ಕೃಷಿ ಕಾಯ್ದೆ ರದ್ದತಿಗಾಗಿ ಆಗ್ರಹಿಸಿ ಕೇಂದ್ರದ ವಿರುದ್ಧ ಕರಾಳ ದಿನಾಚರಣೆ

ಹಾಸನ: ರೈತ ಚಳುವಳಿಗೆ 6 ತಿಂಗಳು ಪೂರೈಸಿದ ಮತ್ತು ಜನವಿರೋಧಿ ಮೋದಿ ಸರ್ಕಾರದ 7 ವರ್ಷಗಳ ದುರಾಡಳಿತ ವಿರುದ್ಧ ಹಾಸನದಲ್ಲಿ ಕಪ್ಪು ಬಾವುಟ ಹಿಡಿದು ಕರಾಳ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು, ಜನ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯಲು, ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ಹಿಂಪಡೆಯಲು , ಎಲ್ಲಾ ನಾಗರೀಕರಿಗೆ ಉಚಿತ ವ್ಯಾಕ್ಸಿನ್ ನೀಡುವಂತೆ ಒತ್ತಾಯಿಸಲಾಯಿತು.

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ವಿದ್ಯುತ್ ಮಸೂದೆ ವಾಪಸ್ಸು ಪಡೆಯಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿಪಡಿಸುವ ಕೇಂದ್ರೀಯ ಕಾಯ್ದೆ ಜಾರಿ ಮಾಡಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ಸು ಪಡೆಯಬೇಕು ಕೊರೊನಾ ಸಂಕಷ್ಟದಿಂದ ಉದ್ಬವಿಸಿರುವ ಆರೋಗ್ಯ ಬಿಕ್ಕಟ್ಟು ಹಾಗೂ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು, ದೇಶದ ಎಲ್ಲ ಜನತೆಯ ಜೀವ ಹಾಗೂ ಜೀವನವನ್ನು ರಕ್ಷಿಸಲು ಅಗತ್ಯ ಕ್ರಮಗಳಾದ ಸಾರ್ವತ್ರಿಕ ಉಚಿತ ಲಸಿಕೆ ನೀಡಿಕೆ, ಕನಿಷ್ಠ ತಲಾ 10 ಕೆಜಿ ಆಹಾರ ಧಾನ್ಯ, ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಕನಿಷ್ಠ ಆರು ತಿಂಗಳು ಕನಿಷ್ಠ ಹತ್ತು ಸಾವಿರ ರೂಗಳ ನಗದು ವರ್ಗಾವಣೆ, ಉದ್ಯೋಗ ಖಾತರಿ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಳ ಹಾಗೂ ನಗರ ಕ್ಕೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಹಾದಿಯಲ್ಲೇ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರವು ಸಹ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗೆ ಜನವಿರೋಧಿ, ರೈತ ವಿರೋಧಿ ತಿದ್ದುಪಡಿಗಳನ್ನು ತಂದಿದೆ. ಕೊರೋನಾ ಧಾಳಿಯಿಂದ ಜನರನ್ನು ರಕ್ಷಿಸಲು ವಿಫಲವಾಗಿದೆ. ಆಕ್ಸಿಜನ್ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆಯಿಂದ ನೂರಾರು ಜನ ಅಮಾನವೀಯ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯನ್ನು ನಿರ್ಮಾಣ ಮಾಡಿದೆ.ಈ ಎಲ್ಲಾ ವಿಫಲತೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದರು ಪ್ರತಿಭಟನಾಕಾರರು ಆಗ್ರಹಿಸಿದರು.

ಕೋಲಾರ: ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಕರೆಯ ಭಾಗವಾಗಿ ಕೋಲಾರದಲ್ಲಿ‌ ಎಲ್ಲಡೆ ಜನರು ತಮ್ಮ ತಮ್ಮ ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು.

ಪ್ರಮುಖವಾಗಿ ಮೂರು ಕೃಷಿ ಕಾಯ್ದೆಗಳ ರದ್ದತಿ ಸೇರಿದಂತೆ ಕಾರ್ಮಿಕ ಸಂಹಿತೆಗಳ ವಿರುದ್ಧ ಹಾಗೂ ಖಾಸಗೀಕರಣ ನೀತಿ ಖಂಡಿಸಿ ಕಾರ್ಮಿಕರು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ರೈತ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸದ ಸರಕಾರದ ಕ್ರಮವನ್ನು ಖಂಡಿಸಿದರು.

ಬಿಜೆಪಿ ಸರಕಾರದಿಂದ  ದೌರ್ಜನ್ಯ-ದಬ್ಬಾಳಿಕೆ ಎದುರಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೊಂದು ದೀರ್ಘಾವಧಿಗೆ ಚಳಿ, ಗಾಳಿ ಬಿಸಿಲೆನ್ನದೇ ನಡೆಯುತ್ತಿರುವ ಪ್ರತಿಭಟನೆಯಲ್ಲೇ 600 ಕ್ಕೂ ಹೆಚ್ಚು ರೈತ ಪ್ರತಿಭಟನಾಕಾರರು ಹುತಾತ್ಮರಾಗಿದ್ದರೂ ಕೇಂದ್ರ ಸರ್ಕಾರ ರೈತರ ಜೊತೆ ಮಾತಾನಾಡುತ್ತಿಲ್ಲ ತನ್ನ ಅಧಿಕಾರವನ್ನು ಬಳಸಿಕೊಂಡು ರೈತರ ಮೇಲೆ ದಾಳಿಗಳನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ವಿದ್ಯಾರ್ಥಿ-ಯುವಜನರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *