ಅಣೆಕಟ್ಟು ಬಿರುಕು ಬಿಟ್ಟಿಲ್ಲ-ಸುಭದ್ರವಾಗಿದೆ: ಅಕ್ರಮ ಗಣಿಗಾರಿಕೆ ಬಗ್ಗೆ ದಾಖಲೆಗಳಿದ್ದರೆ ನೀಡಲಿ

ಕಲಬುರಗಿ: ಕೆಆರ್‌ಎಸ್‌ ಆಣೆಕಟ್ಟಿನಲ್ಲಿ ಯಾವುದೇ ಬಿರುಕುಗಳಿಲ್ಲ. ಅಲ್ಲಿನ ಮುಖ್ಯ ಎಂಜಿನಿಯರ್ ಸ್ವತಃ ಸ್ಥಳಗಳಿಗೆ ತೆರಳಿ ನೀಡಿರುವ ವರದಿಯನ್ನು ಪರಿಶೀಲಿಸಿದ್ದೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ʻʻಸಂಸದೆ ಸುಮಲತಾ ಅವರ ಬಳಿ ಮಂಡ್ಯದ ಬೇಬಿಬೆಟ್ಟದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ದಾಖಲೆಗಳಿದ್ದರೆ ಸರಕಾರಕ್ಕೆ ಕೊಡಲಿ. ಅಕ್ರಮಗಳು ಏನಾದರೂ ನಡೆದಿದ್ದಲ್ಲಿ ಅವುಗಳನ್ನು ಸಮಗ್ರ ತನಿಖೆಗೆ ಆದೇಶಿಸಲಾಗುವುದುʼʼ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಅಕ್ರಮ ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ, ಸಿಬಿಐ ತನಿಖೆಗೆ ಆಗ್ರಹ

ನನಗಿರುವ ಮಾಹಿತಿಯಂತೆ ಕಳೆದ ನಾಲ್ಕು ತಿಂಗಳಿನಿಂದ ಕೆಆರ್‍ಎಸ್ ಅಣೆಕಟ್ಟಿನ ಸುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ. ಬೇಬಿಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದ ನಂತರ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆ. ಕೆಲವರು ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದ ಕೂಡಲೇ ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದೆ ಎಂದರು.

ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದಲೇ ಅಂಥವರಿಗೆ ದಂಡ ವಿಧಿಸಿ ಯಾವುದೇ ತರಹದ ಚಟುವಟಿಕೆಗಳು ನಡೆಯದಂತೆ ನಿರ್ಬಂಧವನ್ನು ವಿಧಿಸಲಾಗಿದೆ. ಒಂದು ವೇಳೆ ಈಗಲೂ ಅಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೆ, ಅದರ ಬಗ್ಗೆ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಿ. ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೆಆರ್‍ಎಸ್ ಅಣೆಕಟ್ಟು ಸುತ್ತಮುತ್ತ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಕಾನೂನು ಕೈಗೊಳ್ಳಲಾಗಿದ್ದು, ಈಗಾಗಲೇ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚನೆ ಕೊಡಲಾಗಿದೆ ಎಂದರು. ಕಳೆದ 70 ವರ್ಷಗಳಿಂದಲೂ ಇಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ಹೀಗಾಗಿ ಯಾವ ರಾಜಕಾರಣಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ವಾಕ್ಸಮರ ಅಂತ್ಯಗೊಳಿಸಲು ಜೆಡಿ(ಎಸ್‌) ವರಿಷ್ಠ ದೇವೇಗೌಡ ಸೂಚನೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಇಬ್ಬರ ಬಗ್ಗೆಯೂ ಅಪಾರ ಗೌರವವಿದೆ. ಹಾದಿಬೀದಿಯಲ್ಲಿ ಜಗಳ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಈ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದರು.

ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇಬ್ಬರೂ ಬುದ್ದಿವಂತರು. ಈಗ ನಡೆಯುತ್ತಿರುವ ಸಂಘರ್ಷಕ್ಕೆ ಅವರು ಪೂರ್ಣ ವಿರಾಮ ಹಾಕಬೇಕು. ಶೀಘ್ರವೇ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *