ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತೆ ಮೂವರ ಬಂಧನ

ಬೆಳಗಾವಿ: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌) ಕಿರಿಯ ಸಹಾಯಕ ಪರೀಕ್ಷಾ ಅಕ್ರಮದ ಕುರಿತು ತನಿಖೆ ಮುಂದುವರೆದಿದ್ದು, ಇದೀಗ ಅಕ್ರಮದ ಭಾಗಿಯಾದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ  21ಕ್ಕೆ ಏರಿಕೆಯಾಗಿದೆ.

ಬಂಧಿತರನ್ನು ರಾಜಾಪುರ ಗ್ರಾಮದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ (22 ವರ್ಷ), ಮೂಡಲಗಿ ತಾಲೂಕಿನ ‌ಬಿರಣಗಡ್ಡಿ ಗ್ರಾಮದ ಬಸವರಾಜ ದುಂದನಟಿ (34 ವರ್ಷ) ಹಾಗೂ ಮೂಡಲಗಿ ತಾಲೂಕಿನ ಅರಭಾವಿ ಗ್ರಾಮದ ಅಕ್ಷಯ್ ಭಂಡಾರಿ(33 ವರ್ಷ) ಎಂದು ಹೆಸರಿಸಲಾಗಿದೆ.

ಆರೋಪಿಗಳು ಎಲೆಕ್ಟ್ರಾನಿಕ್‌ ಉಪಕರಣ ಬಳಸಿ ಅಕ್ರಮ ಎಸಗಿರುವರು ಎಂದು ವರದಿಯಾಗಿದೆ. ಆರೋಪಿ ಬಸವರಾಜ ದುಂದನಟ್ಟಿ ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿಯ ತೋಟದ ಮನೆಯಲ್ಲಿ ಕುಳಿತು ಉತ್ತರಗಳನ್ನು ಆಧುನೀಕ ಉಪಕರಣ ಬಳಸಿಕೊಂಡು ಅಭ್ಯರ್ಥಿಗಳಿಗೆ ಹೇಳಿದ್ದ. ಶ್ರೀಧರ ಲಕ್ಕಪ್ಪ ಕಟ್ಟಿಕಾರ್ ಎಂಬ ಆರೋಪಿ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್‌ ಉಪಕರಣ ಮುಟ್ಟಿಸಿದ್ದ.

ಮತ್ತೋರ್ವ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ ಎಂಬಾತ ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟವರು ಎಂದು  ಬೆಳಗಾವಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ತಂದು ಪ್ರಕರಣದ ಮುಖ್ಯ ಆರೋಪಿ ಸಂಜು, ಅಕ್ಷಯ್ ಭಂಡಾರಿಗೆ ನೀಡಿದ್ದರು. ಬಂಧಿತನಿಂದ ಮೊಬೈಲ್, 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು 18 ಮಾಡಿಪಾಯ್ ಡಿವೈಸ್ ಜಪ್ತಿ ಮಾಡಲಾಗಿದೆ. ‌

ಆರೋಪಿಗಳಿಂದ ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್‌ ಉಪಕರಣಗಳು ತಕ್ಷಣಕ್ಕೆ ಅವು ಬ್ಯಾಂಕಿನ ಮಾಸ್ಟರ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ನಂತೆಯೇ ಕಾಣಿಸುತ್ತವೆ. ಪ್ರತಿಯೊಂದಕ್ಕೂ ಒಂದೊಂದು ಸಿಮ್‌ ಇದ್ದು, ಮೊಬೈಲ್‌ನಂತೆ ಕೆಲಸ ಮಾಡಬಲ್ಲವು. ಪ್ರತಿಯೊಂದಕ್ಕೂ ಒಂದೊಂದು ಪ್ರತ್ಯೇಕ ‘ಹೀಯರಿಂಗ್‌ ಪೀಸ್‌’ ಇದ್ದು ಅದನ್ನು ಕಿವಿಯೊಳಗೆ ಇಟ್ಟುಕೊಂಡರೆ ಸಾಕು; ದೂರದಿಂದ ಉತ್ತರ ರವಾನಿಸಲು ಸುಲಭವಾಗುತ್ತದೆ. ಆರೋಪಿಗಳು ಚಾಣಾಕ್ಷತೆಯಿಂದ ಇವುಗಳನ್ನು ಪರಿಷ್ಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿ, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಬಂಧಿತರ ಸಂಖ್ಯೆ 21ಕ್ಕೆ ಏರಿಕೆ

ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯ ಪರೀಕ್ಷೆ ಆಗಸ್ಟ್‌ 7ರಂದು ಗೋಕಾಕ್‌ನಲ್ಲಿ ನಡೆದಿತ್ತು. ಈ ಪರೀಕ್ಷೆಯಲ್ಲಿ ಸಿದ್ದಪ್ಪ ಎಂಬ ವ್ಯಕ್ತಿ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಹೊರಗೆ ಕಳುಹಿಸಿದ್ದನು. ಈ ವಿಚಾರ ತಿಳಿದ ಅಭ್ಯರ್ಥಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಕ್ರಮ ಎಸಗಿರುವುದು ಖಚಿತವಾಗಿತ್ತು. ಅದರಂತೆ ಆಗಸ್ಟ್‌ 22ರಂದು 9 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಆಗಸ್ಟ್‌ 24ರಂದು ಮೂವರನ್ನು ಬಂಧಿಸಿದ್ದರು. ಸೆಪ್ಟಂಬರ್‌ 2ರಂದು ಪ್ರಮುಖ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಇದೀಗ ಮತ್ತೆ ಮೂವರನ್ನು ಬಂಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *