ಒಂದು ಕಡೆ ಲಾಠಿ, ಜಲಫಿರಂಗಿ, ಅಶ್ರುವಾಯು ಗಳಿಂದ ಹಲ್ಲೆ; ಇನ್ನೊಂದು ಕಡೆ ‘ಖಲಿಸ್ತಾನಿ’, ‘ಭಯೋತ್ಪಾದಕ’ ‘ದೇಶದ್ರೋಹಿ’ ‘ವಿರೋಧ ಪಕ್ಷಗಳ ಪ್ರಚಾರ ನಂಬಿದ ದಡ್ಡರು’ ಎಂದೆಲ್ಲ ಆಪಾದನೆಗಳ ದಾಳಿಗಳು. ಸರಕಾರದ ಇವೆರಡೂ ಜೋಡಿತಂತ್ರಗಳು ಅಭೂತಪೂರ್ವ ಅಗಾಧ ರೈತರ ಚಳುವಳಿ ಮತ್ತು ಅವರ ದೃಢ ನಿಶ್ಚಯ, ಐಕ್ಯತೆ ಗಳನ್ನು ಮುರಿಯಲು ಸೋತಿದೆ. ಜೊತೆಗೆ ಬಿಜೆಪಿ ಪಕ್ಷ ಮತ್ತು ಸರಕಾರ ಹಾಗೂ ಅದರ ಕೃಪಾಪೋಷಿತ ಮಾಧ್ಯಮಗಳು ಕೃಷಿ ಕಾನೂನುಗಳು ರೈತರಿಗೆ ‘ಎಷ್ಟು ಒಳ್ಳೆಯವು’ ಎಂದು ನಂಬಿಸಲು ಭಾರೀ ಪ್ರಚಾರ ಆರಂಭಿಸಿವೆ. ರೈತರ ಚಳುವಳಿ ಆರಂಭವಾದಾಗಿನಿಂದ ಇವನ್ನು ಹೇಳಲಾಗುತ್ತಿದ್ದು, ಈಗ ಅದರ ಪ್ರಚಾರ ತೀವ್ರವಾಗಿದೆ. ಇಂತಹ ಎಂಟು ಬುರುಡೆಗಳು ಮತ್ತು ವಾಸ್ತವಗಳನ್ನು ಮುಂದೆ ಕೊಡಲಾಗಿದೆ.
ಬುರುಡೆ 1 : ದೇಶದಲ್ಲಿ ರೈತರು ತಮ್ಮ ಬೆಳೆಗಳನ್ನು ಕೃಷಿ ಮಂಡಿ (ಎ.ಪಿ.ಎಂ.ಸಿ) ಮಾರುಕಟ್ಟೆಗಳ ಹೊರಗೆ ಮಾರಲು ಸ್ವತಂತ್ರರಾಗಿರಲಿಲ್ಲ. ಹೊಸ ಕೃಷಿ ಕಾನೂನುಗಳು ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ತಮ್ಮ ಬೆಳೆಗಳ ಮಾರಾಟ ಮಾಡಲು ರೈತರಿಗೆ ಸ್ವಾತಂತ್ರ್ಯ ಕೊಟ್ಟು ಅವರಿಗೆ ಒಳ್ಳೆಯ ಬೆಲೆ ಸಿಗಲು ನೆರವಾಗುತ್ತವೆ.
