ಬಾಗೇಪಲ್ಲಿ : ಸಿಪಿಐಎಂ ಅಭ್ಯರ್ಥಿ ಡಾ.ಎ ಅನಿಲ್ ಕುಮಾರ್ ಚುನಾಯಿಸಲು ಕೆ.ಪಿಆರ್‌ಎಸ್ ಮನವಿ

ಬೆಂಗಳೂರು : ಮೇ 10 ,2023 ರಂದು ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಮತ ಕ್ಷೇತ್ರದಿಂದ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಖ್ಯಾತ ಜನ ವೈದ್ಯ, ಜನಪರ ಹೋರಾಟಗಾರ, ಕೋವಿಡ್ ನಿಗ್ರಹದ ಚಿಕಿತ್ಸಾ ವಿಧಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಗೌರವಿಸಲ್ಪಟ್ಟ ಡಾ.ಎ ಅನಿಲ್ ಕುಮಾರ್ ರವರನ್ನು ಚುನಾಯಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ ತಿಳಿಸಿದ್ದಾರೆ.

ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಸಮಸ್ತ ರೈತಾಪಿ ಸಮುದಾಯವ ಸಿಪಿಐಎಂನ್ನು ಬೆಂಬಲಿಸುತ್ತಿದೆ.  ಕಪ್ಪು ಹಣದ ಅಕ್ರಮ ಗಳಿಕೆಯ ಕೋಟ್ಯಾಧಿಪತಿಗಳೇ ತುಂಬಿ ಹೋಗಿರುವ ವಿಧಾನಸಭೆಯಲ್ಲಿ ರೈತರ, ಕಾರ್ಮಿಕರ, ದಲಿತರ ,ಮಹಿಳೆಯರ, ವಿದ್ಯಾರ್ಥಿ-ಯುವಜನರ ,ಅಲ್ಪಸಂಖ್ಯಾತರ ಜ್ವಲಂತ ಪ್ರಶ್ನೆಗಳು ಚರ್ಚೆಯಾಗುತ್ತಿಲ್ಲ. ಜನತೆಯ ಹಿತರಕ್ಷಣೆಗಾಗಿ ,ಪ್ರಜಾಪ್ರಭುತ್ವ ಚಳವಳಿಯ ಪ್ರತಿನಿಧಿಯಾಗಿ, ಶಾಸನಸಭೆಯಲ್ಲಿ ಗಟ್ಟಿ ಧ್ವನಿ ಎತ್ತುವ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಸಿಪಿಐಎಂ ಶಾಸಕರು ವಿಧಾನ ಸಭೆ ಪ್ರವೇಶಿಸುವುದು ಅಗತ್ಯವಾಗಿದೆ.ಅದುದರಿಂದ ಬಾಗೇಪಲ್ಲಿಯ ರೈತಾಪಿ ಸಮುದಾಯ ಹಾಗೂ ಇನ್ನಿತರ ದುಡಿಯುವ ವರ್ಗ ಸಿಪಿಐಎಂ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಚುನಾಯಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ಹಿಂದೆ ಸಿಪಿಐಎಂ ಶಾಸಕರು ಬಾಗೇಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾಗ ,ಬಾಗೇಪಲ್ಲಿ ಮತದಾರರ ರಾಜಕೀಯ ಪ್ರಜ್ಞಾವಂತಿಕೆ ಕುರಿತು ರಾಜ್ಯಾದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ನೆಲೆಸಿರುವ, ಅಕ್ರಮ ಹಣಗಳಿಕೆ ಚೆಲ್ಲಿ ,ಬಾಗೇಪಲ್ಲಿ ಪ್ರತಿನಿಧಿಸಬಹುದು ಎಂಬ ವಾತಾವರಣ ಸೃಷ್ಟಿಯಾಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ಚುನಾವಣಾ ಪ್ರಕ್ರಿಯೆಯ ಅಣಕವಾಗಿದೆ. ಬಾಗೇಪಲ್ಲಿ ಮತಕ್ಷೇತ್ರವನ್ನು ಚುನಾವಣಾ ಸಂದರ್ಭದಲ್ಲಿ ಬಾಡಿಗೆಪಲ್ಲಿಯಾಗಿಸಿರುವ ಇಂತಹ ಅಕ್ರಮ ಹಣವಂತರನ್ನು ತಿರಸ್ಕರಿಸಿ, ಸಿಪಿಐಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಬಾಗೇಪಲ್ಲಿ ಕ್ಷೇತ್ರದ ಮತದಾರರು ಎತ್ತಿ ಹಿಡಿಯಲಿದ್ದಾರೆ ಎಂದು ಅವರು ತಿಳಿಸಿದರು. ‌

ಇದನ್ನೂ ಓದಿಬಿಜೆಪಿ ಸೋಲಿಸುವ ಭಿನ್ನದಾರಿಗಳ ನಡೆ ಯಾವ ಕಡೆ ?

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಅವಿಭಜಿತ ಕೋಲಾರ ಜಿಲ್ಲೆ 1950 ರ ದಶಕದಿಂದಲೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದ ರೈತ ಚಳವಳಿ ಗೆ ಹೆಸರುವಾಸಿಯಾದ ನೆಲೆಯಾಗಿದೆ. ಹೆಚ್ ಎಸ್ ರಾಮರಾವ್ ,ಅಪ್ಪಸ್ವಾಮಿರೆಡ್ಡಿ ,ನಾಗಭೂಷಣಚಾರಿ ,ಮಳ್ಳೂರು ಪಾಪಣ್ಣ ,ಆರ್ ವೆಂಕಟರಾಮಯ್ಯ ,ಅಶ್ವಥ ನಾರಾಯಣ ರೆಡ್ಡಿ ,ಜಿವಿ ಶ್ರೀರಾಮರೆಡ್ಡಿ, ಕೆಎಂ ವೆಂಕಟೇಶ್ ಮುಂತಾದ ಹಲವು ಧೀಮಂತ ರೈತ ನಾಯಕರನ್ನು ನಾಡಿಗೆ ಕೊಟ್ಟಿರುವ ಜಿಲ್ಲೆಯಾಗಿದೆ. ಅವಿಭಜಿತ ಕೋಲಾರ ಜಿಲ್ಲೆಯ ರೈತ ಚಳವಳಿ ಹಾಗೂ ಕಮ್ಯುನಿಸ್ಟ್ ಚಳವಳಿ ಒಂದಕ್ಕೊಂದು ಬೆಸೆದುಕೊಂಡಿರುವ ತ್ಯಾಗ-ಬಲಿದಾನದ ವೀರ ಪರಂಪರೆಯನ್ನು ಹೊಂದಿದೆ. ಜೋಡಿ ಇನಾಂತಿ ರದ್ದತಿ ಚಳವಳಿ, ಶಾಶ್ವತ ನೀರಾವರಿ ಚಳವಳಿ, ಬಡವರ, ಧೀನ -ದಲಿತರ ಘನತೆಗಾಗಿ ,ದೌರ್ಜನ್ಯ-ಶೋಷಣೆ ಮುಕ್ತ ಬದುಕಿಗಾಗಿ ,ಭೂಮಿ ಹಕ್ಕಿಗಾಗಿ ,ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಾಗಿ ,ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ, ಆಹಾರ -ಉದ್ಯೋಗ ದ ಹಕ್ಕಿಗಾಗಿ ಸಾವಿರಾರು ಹೋರಾಟಗಳನ್ನು ನಡೆಸಿ, ಮನೆ ಮಾತಾಗಿದೆ. ಮಹಾನ್ ಕಮ್ಯುನಿಸ್ಟ್ ನಾಯಕ ,ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಎ.ಕೆ ಗೋಪಾಲನ್ ರವರು ಸ್ವತಃ ಬಾಗೇಪಲ್ಲಿ ತಾಲ್ಲೂಕಿನ ಪೇಸಲಪರ್ತಿ ,ಶಿಡ್ಲಘಟ್ಟ ತಾಲ್ಲೂಕಿನ ಈಗಲೇಟ್ ತಿಮ್ಮಸಂದ್ರ ,ಚಿಂತಾಮಣಿ ತಾಲೂಕಿನ ಕೋಣ್ಲಾಕುಂಟೆ ಗ್ರಾಮಗಳು ಸೇರಿದಂತೆ ಕೆಪಿಆರ್ ಎಸ್ ನೇತೃತ್ವದಲ್ಲಿ ನಡೆದ ಹಲವಾರು