ಬೆಂಗಳೂರು: ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಪೋಡಿ ದುರಸ್ತಿ, ಪೌತಿ ಖಾತೆ ಬಗ್ಗೆ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾದ ತಹಶೀಲ್ದಾರ್‌ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಡೆದಿದೆ. ಸಭೆಯಲ್ಲಿ ಪೋಡಿ ದುರಸ್ತಿ, ಪೌತಿ ಖಾತೆ ಕುರಿತು ಮಹತ್ವದ ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ.
ಇನ್ನು ಸರಿಯಾಗಿ ಕೆಲಸ ಮಾಡದ ತಹಶೀಲ್ದಾರರು ಹಾಗೂ ಅಧಿಕಾರಿಗಳನ್ನು ಸಭೆಯಲ್ಲೇ ಎಲ್ಲರ ಮುಂದೆ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ.
ಪೋಡಿ ದುರಸ್ತಿ ಬಗ್ಗೆ ಮಾಹಿತಿ ನೀಡಿರುವ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅತಿವೃಷ್ಠಿಯಿಂದಾಗಿ ಪೋಡಿ ದುರಸ್ತಿ ಕೆಲಸ ತಡವಾಗಿದೆ. ಹೀಗಾಗಿ ಮತ್ತೆ ಆದ್ಯತೆ ಮೇಲೆ ಕೆಲಸ ಆರಂಭವಾಗಬೇಕು. ದುರಸ್ತಿಗಾಗಿ 1.40 ಲಕ್ಷ ಕೇಸ್ ಸರ್ವೇಗೆ ಹೋಗಿದೆ. ಇನ್ನೂ 1.50 ಲಕ್ಷ ಪ್ರಕರಣ ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಹೋಗಿದೆ. 20 ಸಾವಿರ ಸರ್ವೇ ನಂಬರ್ ಇನ್ನೂ 1-5 ಆಗಬೇಕು. 20 ಸಾವಿರ ಸರ್ವೇ ನಂಬರ್‌ನಲ್ಲಿ ಮಂಜೂರುದಾರರ ಸಂಖ್ಯೆ 1ರಿಂದ 1.50 ಲಕ್ಷ ಇರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ತೋಟಗಾರಿಕಾ ವಿ.ವಿಯಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರ್ಕೆಟ್: ವಿದ್ಯಾರ್ಥಿಗಳು ಆಕ್ರೋಶ
ಎಲ್ಲ ತಾಲೂಕಿನಲ್ಲೂ ಮಂಜೂರುದಾರರಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ತಿಪಟೂರಲ್ಲಿ ಅಧಿಕ ಮಂಜೂರುದಾರರಿದ್ದಾರೆ. ಕುಣಿಗಲ್ ತುಮಕೂರಿನಲ್ಲೂ ಕೆಲಸ ಬಾಕಿ ಇದೆ. ಶಿರಾ, ತಿಪಟೂರು ಚಿಕ್ಕನಾಯಕನಹಳ್ಳಿಯಲ್ಲಿ ಕಳೆದ ಬಾರಿಗಿಂತ ಉತ್ತಮ ಕೆಲಸವಾಗಿದೆ.
ಕನಕಪುರ 5,390, ಮುಳಬಾಗಿಲಿನಲ್ಲಿ ಮಾಗಡಿ 5,840 ರಾಮನಗರ 4,201 ಪ್ರಕರಣ ಮಿಸ್ಸಿಂಗ್ ರೆಕಾರ್ಡ್ಸ್ ಕಮಿಟಿಗೆ ಹೋಗಿದೆ. ಮಂಗಳೂರು, ಕಡಬ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಅನುಬಂಧ 1ಕ್ಕೂ ಮಿಸ್ಸಿಂಗ್ ರೆಕಾರ್ಡ್ ತಾಳೆಯೇ ಇಲ್ಲ. ತಹಶೀಲ್ದಾರರು ತಮ್ಮ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟೊಂದು ಪ್ರಕರಣಗಳನ್ನ ಮಿಸ್ಸಿಂಗ್ ರೆಕಾರ್ಡ್ಸ್ ಕಮಿಟಿಗೆ ಕಳಿಸುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಸೆಂಬರ್‌ವರೆಗೆ ಗಡುವು
ಹೊಸಕೋಟೆ 580 ಪ್ರಕರಣ ಸರ್ವೇಗೆ ಬಾಕಿ ಇದೆ. ಹೊಳಲ್ಕೆರೆ ಹೊಸದುರ್ಗ ಹೊನ್ನಾಳಿ ಬೇಲೂರು ಚನ್ನಪಟ್ಟಣದಲ್ಲೂ ತುಂಬಾ ಪ್ರಕರಣ ಬಾಕಿ ಇದೆ. ಕೈಗೆ ತೆಗೆದುಕೊಂಡಿರುವ ಪೈಕಿ 20 ಸಾವಿರ ಹಾಗೂ ಇನ್ನೂ ಕೈಗೆ ತೆಗೆದುಕೊಳ್ಳಬೇಕಾದ 25 ಸಾವಿರ ಸೇರಿ ಒಟ್ಟು 45 ಸಾವಿರ ಸರ್ವೇ ನಂಬರ್ ಬಾಕಿ ಇದೆ. ಡಿಸೆಂಬರ್ ಅಂತ್ಯದೊಳಗೆ ಮುಗಿಯುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಡೇಟಾ ಎಂಟ್ರಿಯಿಂದ ತಹಶೀಲ್ದಾರ್ ಅನುಮೋದನೆವರೆಗೆ ಎಲ್ಲವೂ ಡಿಸೆಂಬರ್ ಅಂತ್ಯದೊಳಗೆ ಆಗಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಆಧಾರ್ ಸೀಡಿಂಗ್ ಬಗ್ಗೆಯೂ ಮಾಹಿತಿ ನೀಡಿರುವ ಸಚಿವ ಕೃಷ್ಣಬೈರೇಗೌಡರು, ಆಧಾರ್ ಸೀಡಿಂಗ್ ಹೆಬ್ರಿಯಲ್ಲಿ ಶೇ 46 ರಷ್ಟು ಮಾತ್ರ ಆಗಿದೆ. ಕಾರ್ಕಳದಲ್ಲಿ ಶೇ 78, ಬೆಂಗಳೂರು ದಕ್ಷಿಣದಲ್ಲಿ ಶೇ 75, ಆನೇಕಲ್ ಶೇ 68, ದೇವನಹಳ್ಳಿ ಶೇ 71ರಷ್ಟು ಆಗಿದೆ. ರೈತರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಆಧಾರ್ ಸೀಡಿಂಗ್ ಬಹುಮುಖ್ಯವಾಗಿದ್ದು, ಶೀಘ್ರವೇ ಎಲ್ಲ ತಾಲೂಕುಗಳಲ್ಲೂ ಆಧಾರ್ ಸೀಡಿಂಗ್ ಮುಗಿಸುವಂತೆ ಸೂಚನೆ ನೀಡಿದ್ದಾರೆ.
ಫೋಟೋ ದಾಖಲೆ ಇಲ್ಲದೆ ಪೌತಿ: ಸಚಿವ ಗರಂ
ಇನ್ನು ಪೌತಿ ಅಭಿಯಾನ ಆರಂಭವಾಗಿ ತಕ್ಕ ಮಟ್ಚಿಗೆ ಕೆಲಸ ಆಗುತ್ತಿದೆ. 41,62,000 ಲಕ್ಷ ನಮ್ಮ ಟಾರ್ಗೆಟ್ ಇದೆ. ಇಷ್ಟು ಜಮೀನು ಮೃತರ ಹೆಸರಲ್ಲಿದೆ. ಈ ಪೈಕಿ 2 ಲಕ್ಷ ಪ್ರಕರಣಗಳಲ್ಲಿ ಮೃತರ ಹೆಸರಲ್ಲಿದ್ದ ಜಮೀನನ್ನು ಈಗಿನ ಮಾಲೀಕರ ಹೆಸರಿಗೆ ಬದಲಿಸಲಾಗಿದೆ. ಶೇ. 5ರಷ್ಟು ಕೆಲಸವಷ್ಟೇ ಆಗಿದೆ. ಹುಬ್ಬಳ್ಳಿ, ಧಾರವಾಡ ಜಮಖಂಡಿ, ಶಿರಸಿ, ಕುಂದಗೋಳ, ದಾಂಡೇಲಿ, ಅಣ್ಣಿಗೇರಿ ನವಲಗುಂದದಲ್ಲಿ ಶೇ 25ಕ್ಕಿಂತ ಹೆಚ್ಚು ಆಗಿದೆ. ವಿರಾಜಪೇಟೆ, ಬೈಂದೂರು, ಪೊನ್ನಂಪೇಟೆ, ಮಡಿಕೇರಿ, ಆನೇಕಲ್, ಖಾನಾಪೂರ ಯಳಂದೂರು, ಗೋಕಾಕ್ ತಾಲೂಕಲ್ಲಿ ಶೇ 1ಕ್ಕಿಂತ ಕಡಿಮೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶೇ.1ಕ್ಕಿಂತ ಕಡಿಮೆ ಸಾಧನೆ ಮಾಡಿದ ತಹಶೀಲ್ದಾರರುಗಳ ವಿರುದ್ಧ ಸಚಿವರು ಗರಂ ಆಗಿದ್ದಾರೆ. ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗಡೆ, ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್ ವಿರುದ್ಧ ಸಭೆಯಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ಪೌತಿ ಖಾತೆಗೆ ಫೋಟೋ ದೃಢೀಕರಣ ಬೇಕು. ಅನೇಕ ತಾಲೂಕುಗಳಲ್ಲಿ ಫೋಟೋ ದಾಖಲೆ ಇಲ್ಲದೆ ಪೌತಿ ಖಾತೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆಗಿದ್ದಾರೆ. ಬಯೋಮೆಟ್ರಿಕ್ ಮುಖ ಗುರುತಿಸುವಿಕೆ ನಮ್ಮ ಮುಂದಿನ ಗುರಿ. ಅದಕ್ಕೆ ಪ್ರಸ್ತುತ ಜಮೀನಿನ ವಾರಸುದಾರರ ಫೋಟೋ ಅಗತ್ಯ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದನ್ನೂ ನೋಡಿ: ಬೆಳ್ತಂಗಡಿ| ಮಹಿಳೆಯ ಮನೆ ಮುಟ್ಟುಗೋಲು ಕ್ರಮ ವಾಪಸ್ ಪಡೆಯಲು ಮನವಿ Janashakthi Media