ವಾಸ್ತವ1 : ಕೃಷಿ ಉತ್ಪನ್ನಗಳ ಬಹುಭಾಗ ಈಗಲೂ ಮಂಡಿಗಳ ಹೊರಗೇನೆ ಮಾರಾಟವಾಗುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರವೇ, ಭತ್ತದ ಶೇ. 29 ಮತ್ತು ಗೋದಿಯ ಶೇ. 44 ರಷ್ಟು ಮಾತ್ರ ಮಂಡಿಗಳಲ್ಲಿ ಮಾರಾಟವಾಗುತ್ತದೆ. ಭತ್ತದ ಶೇ. 49 ಮತ್ತು ಗೋದಿಯ ಶೇ. 36 ರಷ್ಟು ಸ್ಥಳೀಯ ಖಾಸಗಿ ವ್ಯಾಪಾರಿ ಅಥವಾ ಕೃಷಿ ಲಾಗುವಾಡುಗಳ ಮಾರಾಟಗಾರ ಖರೀದಿ ಮಾಡುತ್ತಾನೆ. ಸರಕಾರದ ಸಮೀಕ್ಷೆಯ ಪ್ರಕಾರವೇ, ಅದರಲ್ಲಿ ಒಳಗೊಂಡ 31 ಬೆಳೆಗಳಲ್ಲಿ 29ರಲ್ಲಿ ಸ್ಥಳೀಯ ಖಾಸಗಿ ವ್ಯಾಪಾರಿಯೇ ಅತಿ ದೊಡ್ಡ ಖರೀದಿದಾರ.
ಬುರುಡೆ 2: ದಕ್ಷತೆಯಿಲ್ಲದ ಮಧ್ಯವರ್ತಿಗಳು ಮತ್ತು ನಿಯಮಿತ ಕೃಷಿ ಮಾರುಕಟ್ಟೆಗಳು ಕೃಷಿ ವ್ಯಾಪಾರದ ಏಕಸ್ವಾಮ್ಯ ಪಡೆದಿವೆ. ಇದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ.
ವಾಸ್ತವ 2: ಈಗಾಗಲೇ 18 ರಾಜ್ಯಗಳು ಎ.ಪಿ.ಎಂ.ಸಿ ಯ ಹೊರಗೆ ಖಾಸಗಿ ಮಂಡಿಗಳ ಸ್ಥಾಪನೆಗೆ ಮತ್ತು 19 ರಾಜ್ಯಗಳು ರೈತರಿಂದ ಕೃಷಿ ಉತ್ಪನ್ನಗಳ ನೇರ ಖರೀದಿಗೆ ಅವಕಾಶ ನೀಡಿವೆ.
ರಾಷ್ಟ್ರೀಯ ಕೃಷಿ ಆಯೋಗ ಪ್ರತಿ ರೈತ ತನ್ನ ಎತ್ತಿನ ಗಾಡಿಯಲ್ಲಿ ಒಂದು ಗಂಟೆಯಲ್ಲಿ ಕೃಷಿ ಮಂಡಿಯನ್ನು ಮುಟ್ಟಬೇಕು ಎಂದು ಶಿಫಾರಸು ಮಾಡಿದೆ. ಇದು ಸಾಧ್ಯವಾಗಲು 80 ಚದರ ಕಿ.ಮಿ ಗೆ ಒಂದು ಮಂಡಿ ಇರಬೇಕು ಮತ್ತು ಒಟ್ಟು ಸುಮಾರು 41 ಸಾವಿರ ಮಂಡಿಗಳು ಬೇಕು. ಆದರೆ 2019ರ ಅಂಕೆಸಂಖ್ಯೆಗಳ ಪ್ರಕಾರ ಕೇವಲ 6630 ಮಂಡಿಗಳಿವೆ ಮತ್ತು 463 ಚದರ ಕಿ.ಮಿ ಗೆ ಒಂದು ಮಂಡಿಯಿದೆ ಅಷ್ಟೇ. ಮಂಡಿಗಳ ಏಕಸ್ವಾಮ್ಯವಂತೂ ಖಂಡಿತ ಇಲ್ಲ. ಮಂಡಿ ದೂರವಿದ್ದರೆ ರೈತ ಇಷ್ಟವಿಲ್ಲದಿದ್ದರೂ ಖಾಸಗಿ ವ್ಯಾಪಾರಿಗೆ ಅವನು ಕೇಳಿದ ಬೆಲೆಗೆ ತನ್ನ ಬೆಳೆಯನ್ನು ಮಾರಾಟ ಮಾಡಬೇಕಾಗುತ್ತದೆ. ಮಂಡಿಗಳಿದ್ದರೆ ಖಾಸಗಿ ವ್ಯಾಪಾರಿ ಮತ್ತು ಮಂಡಿಯ ನಡುವೆ ಪೈಪೋಟಿ ಇದ್ದು ರೈತನಿಗೆ ಒಳ್ಳೆಯ ಬೆಲೆ ಸಿಗುವ ಸಾಧ್ಯತೆ ಹೆಚ್ಚು. ಆದರೆ ಸಾಕಷ್ಟು ಮಂಡಿಗಳ ಅಭಾವದಿಂದ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ.
