ಕೃಷಿ ವಲಯದಲ್ಲಿ ಕೇರಳದ ಪರ್ಯಾಯ

ಕೃಷಿ ವಲಯದಲ್ಲಿ ಸರ್ಕಾರದ ಮಧ್ಯಪ್ರವೇಶ ಹಾಗೂ ಕೃಷಿಗೆ ಬೆಂಬಲಗಳನ್ನು ತೊರೆಯುವತ್ತ ನರೇಂದ್ರ ಮೋದಿ ಸರ್ಕಾರವನ್ನು ತಳ್ಳಿದ ನವ-ಉದಾರವಾದಿ ತರ್ಕಕ್ಕೆ ಪರ್ಯಾಯವೊಂದನ್ನು ಕೇರಳವು ದೇಶದ ಮುಂದಿಟ್ಟಿದೆ. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಉಪಸ್ಥಿತಿಯನ್ನು ಹೆಚ್ಚಿಸುವ ಮೂಲಕ ರೈತರಿಗೆ ಲಾಭದಾಯಕ, ಆದರೆ ಸ್ಥಿರವಾದ, ಬೆಲೆಗಳನ್ನು ಹಾಗೂ ಆದಾಯವನ್ನು ದೊರಕಿಸಿಕೊಡುವ ಯತ್ನದ ಈ ಧೋರಣೆಯೇ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ನೀತಿಗಳಿಗೆ ಒಂದು ವಿಶ್ವಾಸಾರ್ಹವಾದ ಪರ್ಯಾಯ ಒದಗಿಸುತ್ತದೆ.

– ದೀಪಕ್ ಜಾನ್ಸನ್* (ಅನುವಾದ : ಟಿ.ಸುರೇಂದ್ರ ರಾವ್)

ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯತ್ತ ಬಹುತೇಕ ಮಾಧ್ಯಮದ ಗಮನ ಹರಿದಿರುವಾಗಲೇ ದೇಶಾದ್ಯಂತ ಕೂಡ ರೈತರಿಂದ ಮತಪ್ರದರ್ಶನ ಹಾಗೂ ಪ್ರತಿಭಟನೆಗಳು ನಡೆದಿವೆ. ಕೇರಳದಲ್ಲಿ ಸಹ ರೈತರೊಂದಿಗೆ ಸೌಹಾರ್ದ ಬೆಂಬಲ ವ್ಯಕ್ತಪಡಿಸುವ ಅಸಂಖ್ಯಾತ ಪ್ರದರ್ಶನಗಳು ನಡೆದಿವೆ. ಕೃಷಿ ಕಾಯಿದೆಗಳು ಸಂವಿಧಾನದ ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತವೆ ಎಂದು ಪ್ರತಿಪಾದಿಸಿರುವ ಕೇರಳ ಎಡರಂಗ ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡುವುದಾಗಿ ಪ್ರಕಟಿಸಿದೆ.

ಕೇರಳ ರಾಜ್ಯವು ಎಪಿಎಂಸಿ ಮಂಡಿಗಳನ್ನು ಹೊಂದಿಲ್ಲದೆ ಇರುವುದರಿಂದ, ರೈತರ ಹೋರಾಟಕ್ಕೆ ಸಾರ್ವಜನಿಕ ಸೌಹಾರ್ದ ಬೆಂಬಲ ವ್ಯಕ್ತಪಡಿಸಿರುವ ಸಂಗತಿಯು ಜನರ ಹುಬ್ಬೇರಿಸಿರಬಹುದು. ಆದರೆ ಕೇರಳ ರೈತರ ಪ್ರತಿಕ್ರಿಯೆಗೆ ಸಾಕಷ್ಟು ಸಮರ್ಪಕ ಕಾರಣಗಳಿವೆ. ಈ ವಿವಾದಿತ ಕೃಷಿ ಕಾಯಿದೆಗಳ ಜಾರಿಯು ಕೇರಳದ ಮೇಲೆ ಯಾವುದೇ ಪರಿಣಾಮ ಬೀರದಿರುವುದು ಸತ್ಯವಾದರೂ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುಸರಿಸುತ್ತಿರುವ ಕೃಷಿ ನೀತಿಗಳಲ್ಲಿನ ಹೆಚ್ಚುತ್ತಿರುವ ಭಿನ್ನತೆಯನ್ನು ಕೇರಳದಲ್ಲಿನ ಪ್ರತಿಕ್ರಿಯೆಯು ಬಿಂಬಿಸುತ್ತದೆ. ಬೆಂಬಲ ಬೆಲೆಯ ವಿಸ್ತರಣೆ ಹಾಗೂ ಕೃಷಿ ಉತ್ಪನ್ನಗಳ ನೇರ ಖರೀದಿ ಖಾತರಿಪಡಿಸುವ ಮೂಲಕ ಕೇರಳ ರಾಜ್ಯ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಕೃಷಿ ನೀತಿಗಳು ಈ ಭಿನ್ನತೆಯ ಸ್ಪಷ್ಟ ನಿದರ್ಶನವಾಗಿದೆ. ಆ ಮೂಲಕ ದೇಶದ ಕೃಷಿ ನೀತಿಗೆ ಒಂದು ನಿರ್ದಿಷ್ಟ ಪರ್ಯಾಯ ಹಾದಿಯನ್ನು ತೋರಿಸಿದೆ.

ಒಟ್ಟು ಬೇಸಾಯದ ಅರ್ಧಕ್ಕಿಂತಲೂ ಹೆಚ್ಚು ಆಹಾರೇತರ ಹಣದ ಬೆಳೆಗಳು ಕೇರಳ ಕೃಷಿಯ ವಿಶೇಷ ಗುಣಲಕ್ಷಣವಾಗಿದೆ. ಕಳೆದ ಎರಡು ದಶಕಗಳಲ್ಲಿ ಅನುಕ್ರಮ ಸರ್ಕಾರಗಳು, ಭಾಗಶಃ ಭತ್ತ ಬೆಳೆಯುವ ಜಮೀನುಗಳನ್ನು ಕಾಪಾಡುವ ಸಲುವಾಗಿ ಕೇರಳದ ಆಹಾರ ಬೆಳೆ ಉತ್ಪಾದನೆ ಉತ್ತಮಪಡಿಸಲು ಗಮನ ಹರಿಸಿವೆ. ಆದರೆ ಈ ನೀತಿ ಹಾಗೆಯೇ ಉದ್ಭವಿಸಿದ್ದಲ್ಲ; ಆಹಾರದ ಬೆಳೆಗೆ, ವಿಶೇಷವಾಗಿ ಭತ್ತದ ಬೆಳೆಗೆ, ಹೆಚ್ಚಾಗುತ್ತಿರುವ ವೆಚ್ಚ ಹಾಗೂ ಕಡಿಮೆ ಲಾಭಾಂಶದ ವಾಸ್ತವವು ಈ ನೀತಿಯನ್ನು ಅನುಸರಿಸಲು ಕಾರಣವಾಯಿತು. ಭತ್ತ ಬೆಳೆಯುವ ಭೂಮಿಯನ್ನು ಸಾಗುವಳಿಯಲ್ಲಿಯೇ ಇರಿಸಲು, ಕೇರಳದಲ್ಲಿ ಕೃಷಿಯನ್ನು ಕಾರ್ಯಸಾಧ್ಯವಾಗಿ ಉಳಿಸುವ ಸಲುವಾಗಿ ಹಲವಾರು ಪ್ರೋತ್ಸಾಹಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಈಗಿನ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿಗೆ ಸಾರ್ವಜನಿಕ ಬೆಂಬಲವನ್ನು ಇನ್ನೂ ಹೆಚ್ಚಿಸಿದೆ.

ಬೆಂಬಲ ಬೆಲೆ

ಭತ್ತ ಬೆಳೆಯುವವರಿಗೆ ಬೆಂಬಲ ಬೆಲೆ ನೀಡುವ ವಿಧಾನವು ಅತ್ಯಂತ ಪ್ರಧಾನವಾದದ್ದು. ಪ್ರಮುಖ ಬೆಳೆಗಳ ಉತ್ಪಾದನೆ/ಸಾಗುವಳಿ ವೆಚ್ಚದ ಅಧ್ಯಯನಕ್ಕಾಗಿ ಸಮಗ್ರ ಯೋಜನೆಯಡಿಯಲ್ಲಿ ಕೇಂದ್ರ ಕೃಷಿ ಸಚಿವಾಲಯವು ಕಾಲಕಾಲಕ್ಕೆ ಸಂಗ್ರಹಿಸಿದ ದತ್ತಾಂಶಗಳು, ಕೇರಳದ ಭತ್ತ ಉತ್ಪಾದನೆಯ ವೆಚ್ಚ (ಎ2 ಎಂದು ಕರೆಯಲಾಗುವ ಪಾವತಿ ಮಾಡಬೇಕಾದ ಎಲ್ಲಾ ಖರ್ಚುಗಳ ಮೊತ್ತ)ವು 2017-18ರ ತ್ರೈವಾರ್ಷಿಕ (2015-16, 2016-17 ಮತ್ತು 2017-18ರ ಕೃಷಿ ವರ್ಷಗಳ ಮೂರು ವರ್ಷಗಳ ಸರಾಸರಿ)ದಲ್ಲಿ ಒಂದು ಕ್ವಿಂಟಾಲಿಗೆ ರೂ.1,311 ಇತ್ತು. ದತ್ತಾಂಶ ಸಂಗ್ರಹಿಸಿದ 18 ರಾಜ್ಯಗಳಲ್ಲಿ ಕೇರಳದ ಉತ್ಪಾದನಾ ವೆಚ್ಚವು ಎರಡನೇ ಅತಿ ಹೆಚ್ಚು ವೆಚ್ಚವಾಗಿದೆ. ಪ್ರಾಸಂಗಿಕವಾಗಿ, ಸಂಶೋಧಕರು ಹಾಗೂ ರೈತ ಸಂಘಟನೆಗಳ ಪ್ರಕಾರ ಸರ್ಕಾರಿ ಅಂಕಿಅAಶಗಳು ಉತ್ಪಾದನಾ ವೆಚ್ಚವನ್ನು ಕಡಿಮೆಯೇ ಅಂದಾಜು ಮಾಡುತ್ತವೆ ಮತ್ತು ರೈತರು ನಿಜವಾಗಿ ಮಾಡುವ ವೆಚ್ಚವು ಅನೇಕ ವೇಳೆ ಸರ್ಕಾರ ವರದಿಮಾಡಿದ ವೆಚ್ಚಕ್ಕಿಂತ ಹೆಚ್ಚೇ ಇರುತ್ತದೆ.

