಲ 13% ವಿರೋಧಿಸಿದ್ದಾರೆ, 1% ದಷ್ಟು ಕೆಲವು ಬದಲಾವಣೆಗಳೊಂದಿಗೆ ಇದನ್ನು ಬೆಂಬಲಿಸಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಜತೆಗೇ ಈ ಸಮಿತಿ ಅಭಿಪ್ರಾಯ ಕೇಳಿ ಆಹ್ವಾನ ಕಳಿಸಿದ್ದ 266 ರೈತ ಸಂಘಟನೆಗಳಲ್ಲಿ 73 ಸಂಘಟನೆಗಳು ಮಾತ್ರವೇ ಸ್ಪಂದಿಸಿದವು ಎಂದೂ ಲೆಕ್ಕ ಕೊಟ್ಟಿದೆ. ಅಂದರೆ ಈ ಸಮಿತಿಯ ಪ್ರಕಾರವೂ ರೈತರ ನಡುವೆ ಈ ಕಾಯ್ದೆಗಳಿಗೆ ಇದ್ದ ಬೆಂಬಲ 24% ಮಾತ್ರ!
ರೈತ ಸಂಘಟನೆಗಳ ಪ್ರಾತಿನಿಧ್ಯದ ಒಂದು ಸಾಂಸ್ಥಿಕ ವ್ಯವಸ್ಥೆ ಇಲ್ಲದಿರುವಾಗ , ಈ ಕೃಷಿ ಕಾಯ್ದೆಗಳಿಗೆ ರೈತರ ನಡುವೆ “ಭಾರೀ ಮೌನ ಬಹುಮತ” ಇತ್ತು ಎನ್ನುವುದು ಅನಿಲ್ ಘನ್ವತ್‌ರಂತಹ ಕಾರ್ಪೊರೇಟ್-ಪರ ಮುಖಂಡರ ಹಗಲುಗನಸು ಎಂದು ಎಐಕೆಎಸ್ ಟಿಪ್ಪಣಿ ಮಾಡಿದೆ.
ಅದೇನೇ ಇರಲಿ, ಈ ಸಮಿತಿ ನೀಡಿದೆ ಎನ್ನಲಾದ ಶಿಫಾರಸುಗಳು ಎಲ್ಲವೂ ಕಾರ್ಪೊರೇಟ್-ಪರ ಸುಧಾರಣೆಗಳಿಗೆ ಅನುಕೂಲ ಮಾಡಿಕೊಡುವ ಗುರಿಯನ್ನೇ ಹೊಂದಿವೆ ಎಂಬುದು ಸ್ವಯಂವೇದ್ಯ ಎಂದು ಎಐಕೆಎಸ್ ಹೇಳಿದೆ. ಕೃಷಿ ಭೂಮಿ, ಕೃಷಿ ಮಾರುಕಟ್ಟೆಗಳು ಮತ್ತು ಕೃಷಿ ಉತ್ಪನ್ನಗಳನ್ನು ಕಾರ್ಪೊರೇಟ್‌ಗಳು ವಹಿಸಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಲಿಕ್ಕಾಗಿ ವಾಸ್ತವತೆಯನ್ನು ವಿಕೃತಗೊಳಿಸುವ ಒಂದು ಶತಪ್ರಯತ್ನವಿದು ಎಂದು ಎಐಕೆಎಸ್ ಹೇಳಿದೆ.
ಸರಕಾರದಿಂದ ಅಕ್ಕಿ ಮತ್ತು ಗೋದಿಯ ಖರೀದಿಗೆ ಮಿತಿ ಹಾಕಬೇಕು ಎಂಬ ಶಿಫಾರಸು ರೈತರ ಒಟ್ಟು ಹಿತಾಸಕ್ತಿಗಳಿಗೆ ವಿರುದ್ಧವಾದದ್ದು, ಇದು ಈಗಿರುವ ಕನಿಷ್ಟ ಬೆಂಬಲ ಬೆಲೆ ಆಧಾರಿತ ವ್ಯವಸ್ಥೆಯನ್ನು ಮತ್ತಷ್ಟು ಅಪಾಯಕ್ಕೀಡು ಮಾಡುತ್ತದೆ ಎಂದಿರುವ ಎಐಕೆಎಸ್, ಈ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರ ಬಲವಾದ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗುತ್ತಿದ್ದಾಗ, ಈ ಸುಪ್ರಿಂ ಕೋರ್ಟ್-ನೇಮಿತ ಸದಸ್ಯರು ಈ ಕಾಯ್ದೆಗಳನ್ನು ಜಾರಿಗೊಳಿಸಬೇಕು ಎಂದು ಪ್ರತಿಪಾದಿಸುತ್ತಿದ್ದರು ಎಂದು ನೆನಪಿಸಿದೆ. ಎಂಎಸ್ ಸ್ವಾಮಿನಾಥನ್ ಸಮಿತಿಯ ಕನಿಷ್ಟ ಬೆಂಬಲ ಬೆಲೆ ಕುರಿತಾದ ಶಿಫಾರಸನ್ನು ಜಾರಿಗೊಳಿಸುವುದಾಗಿ ಬಿಜೆಪಿ 2014ರ ಲೋಕಸಭಾ ಚುನಾವಣೆಗಳ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ. ಮೋದಿ ಸರಕಾರ ಬಂದ ಏಳು ವರ್ಷಗಳ ನಂತರವೂ ಅದನ್ನು ಈಡೇರಿಸಿಲ್ಲ. ಆದರೂ ಈ ಸುಪ್ರಿಂ ಕೋರ್ಟ್-ನೇಮಿತ ಸಮಿತಿಗೆ ಎಲ್ಲ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಬೇಕು ಎಂದು ಶಿಫಾರಸು ಮಾಡುವ ಬಗ್ಗೆ ಏನೇನೂ ಆಸಕ್ತಿಯಿಲ್ಲ ಎಂಬುದನ್ನು ಅದರ ಶಿಫಾರಸುಗಳು ಹೊರಗೆಡಹುತ್ತವೆ ಎಂದು ಎಐಕೆಎಸ್ ಹೇಳಿದೆ.