ಬುರುಡೆ 3: ಸರಕಾರಿ ಖರೀದಿಯ ಮುಂದುವರಿಕೆಗೆ ಈ ಮೂರು ಕೃಷಿ ಕಾನೂನುಗಳು ಯಾವ ರೀತಿಯಲ್ಲೂ ಧಕ್ಕೆ ತರುವುದಿಲ್ಲ. ಈ ಕಾನೂನುಗಳಿಂದಾಗಿ ಬರುವ ಮುಕ್ತ ಮಾರುಕಟ್ಟೆ ವ್ಯವಸ‍್ಥೆ ರೈತನಿಗೆ ಯಾವುದೇ ಖರೀದಿದಾರನಿಗೆ ಮಾರಲು ಸ್ವಾತಂತ್ರ್ಯ ನೀಡುತ್ತದೆ
ವಾಸ್ತವ 3 : ಮುಕ್ತ ಮಾರುಕಟ್ಟೆ ವ್ಯವಸ‍್ಥೆ ಬಂದ ಮೇಲೆ ಏನಾಗುತ್ತದೆ ಎಂಬುದನ್ನು ಬಿಹಾರದ ಅನುಭವ ತೋರಿಸುತ್ತದೆ. ಬಿಹಾರ 2006ರಲ್ಲೇ ಎ.ಪಿ.ಎಂ.ಸಿ ಗಳನ್ನು ರದ್ದು ಮಾಡಿತು. ಕೇಂದ್ರ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಅಧಿಕೃತ ಅಂಕೆಸಂಖ್ಯೆಗಳ ಪ್ರಕಾರ ಅದರ ನಂತರ ಸರಕಾರಿ ಏಜೆನ್ಸಿಗಳು ಕೇವಲ ಶೇ. 20 ಭತ್ತ ಖರೀದಿ ಮಾಡಿವೆ ಮತ್ತು ಗೋದಿ ಖರೀದಿ ನಿಂತೇ ಹೋಗಿದೆ. ಸರಕಾರ ನಡೆಸುವ ಆಹಾರಧಾನ್ಯ ಖರೀದಿ ಕೇಂದ್ರಗಳ ಸಂಖ್ಯೆ 2015-16ರಲ್ಲಿ 9 ಸಾವಿರ ಇದ್ದಿದ್ದು, 2019-20ರಲ್ಲಿ 1619ಕ್ಕೆ ಕುಸಿದಿದೆ. ಮೂರು ಕೃಷಿ ಕಾನೂನುಗಳ ಜಾರಿ ನಂತರ ದೇಶದಾದ್ಯಂತ ಸರಕಾರಿ ಖರೀದಿ ಕುಸಿಯುತ್ತದೆ ಅಥವಾ ನಿಂತೇ ಹೋಗುವುದು ಖಚಿತ.
ಬುರುಡೆ 4 : ಹೊಸ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡುವುದಿಲ್ಲ. ಖಾಸಗಿ ಮಾರುಕಟ್ಟೆಗಳಲ್ಲಿ ಅದಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಲು ರೈತರು ಸ್ವತಂತ್ರರಾಗಿರುತ್ತಾರೆ.
ವಾಸ್ತವ 4 : ರಿಸರ್ವ್ ಬ್ಯಾಂಕ್ 2018ರಲ್ಲಿ ನಡೆಸಿದ ರೈತರು ಮತ್ತು ವ್ಯಾಪಾರಿಗಳ ಸಮೀಕ್ಷೆಯಲ್ಲಿ ಶೇ 50 ಕ್ಕಿಂತಲೂ ಹೆಚ್ಚು ರೈತರು ಕನಿಷ್ಠ ಬೆಂಬಲ ಬೆಲೆ ರೈತರಿಗೆ ಅತ್ಯಂತ ಹೆಚ್ಚು ಅನುಕೂಲಕರವಾದ ಯೋಜನೆ ಎಂದು ಹೇಳಿದ್ದರು. ಈ ಕೃಷಿ ಕಾನೂನುಗಳು ಎಲ್ಲೂ ವ್ಯಾಪಾರಿ ಅಥವಾ ಕೃಷಿ ಕಂಪನಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುವಂತಿಲ್ಲ ಎಂದು ಹೇಳುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ಬರಿಯ ಕಾಗದದ ಮೇಲಿರುತ್ತದೆ ಅಷ್ಟೇ. ಇಲ್ಲೂ ಅಷ್ಟೇ ಬಿಹಾರದ ಅನುಭವ ಏನಾಗಲಿದೆ ಎಂಬುದನ್ನು ಈಗಾಗಲೆ ತೋರಿಸಿದೆ. 2019-20ರಲ್ಲಿ ಭತ್ತಕ್ಕೆ ಕ್ವಿಂಟಾಲಿಗೆ ರೂ.1815 ಕನಿಷ್ಠ ಬೆಂಬಲ ಬೆಲೆ ಎಂದು ನಿಗದಿ ಮಾಡಲಾಗಿತ್ತು. ಆದರೆ ಬಿಹಾರಿನ ರೈತರಿಗೆ ವ್ಯಾಪಾರಿಗಳಿಂದ ಸಿಕ್ಕಿದ ಬೆಲೆ ರೂ. 1350-1400 ಆಗಿತ್ತು. ಗೋದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲಿಗೆ ರೂ. 1925 ಎಂದು ನಿಗದಿ ಮಾಡಲಾಗಿತ್ತು, ಆದರೆ ಬಿಹಾರದಲ್ಲಿ ರೂ. 1800 ಕ್ಕಿಂತಲೂ ಕಡಿಮೆ ಬೆಲೆಗೆ ರೈತರು ಮಾರಬೇಕಾಯಿತು. ಜೋಳಕ್ಕೆ ಕ್ವಿಂಟಾಲಿಗೆ ರೂ. 1815 ಕನಿಷ್ಠ ಬೆಂಬಲ ಬೆಲೆ ಎಂದು ನಿಗದಿ ಮಾಡಲಾಗಿತ್ತು. ಆದರೆ ಬಿಹಾರಿನ ರೈತರಿಗೆ ವ್ಯಾಪಾರಿಗಳಿಂದ ಸಿಕ್ಕಿದ ಬೆಲೆ ಬರಿಯ ರೂ. 1000-1300 ಆಗಿತ್ತು. ಇದು ಎ.ಪಿ.ಎಂ.ಸಿ ವ್ಯವಸ್ಥೆ ವ್ಯಾಪಕವಾಗಿ ಸರಕಾರಿ ಖರೀದಿ ಗಮನಾರ್ಹವಾಗಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ ಬಹಳ ಕಡಿಮೆ.
ಬುರುಡೆ 5 : ಹೊಸ ಕೃಷಿ ಕಾನೂನುಗಳು ಜಾರಿಯಾದ ನಂತರ ಖಾಸಗಿ ಕಂಪನಿಗಳು ಹೂಡಿಕೆ ಮಾಡಿ ಸಗಟು ಮಾರುಕಟ್ಟೆಗಳು ಮತ್ತು ಶೈತ್ಯಾಗಾರಗಳ ಸರಣಿಯ ಮೂಲಸೌಕರ್ಯವನ್ನು ಸ್ಥಾಪಿಸುವವು.