ಕೇರಳದಲ್ಲಿನ ಹೆಚ್ಚಿನ ವೆಚ್ಚಕ್ಕೆ ಅನೇಕ ಅಂಶಗಳು ಕಾರಣವಾಗುತ್ತವೆ, ಅದರಲ್ಲಿ ಮುಖ್ಯವಾದದ್ದು ಮಾನವ ಶ್ರಮದ (ಕೂಲಿಯ) ವೆಚ್ಚವು ಹೆಚ್ಚಾಗಿರುವುದು; ಅದು ಈಗಲೂ ಸಾಗುವಳಿಯ ವೆಚ್ಚದ ಬಹು ಮುಖ್ಯವಾದ ಅಂಶವಾಗಿದೆ. ಹೆಚ್ಚಿನ ಉತ್ಪಾದನಾ ವೆಚ್ಚಗಳು ಹಾಗೂ ಕೇರಳದಲ್ಲಿನ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ನೀಡುವ ರಾಷ್ಟ್ರೀಯವಾಗಿ ಘೋಷಿಸುವ ಕನಿಷ್ಠ ಬೆಂಬಲ ಬೆಲೆಯ ಅಸಮರ್ಪಕತೆಯಿಂದಾಗಿ, ಕೇಂದ್ರ ಸರ್ಕಾರವು ನಿಗದಿಪಡಿಸುವ ಎಂಎಸ್‌ಪಿ ಗಿಂತಲೂ ಹೆಚ್ಚು ಪ್ರೋತ್ಸಾಹಕ ಬೋನಸ್ಸನ್ನು ಕೇರಳ ಸರ್ಕಾರವು ಸತತವಾಗಿ ನೀಡುತ್ತಿದೆ. ಈಗ ಸದ್ಯ, ಕೇರಳ ಸರ್ಕಾರ ನೀಡುತ್ತಿರುವ ಬೋನಸ್ ಕೇಂದ್ರ ಸರ್ಕಾರ ನಿಗದಿಮಾಡಿದ ಮೊತ್ತದ ಅರ್ಧದಷ್ಟಿದೆ.

ಭತ್ತದ ಸರಾಸರಿ ಉತ್ಪಾದನಾ ವೆಚ್ಚವು 2017-18 ರಲ್ಲಿ ಒಂದು ಕ್ವಿಂಟಾಲಿಗೆ ರೂ.1,616 ಇತ್ತು, ಇದು ಸರ್ಕಾರಿ ದತ್ತಾಂಶ ಲಭ್ಯವಿರುವ ಇತ್ತೀಚಿನ ವರ್ಷದ ವೆಚ್ಚ. 2017-18 ರಲ್ಲಿ ಘೋಷಿಸಿದ ಎಂ.ಎಸ್‌.ಪಿ.ಯು ಒಂದು ಕ್ವಿಂಟಾಲಿಗೆ ರೂ.1,550 ಆಗಿದೆ, ಅದು ಸ್ಪಷ್ಟವಾಗಿ ಕೇರಳದಲ್ಲಿನ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯೆ. ಆದರೆ, ಕೇರಳ ಸರ್ಕಾರ ಘೋಷಿಸಿದ ಒಂದು ಕ್ವಿಂಟಾಲಿಗೆ ರೂ.780 ಬೋನಸ್‌ನಿಂದಾಗಿ, ಕೇರಳದಲ್ಲಿನ ಭತ್ತದ ಬೆಳೆಗಾರನು ಒಂದು ಕ್ವಿಂಟಾಲ್‌ನ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 44 ರಷ್ಟು ಪ್ರತಿಫಲವನ್ನು ಗಳಿಸುತ್ತಾನೆ. ಕಳೆದ ಎರಡು ವರ್ಷಗಳಲ್ಲಿ, ಕೇರಳವು ವಾರ್ಷಿಕವಾಗಿ ಭತ್ತದ ಒಟ್ಟು ಉತ್ಪಾದನೆಯ ಶೇಕಡಾ 80 ರಷ್ಟನ್ನು ವಿಕೇಂದ್ರೀಕೃತ ಖರೀದಿಯ ಯೋಜನೆಯಡಿಯಲ್ಲಿ ಖರೀದಿಸುತ್ತಿದೆ. ಅಂದರೆ ಒಂದು ವರ್ಷಕ್ಕೆ ಸರಿಸುಮಾರು ಏಳು ಲಕ್ಷ ಟನ್ ಭತ್ತವನ್ನು ಖರೀದಿಸುತ್ತಿದೆ. ಅದಕ್ಕೆ ಪ್ರತಿಯಾಗಿ, ಭಾರತದಲ್ಲಿ ದೇಶದ ಕೇವಲ ಮೂರನೇ ಒಂದರಷ್ಟು ಒಟ್ಟು ಭತ್ತದ ಉತ್ಪಾದನೆಯನ್ನು ಮಾಡುವ ಪಂಜಾಬ್, ಹರ‍್ಯಾಣ ಹಾಗೂ ಆಂಧ್ರಪ್ರದೇಶಗಳAತಹ ಮೂರು ರಾಜ್ಯಗಳಿಂದ, ಮಾತ್ರವೇ ಬಹುಪಾಲು ಸರಕಾರಿ ಖರೀದಿ ನಡೆಸಲಾಗುತ್ತಿದೆ.

ಕೇರಳದ ಕೃಷಿ ಉತ್ಪನ್ನಕ್ಕೆ ನೀಡುವ ಬೆಂಬಲವು ಭತ್ತಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ಸರ್ಕಾರವು ಇತ್ತೀಚೆಗೆ 16 ತರಕಾರಿಗಳಿಗೆ ಎಂಎಸ್‌ಪಿ ಸೌಲಭ್ಯವನ್ನು ವಿಸ್ತರಿಸಿದೆ, ಇದು ಭಾರತದಲ್ಲೇ ಮೊದಲ ಅಂತಹ ನೀತಿಯಾಗಿದೆ. ಸರ್ಕಾರದ ಮಧ್ಯಪ್ರವೇಶ ನೀತಿಯಲ್ಲಿ ಎದ್ದು ಕಾಣುವುದೇನೆಂದರೆ ಕೃಷಿ ಮಾರುಕಟ್ಟೆಯಲ್ಲಿ ಅದು ಮಧ್ಯಪ್ರವೇಶ ಮಾಡುವ ವಿಧಾನ. ಕೇರಳ ರಾಜ್ಯ ನಾಗರಿಕ ಪೂರೈಕೆ ನಿಗಮವು (ಕೇರಳ ಸ್ಟೇಟ್ ಸಿವಿಲ್ ಸಪ್ಲೈಸ್ ಕಾರ್ಪೊರೇಷನ್ – ಸಪ್ಲೈಕೊ SUPPLYCO), ವಿವಿಧ ಸಹಕಾರಿ ಸಂಸ್ಥೆಗಳು ಹಾಗೂ ಸ್ವಯಮಾಡಳಿತ ಸಂಸ್ಥೆಗಳೊಂದಿಗೆ, ಭತ್ತದ ಖರೀದಿಗೆ ಅನುಕೂಲ ಮಾಡಿಕೊಡುತ್ತದೆ. ಇದು ಕೃಷಿ ಉತ್ಪನ್ನ ಖರೀದಿಯ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಹಿಗ್ಗಿಸುತ್ತದೆ, ಜತೆಯಲ್ಲೇ ವ್ಯವಸ್ಥೆಯನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿ ಮಾಡುತ್ತದೆ ಹಾಗೂ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ. ಮುಂಬರುವ ಮಾರಾಟದ ಋತುವಿನಲ್ಲಿ ಭತ್ತವನ್ನು ನೇರವಾಗಿ ಖರೀದಿಸಲು ಸಹಕಾರಿಗಳನ್ನು ಇನ್ನಷ್ಟು ಸಬಲೀಕರಣಗೊಳಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಯೋಜಿಸಿದೆ. ಅದೇ ರೀತಿಯಲ್ಲಿ, ರೈತರ ಸ್ವಸಹಾಯ ಗುಂಪುಗಳು ಸ್ಥಾಪಿಸಿರುವ ಮಾರುಕಟ್ಟೆಗಳನ್ನೂ ಒಳಗೊಂಡಂತೆ, ಸಹಕಾರಿ ಸಂಸ್ಥೆಗಳ ಬಲಿಷ್ಠ ಜಾಲದ ಸಹಾಯದೊಂದಿಗೆ ನೂತನವಾಗಿ ಪ್ರಕಟಿಸಿರುವ ತರಕಾರಿಗಳಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸಲೂ ಯೋಜಿಸಲಾಗಿದೆ.

ಕೇರಳ ಸರ್ಕಾರ ಘೋಷಿಸಿದ ಒಂದು ಕ್ವಿಂಟಾಲಿಗೆ ರೂ.780 ಬೋನಸ್‌ನಿಂದಾಗಿ, ಕೇರಳದಲ್ಲಿನ ಭತ್ತದ ಬೆಳೆಗಾರನು ಒಂದು ಕ್ವಿಂಟಾಲ್‌ನ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 44 ರಷ್ಟು ಪ್ರತಿಫಲವನ್ನು ಗಳಿಸುತ್ತಾನೆ. ಕಳೆದ ಎರಡು ವರ್ಷಗಳಲ್ಲಿ, ಕೇರಳವು ವಾರ್ಷಿಕವಾಗಿ ಭತ್ತದ ಒಟ್ಟು ಉತ್ಪಾದನೆಯ ಶೇಕಡಾ 80 ರಷ್ಟನ್ನು ವಿಕೇಂದ್ರೀಕೃತ ಖರೀದಿಯ ಯೋಜನೆಯಡಿಯಲ್ಲಿ ಖರೀದಿಸುತ್ತಿದೆ.

ಬೇಸಾಯದ ಅಂತಃಶಕ್ತಿಯ ಸಂರಕ್ಷಣೆ 

ಕೃಷಿಯಲ್ಲಿ ಕೇರಳದ ಈ ಮಧ್ಯಪ್ರವೇಶವು ಈ ಎರಡು ನೀತಿಗಳಿಗೆ ಸೀಮಿತವಾಗಿಲ್ಲ ಎನ್ನುವುದನ್ನು ಗಮನಿಸಬೇಕು. ಕೃಷಿಯಲ್ಲಿ ಉತ್ಪಾದಕತೆ ಹಾಗೂ ಲಾಭ ಗಳಿಕೆಯ ಸಾಮರ್ಥ್ಯ ಇನ್ನೂ ಹೆಚ್ಚಿಸುವಲ್ಲಿ ಸವಾಲುಗಳನ್ನು ಎದುರಿಸಬೇಕಿದೆ. ಆದರೆ, ಕೃಷಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಮೂಲಕ ಖಾಸಗಿ ವಲಯದವರಿಗೆ ಮಾರುಕಟ್ಟೆಯನ್ನು ತೆರೆದಿಡುವ ಕೇಂದ್ರ ಸರ್ಕಾರದ ನೀತಿಗೆ ತದ್ವಿರುದ್ಧವಾದ ಹಾದಿಯಲ್ಲಿ ಹೋಗುವ ಪ್ರಯತ್ನವನ್ನು ಕೇರಳ ಮಾಡುತ್ತಿದೆ. ಸಮಗ್ರವಾದ ಧೋರಣೆಯನ್ನು ಅನುಸರಿಸುತ್ತಿರುವ ಕಲವು ರಾಜ್ಯಗಳಲ್ಲಿ ಕೇರಳವೂ ಒಂದಾಗಿದೆ: ಭಾರತದ ಪ್ರಖ್ಯಾತ ಕೃಷಿ ತಜ್ಞರಾಗಿರುವ ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ರೈತರ ಕುರಿತ ರಾಷ್ಟ್ರೀಯ ಆಯೋಗದ ಶಿಫಾರಸುಗಳನ್ನು ನೈಜವಾಗಿ ಅಳವಡಿಸಲು ಪ್ರಯತ್ನ ಮಾಡುತ್ತಿದೆ. ಹೊಸ ಮಾರುಕಟ್ಟೆ ಪ್ರಾಂಗಣಗಳು ಹಾಗೂ ಖರೀದಿ ಕೇಂದ್ರಗಳಲ್ಲಿ ಹಣ ಹೂಡುವ ಮೂಲಕ ಗ್ರಾಮೀಣ ಮಾರುಕಟ್ಟೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಒಟ್ಟಾರೆ ಧ್ಯೇಯವನ್ನು ಕೇರಳ ಹೊಂದಿದೆ.

ಮಾರುಕಟ್ಟೆಯ ವಲಯದಲ್ಲಿ ಮಧ್ಯವರ್ತಿಗಳಿಗೆ ಯಾವುದೇ ಅವಕಾಶ ನೀಡದಿರುವುದು ಕೇರಳದ ನೀತಿನಿರೂಪಣೆಗಳ ಬಹು ಉಜ್ವಲ ಅಂಶ. ಇದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಕೃಷಿ ಶಾಸನದ ಸಮರ್ಥನೆಗಾಗಿ ಪದೇ ಪದೇ ನೀಡುತ್ತಿರುವ – ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳನ್ನು ಹೊರದಬ್ಬುತ್ತದೆ ಎನ್ನುವುದೇ ಅದರ ಬಹು ಮುಖ್ಯ ಪ್ರಯೋಜನ ಎಂಬ – ಹೇಳಿಕೆಯನ್ನು ನೇರವಾಗಿ ಅಲ್ಲಗಳೆಯುತ್ತದೆ. ಬದಲಾಗಿ, ದೊಡ್ಡ ಸಂಖ್ಯೆಯ ಅಂಚಿನಲ್ಲಿರುವ ಹಾಗೂ ಸಣ್ಣ ಸಾಗುವಳಿದಾರರ ನಡುವೆ ಸಮನ್ವಯತೆ ಸಾಧಿಸಲು ರೈತರ ಸಹಕಾರಿ ಸಂಸ್ಥೆಗಳನ್ನು ಸರ್ಕಾರಿ ಬೆಂಬಲದೊAದಿಗೆ ಸಬಲೀಕರಣಗೊಳಿಸುವುದೇ ಕೇರಳದ ಧೋರಣೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಉಪಸ್ಥಿತಿಯನ್ನು ಹೆಚ್ಚಿಸುವ ಮೂಲಕ ರೈತರಿಗೆ ಲಾಭದಾಯಕ, ಆದರೆ ಸ್ಥಿರವಾದ, ಬೆಲೆಗಳನ್ನು ಹಾಗೂ ಆದಾಯವನ್ನು ದೊರಕಿಸಿಕೊಡುವ ಯತ್ನದ ಈ ಧೋರಣೆಯೇ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ನೀತಿಗಳಿಗೆ ಒಂದು ವಿಶ್ವಾಸಾರ್ಹವಾದ ಪರ್ಯಾಯ ಒದಗಿಸುತ್ತದೆ. ನಿಜ ಹೇಳಬೇಕೆಂದರೆ, ಭಾರತದ ದೀರ್ಘ ಹಾಗೂ ಆಳವಾದ ಕಾರ್ಷಿಕ ಬಿಕ್ಕಟ್ಟಿಗೆ ಒಂದು ಸ್ಥಿರವಾದ ಪರಿಹಾರವನ್ನು ಇಂತಹ ಒಂದು ದಾರಿಯೇ ನೀಡಬಲ್ಲುದು ಎಂದು ಕೇಂದ್ರ ಸರ್ಕಾರದ ಹಲವಾರು ಪರಿಣಿತರುಗಳೇ ಸತತವಾಗಿ ಶಿಫಾರಸುಗಳನ್ನು ಮಾಡಿದ್ದಾರೆ !

ಕೃಪೆ : ಫ್ರಂಟ್ ಲೈನ್ ಪಾಕ್ಷಿಕ ಪತ್ರಿಕೆ

* ದೀಪಕ್ ಜಾನ್ಸನ್ ಅವರು ಬೆಂಗಳೂರಿನ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಎಕನಾಮಿಕ್ ಅನಲಿಸಿಸ್ ಯೂನಿಟ್‌ನಲ್ಲಿ ಸಂಶೋಧಕರಾಗಿದ್ದಾರೆ.

 

 

 

Donate Janashakthi Media

Leave a Reply

Your email address will not be published. Required fields are marked *