ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನ ವಿರೋಧಿಸಿ ಹಾವೇರಿಯಲ್ಲಿ ರೈತರ ಮಹಾ ಪಂಚಾಯತ್ ಸಮಾವೇಶ ನಡೆಯಿತು.
ಹಾವೇರಿ ಮುನಿಸಿಪಲ್ ಮೈದಾನದಲ್ಲಿ ನಡೆದ ರೈತ ಮಹಾ ಪಂಚಾಯತ್ ಸಮಾವೇಶವನ್ನ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದ್ಧವೀರ ಸಿಂಗ್ ದೀಪ ಬೆಳಗುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶದಲ್ಲಿ ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾತನಾಡಿದ ರಾಷ್ಟ್ರೀಯ ರೈತ ನಾಯಕ ಯುದ್ದವೀರ್ ಸಿಂಗ್, “ಮೂರು ಕಾನೂನುಗಳು ಜಾರಿಯಾದರೆ ರೈತರು ನಾಶ ಆಗುತ್ತಾರೆ. ರೈತರು ನಾಶವಾದರೆ ಕೂಲಿ ಕಾರ್ಮಿಕರು ನಾಶವಾಗುತ್ತಾರೆ. ಇದರ ಜೊತೆಗೆ ಸಣ್ಣ ಅನೇಕ ವರ್ಗದ ಜನರು ನಾಶವಾಗುತ್ತಾರೆ. ದೇಶದಲ್ಲಿ ದುಡಿಯುವ ಮತ್ತು ಲೂಟಿಕೋರರ ವರ್ಗ ಎರಡೆ ಇದೆ. ಈಗ ಈ ಎರಡೂ ವರ್ಗಗಳ ನಡುವೆ ಸಂಘರ್ಷ ನಡೆದಿದೆ. ಕೇಂದ್ರದ ಈ ಸರಕಾರ ಇಡಿ ದೇಶವನ್ನೆ ಮಾರಾಟ ಮಾಡಲು ಹೊರಟಿದೆ” ಎಂದು ಆರೋಪಿಸಿದ್ದಾರೆ.
“ಕೇಂದ್ರ ಸರ್ಕಾರ ಧರ್ಮದ ಅಫೀಮಿನ ಬಗ್ಗೆ ಮಾತನಾಡ್ತಿದ್ದಾರೆ. ರೈತರ ರಾಮ ಅವರ ಕಾಯಕ, ಅವರ ಮನೆ ಮತ್ತು ಮನಸ್ಸಿನಲ್ಲಿದ್ದಾನೆ. ಈಡಿ ದೇಶದಾದ್ಯಂತ ಆಂದೋಲನ ಮಾಡಬೇಕಿದೆ. ದೆಹಲಿಯಂತೆ ಬೆಂಗಳೂರು ಸುತ್ತುವರೆದು ಎಲ್ಲ ಕಡೆ ಹೋರಾಟ ಮಾಡಬೇಕು. ರೈತರ ಹೋರಾಟಕ್ಕೆ ಸರಕಾರ ಮಣಿಯಲೇಬೇಕು. ಆ ರೀತಿ ಹೋರಾಟಕ್ಕೆ ನಾವು ಸಿದ್ಧರಾಗಬೇಕು ಎಂದರು.
ಇನ್ನೋರ್ವ ರೈತ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, “ದೆಹಲಿಯಲ್ಲಿ ನಡಿತಿರೋ ಹೋರಾಟ ಎಷ್ಟು ಕಾಲ ಮುಂದುವರೆಸಬೇಕು ಎಂಬುದು ಗೊತ್ತಿಲ್ಲ. ಸರಕಾರ ರೈತರ ಜೊತೆಗೆ ಮಾತನಾಡುತ್ತಿಲ್ಲ. ಹೆಸರಿಗೆ ಮಾತ್ರ ಒಂದು ಪಕ್ಷದ ಸರಕಾರ ಇದೆ. ವಾಸ್ತವವಾಗಿ ಈ ಸರಕಾರ ಬಂಡವಾಳದಾರರ ಕೈಯಲ್ಲಿ ಸಿಲುಕಿದೆ. ಕಿಸಾನ್ ಕ್ರಾಂತಿ ಗೇಟ್ ನಲ್ಲಿ ನಾವು ಕುಳಿತಿರೋ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನ ತಯಾರು ಮಾಡೋ ಕಂಪನಿ ಇದೆ. ಸರಕಾರದ ಅಧೀನದಲ್ಲಿರೋ ಆ ಕಂಪನಿಯನ್ನ ಸರಕಾರ ಮಾರಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡಿ ಕಂಪನಿ ರಕ್ಷಣೆ ಮಾಡೋ ಕೆಲಸ ಮಾಡುತ್ತಿದ್ದೇವೆ ಎಂದರು.
ಪ್ರಧಾನಿ ಹೇಳ್ತಿದ್ದಾರೆ ನಮ್ಮ ದೇಶದಲ್ಲಿರೋದು ಮುಕ್ತ ಮಾರುಕಟ್ಟೆ ಅಂತಾ, ನಮಗೆ ಮುಕ್ತ ಮಾರುಕಟ್ಟೆ ಇದೆ ಅನ್ನೋದಾದರೆ ನಾವು ಡಿಸಿ, ತಹಶೀಲ್ದಾರ ಕಚೇರಿಯಲ್ಲಿ ಮಾರಾಟ ಮಾಡೋ ಕೆಲಸ ಮಾಡಬೇಕಿದೆ. ನೀವೆ ಹೇಳಿದಂತೆ ನಾವು ಮುಕ್ತ ಮಾರುಕಟ್ಟೆಗೆ ತಂದಿದ್ದೇವೆ ಖರೀದಿಸಿ ಅಂತಾ ಹೇಳಬೇಕಿದೆ” ಎಂದು ವಾಗ್ದಾಳಿ ನಡೆಸಿದರು.
ನಾಳೆ ವಿಧಾನಸೌಧ ಚಲೋ : ಕೃಷಿಕಾಯ್ದೆ ರದ್ದತಿಗಾಗಿ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನಾಳೆ ವಿಧಾನಸೌಧ ಚಲೋ ನಡೆಯುತ್ತಿದೆ. ರೈತರು, ಕಾರ್ಮಕರು, ವಿದ್ಯಾರ್ಥಿ- ಯುವಜನ- ಮಹಿಳೆಯರು, ಕೂಲಿಕಾರ – ದಲಿತ ಸಂಘಟನೆಗಳು ಭಾಗವಹಿಸುತ್ತಿದ್ದು 50 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಸಂಘಟಿಕರು ತಿಳಿಸಿದ್ದಾರೆ.