ವಾಸ್ತವ 5 : ಮತ್ತೆ ಬಿಹಾರದ ಅನುಭವವನ್ನು ನೋಡಿದರೆ ಇದು ಯಾವುದೂ ಆಗಿಲ್ಲವೆಂದು ಸರಕಾರದ ಕೃಷಿ ಮಾರುಕಟ್ಟೆಯ ರಾಷ್ಟ್ರೀಯ ಸಂಸ್ಥೆಯ ಅಧ್ಯಯನವೇ ಹೇಳುತ್ತದೆ. ನಿಯಮಿತ ಮಾರುಕಟ್ಟೆಯಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬದಲಾಯಿಸುವುದರ ಉದ್ದೇಶ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಿಸಿ ರೈತರಿಗೆ ಅನುಕೂಲಕರ ಮತ್ತು ಸುಗಮವಾಗಿಸುವುದು ಆಗಿತ್ತು. ಆದರೆ ವಾಸ್ತವದಲ್ಲಿ ಅದು ಕೃಷಿ ಮಾರುಕಟ್ಟೆ ವ್ಯವಹಾರಗಳ ಮೇಲುಸ್ತುವಾರಿ ಮಾಡುವ ಸಾಂಸ್ಥಿಕ ರಚನೆಯಲ್ಲಿ ನಿರ್ವಾತ ಮೂಡಿಸಿದೆ. ಸಣ್ಣ ರೈತರಿಗೆ ಈಗಿನ ವ್ಯಾಪಾರಿಯ ಯಜಮಾನಿಕೆಯಲ್ಲಿರುವ ಮಾರುಕಟ್ಟೆ ವ್ಯವಸ್ಥೆಗೆ ಬದಲಿ ಕೊಡುವುದರಲ್ಲಿ ವಿಫಲವಾಗಿದೆ. ಶೈತ್ಯಾಗಾರ ಸರಣಿಗಳ ಸ್ಥಾಪನೆ ಮುಂತಾದ ಮೂಲಸೌಕರ್ಯ ಸ್ಥಾಪನೆಯಾಗಲಿ ಇತರ ಹೂಡಿಕೆಯಾಗಲಿ ಆಗಿಲ್ಲ ಎಂದಿದೆ ಆ ಅಧ್ಯಯನ.
ಬುರುಡೆ 6 : ಹೊಸ ಕೃಷಿ ಕಾನೂನುಗಳು ಸ್ಥಾಪಿಸಲಿರುವ ಮುಕ್ತ ಮಾರುಕಟ್ಟೆ ಆಧಾರಿತ ಕೃಷಿ ವ್ಯಾಪಾರ ವ್ಯವಸ್ಥೆಯು ಕೃಷಿ ಅಭಿವೃದ್ಧಿ ದರವನ್ನು ಹೆಚ್ಚಿಸಲಿದೆ.
ವಾಸ್ತವ 6 : ಬಿಹಾರದ ಅನುಭವ ಮತ್ತೆ ಈ ಪೂರ್ವಕಲ್ಪನೆಯು ಸರಕಾರದ ಅಂಕಿ ಅಂಶಗಳೇ ಸುಳ್ಳು ಎಂದು ಸಾಬೀತು ಮಾಡುತ್ತದೆ. ಎ.ಪಿ.ಎಂ.ಸಿ ಮುಚ್ಚಿ ಇಂತಹ ವ್ಯವಸ್ಥೆ ಜಾರಿಗೆ ತಂದ ಹಲವು ವರ್ಷಗಳ ನಂತರ ಕೃಷಿ ಅಭಿವೃದ್ಧಿ ದರ ಕುಸಿಯುತ್ತಲಿದೆ. 2012-13 ರಿಂದ 2016-17 ವರೆಗಿನ ಅವಧಿಯಲ್ಲಿ ವಾರ್ಷಿಕ ಕೃಷಿ ಅಭಿವೃದ್ಧಿ ದರ ಶೇ. 1.3ಕ್ಕೆ ಕುಸಿದಿದೆ. 2008-09 ರಿಂದ 2011-12 ವರೆಗಿನ ಅವಧಿಯಲ್ಲಿ ಈ ದರ ಶೇ. 3 ಇತ್ತು. ಇದನ್ನು ನವೆಂಬರ್ 2019ರಲ್ಲಿ ಪ್ರಕಟವಾದ ರಾಷ್ಟ್ರೀಯ ಅನ್ವಯ ಆರ್ಥಿಕ ಸಂಶೋಧನಾ ಮಂಡಳಿ (ಎನ್.ಸಿ.ಎ,ಇ.ಆರ್) ವರದಿಯಲ್ಲಿ ದಾಖಲಿಸಲಾಗಿದೆ.
ಬುರುಡೆ 7 : ಕೃಷಿ ಮಂಡಿ (ಎ.ಪಿ.ಎಂ.ಸಿ) ಗಳು ಕೃತಕವಾಗಿ ರೈತರಿಗೆ ಸಿಗುವ ಬೆಲೆಗಳನ್ನು ಕಡಿಮೆ ಮಾಡುತ್ತವೆ. ಕಾರ್ಪೊರೆಟ್ ಕಂಪನಿಗಳಿಗೆ ಕೃಷಿ ವ್ಯಾಪಾರದಲ್ಲಿ ಅವಕಾಶ ಕೊಟ್ಟರೆ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಈ ತರ್ಕದ ಮೇಲೆ ಹೊಸ ಕೃಷಿ ಕಾನೂನುಗಳ ಮೂಲಕ ಎ.ಪಿ.ಎಂ.ಸಿ ವ್ಯವಸ್ಥೆ ರದ್ದು ಮಾಡಲಾಗಿದೆ.
ವಾಸ್ತವ 7 : ಬೀಜ, ಕೀಟನಾಶಕ ಮುಂತಾದ ಕೃಷಿ ಲಾಗುವಾಡಗಳ ಮಾರುಕಟ್ಟೆಯಲ್ಲಿ ಕಳೆದ ಒಂದು ದಶಕದಲ್ಲಿ ದೊಡ್ಡ ಪ್ರಮಾಣದ ಕಾರ್ಪೊರೆಟೀಕರಣ ನಡೆದಿದೆ. ಇದರ ಫಲವಾಗಿ ಕೃಷಿ ಲಾಗುವಾಡಗಳ ಬೆಲೆ ತೀವ್ರವಾಗಿ ಹೆಚ್ಚಿದೆ. ಇದು ಕೃಷಿ ಕ್ಷೇತ್ರದ ಅಭಿವೃದ್ಧಿ ದರದ ಸ್ಥಗಿತತೆ ಮತ್ತು ಆನಂತರದ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೃಷಿ ಇಲಾಖೆಯ ಅಧ‍್ಯಯನಗಳು ತಿಳಿಸಿವೆ. ಲಾಭವನ್ನು ಗರಿಷ್ಟಗೊಳಿಸುವುದು ಪ್ರಮುಖ ಉದ್ದೇಶವಾಗಿ ಹೊಂದಿರುವ ಕಾರ್ಪೊರೇಟುಗಳು ರೈತರನ್ನು ತಮ್ಮ ಲಾಭಕ್ಕಾಗಿ ಬಲಿ ಕೊಡಲು ಹೇಸುವುದಿಲ್ಲ ಎಂಬುದು ವಾಸ್ತವ. ಆದ್ದರಿಂದ ಕಾರ್ಪೊರೇಟುಗಳು ರೈತರಿಗೆ ಒಳ್ಳೆಯ ಬೆಲೆ ಕೊಡುತ್ತವೆ ಎಂಬ ತರ್ಕ ಆಧಾರವಿಲ್ಲದ್ದು. ವಾಸ್ತವಕ್ಕೆ ದೂರವಾದದ್ದು. ಅವು ತಮ್ಮ ಲಾಭ ಗರಿಷ್ಟಗೊಳಿಸಲು ರೈತರನ್ನು ಇನ್ನಷ್ಟು ಹಿಂಡುತ್ತವೆ ಎಂಬುದು ವಾಸ್ತವ.
ಬುರುಡೆ 8 : ಕೃಷಿ ವ್ಯಾಪಾರವನ್ನು ಖಾಸಗಿಯವರಿಗೆ ಮುಕ್ತಗೊಳಿಸುವುದರಿಂದ ಉಂಟಾಗುವ ಪೈಪೋಟಿಯಿಂದಾಗಿ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಹಲವು ಖಾಸಗಿ ವ್ಯಾಪಾರಿಗಳು ಖರೀದಿದಾರರಿರುವ ಪೈಪೋಟಿಯಿರುವ ಕೃಷಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ರೈತ ಚೌಕಾಸಿ ಮಾಡಬಹುದು.
ವಾಸ್ತವ 8 : ಈ ವಾದದಂತೆ ವಾಸ್ತವದಲ್ಲಿ ನಡೆಯುವುದು ಕಂಡು ಬಂದಿಲ್ಲ. ಬದಲಾಗಿ ವಾಸ್ತವ ಈ ವಾದಕ್ಕೆ ತಿರುವು ಮುರುವಾಗಿದೆ. ವಾಸ್ತವದಲ್ಲಿ ಸರಕಾರಿ ಖರೀದಿ ಮತ್ತು ಕನಿಷ್ಟ ಬೆಂಬಲ ಬೆಲೆ ಕೃಷಿ ಬೆಲೆಗಳನ್ನು ಸ್ಥಿರಗೊಳಿಸುವುದಕ್ಕೆ ಅನುವು ಮಾಡಿಕೊಟ್ಟಿರುವುದು ಕಂಡು ಬರುತ್ತದೆ. ಸರಕಾರದ ಸಮೀಕ್ಷೆಗಳೇ ಸರಕಾರಿ ಖರೀದಿ ಮತ್ತು ಕೃಷಿ ಮಂಡಿಗಳು ವ್ಯಾಪಕವಾಗಿರುವ ಪಂಜಾಬಿನ ರೈತರು, ಅದು ದುರ್ಬಲವಾಗಿರುವ ಹಾಗೂ ಖಾಸಗಿ ವ್ಯಾಪಾರಿಗಳು ಪ್ರಧಾನವಾಗಿರುವ ಉತ್ತರ ಪ್ರದೇಶದ ರೈತರಿಗಿಂತ ಹೆಚ್ಚಿನ ಬೆಲೆ ಪಡೆದಿದ್ದಾರೆ ಎಂದು ದೃಢಪಡಿಸಿವೆ. ರಾಷ್ಟ್ರೀಯ ಸ್ಯಾಂಪಲ್ ಸರ್ವೇಯ 2012-13 ಸಮೀಕ್ಷೆ ಪ್ರಕಾರ ಪಂಜಾಬಿನ ರೈತರು ಕ್ವಿಂಟಲ್ ಭತ್ತಕ್ಕೆ ಸರಾಸರಿ ರೂ.1500 ಬೆಲೆ ಪಡೆದಿದ್ದರು. ಇದು ಆ ವರ್ಷ ನಿಗದಿಯಾಗಿದ್ದ ಕನಿಷ್ಟ ಬೆಂಬಲ ಬೆಲೆ ರೂ.1250 ಕ್ಕಿಂತ ಶೇ. 20 ಹೆಚ್ಚು. ಅದೇ ವರ್ಷ ಉತ್ತರ ಪ್ರದೇಶದಲ್ಲಿ ರೈತರು ಪಡೆದ ಬೆಲೆ ರೂ. 1010, ನಿಗದಿತ ಕನಿಷ್ಟ ಬೆಂಬಲ ಬೆಲೆಗಿಂತ ಸುಮಾರು ಶೇ. 20 ರಷ್ಟು ಕಡಿಮೆ. ಇದಕ್ಕೆ ಕಾರಣ ಮಂಡಿಗಳು ವ್ಯಾಪಕವಾಗಿ ಲಭ್ಯವಿಲ್ಲದಿರುವುದು. ಉತ್ತರ ಪ್ರದೇಶದ ರೈತರಿಗೆ ಕೇವಲ ಶೇ. 16 ರಷ್ಟು ಭತ್ತವನ್ನು ಮಾತ್ರ ಲಭ್ಯ ಮಂಡಿಗಳಲ್ಲಿ ಮಾರುವುದು ಸಾಧ್ಯವಾಯಿತು. ಹೀಗೆ ವಾಸ್ತವದಲ್ಲಿ ಮಂಡಿಗಳ ವ್ಯಾಪಕ ಲಭ್ಯತೆ ಮತ್ತು ಕನಿಷ್ಟ ಬೆಂಬಲ ಬೆಲೆ ಗಳ ಪೈಪೋಟಿಯಿದ್ದಾಗ ಮಾತ್ರ ಖಾಸಗಿ ವ್ಯಾಪಾರಿಗಳಿಂದಲೂ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತದೆ.
ಕೃಷಿ ಸೆನ್ಸಸ್ 2015-16 ಪ್ರಕಾರ ಒಟ್ಟು ಸಾಗುವಳಿಗಳ ಸಂಖ್ಯೆಯ ಶೇ. 86 ಸಣ್ಣ ಮತ್ತು ಬಡ ರೈತರ ಬಳಿ ಇದೆ. ರೈತರ ಕೆಳ ಹಂತಗಳಲ್ಲಿರುವ ಇವರಿಗೆ ಖಾಸಗಿ ವ್ಯಾಪಾರಿಗಳ ಜತೆಗೂ ಹೆಚ್ಚಿನ ಬೆಲೆಗೆ ಚೌಕಾಸಿ ಮಾಡುವ ಸಾಮಾಜಿಕ-ಆರ್ಥಿಕ ಶಕ್ತಿಯಿಲ್ಲ. ಇನ್ನು ದೈತ್ಯಗಾತ್ರದ ಕೃಷಿ ಕಾರ್ಪೊರೇಟುಗಳು ಕೃಷಿ ವ್ಯಾಪಾರವನ್ನು ಕಬ್ಜಾ ಮಾಡಿದರೆ ಅವರ ಚೌಕಾಸಿ ಮಾಡುವ ಶಕ್ತಿ ಇನ್ನಷ್ಟು ಕುಂದುತ್ತದೆ. ಈ ಮೂರು ಕೃಷಿ ಕಾನೂನುಗಳು ಎ,ಪಿ.ಎಂ.ಸಿ ಗಳನ್ನು ರದ್ದು ಮಾಡುವ ಮೂಲಕ ಕನಿಷ್ಟ ಬೆಂಬಲ ಬೆಲೆಗೆ ತಿಲಾಂಜಲಿ ಕೊಡುತ್ತವೆ. ದೈತ್ಯಗಾತ್ರದ ಕೃಷಿ ಕಾರ್ಪೊರೇಟುಗಳು ಕೃಷಿ ವ್ಯಾಪಾರವನ್ನು ಕಬ್ಜಾ ಮಾಡುತ್ತವೆ. ಇದು ದೊಡ್ಡ ಸಂಖ್ಯೆಯ ಸಣ್ಣ ಮತ್ತು ಬಡ ರೈತರಿಗೆ ‘ಮರಣಶಾಸನ’ ಆಗಲಿದೆ ಎಂಬ ಅವರ ಆತಂಕ ವಾಸ್ತವವಾದ್ದು. ಅವರ ಆತಂಕ ರಾಜಕೀಯ ಪಕ್ಷಗಳ ಮತ್ತು ನಾಯಕರ ‘ಪ್ರಚೋದನೆ’ ಅಥವಾ ‘ದಾರಿ ತಪ್ಪಿಸುವ’ ಕ್ರಮಗಳ ಫಲವಲ್ಲ. ಶೇ. 86 ರೈತರ ತಮ್ಮದೇ ಜೀವನಾನುಭವದಿಂದ ಹುಟ್ಟಿದ ಆತಂಕ.