ಭೂಮಿ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹೀಗೆ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಹಾಗೂ ಜಿಲ್ಲೆಯ ರೈತ ಚಳವಳಿ ಯನ್ನು ಕಮ್ಯುನಿಸ್ಟ್ ಚಳವಳಿಯಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಇಂತಹ ಧೀರ ,ಹೆಮ್ಮೆಯ ಪರಂಪರೆ ಗೆ ಧಕ್ಕೆ ತರುವ ರೀತಿಯಲ್ಲಿ ಕೆಲವು ಅವಕಾಶವಾದಿ ವ್ಯಕ್ತಿಗಳು ನಡೆಸುತ್ತಿರುವ ಚಿತಾವಣೆಗಳಿಗೆ ಯಾವುದೇ ಬೆಲೆ ನೀಡದೇ ಸಿಪಿಐಎಂ ಅಭ್ಯರ್ಥಿ ಗೆಲುವಿಗಾಗಿ ಅವಿರತವಾಗಿ ಶ್ರಮಿಸಬೇಕು ಎಂದವರು ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು, ಮುಕ್ತ ವ್ಯಾಪಾರ ಒಪ್ಪಂದಗಳ ಕಾರಣದಿಂದ ಜಿಲ್ಲೆಯ ರೇಷ್ಮೆ ಹಾಗೂ ಹೈನುಗಾರಿಕೆ ಈಗಾಗಲೇ ವಿನಾಶದ ಅಂಚಿನಲ್ಲಿದೆ ‌ರೈತಾಪಿ ಬೇಸಾಯವನ್ನು ನಾಶ ಮಾಡಿ ,ಕಂಪನಿ ಬೇಸಾಯವನ್ನು ಉತ್ತೇಜಿಸುವ ಕೃಷಿ ಕಾನೂನುಗಳು ಹಾಗೂ ಬೀಜ ,ನೀರಾವರಿ, ವಿದ್ಯುತ್ ಮುಂತಾದ ಕೃಷಿ ಸಂಬಂಧಿತ ಅಗತ್ಯಗಳನ್ನು ಸಂಪೂರ್ಣ ಖಾಸಗೀಕರಿಸಿ ಕೈಗೆಟುಕದಂತೆ ದುಬಾರಿಯಾಗಿಸುವ ಕಾಯ್ದೆಗಳು ಶಾಸನಸಭೆಗಳಲ್ಲಿ ಜಾರಿ ಮಾಡಲಾಗುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ ಬರುತ್ತಿರುವ ವಿದೇಶಿ ಬಂಡವಾಳದಿಂದ ರಿಲಯನ್ಸ್ ಪ್ರೆಶ್ ನಂತಹ ಮಾಲ್ ಗಳು, ಅಧಾನಿ ಸಂಸ್ಕರಣಾ ದೈತ್ಯ ಗೋಡೌನ್ ಗಳು ,ತರಕಾರಿ ಬೆಳೆ ಸೇರಿದಂತೆ ಎಲ್ಲಾ ರೀತಿಯ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ತಮ್ಮ ವಶಕ್ಕೆ ಪಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಬಾಗೇಪಲ್ಲಿ ಹಾಗೂ ರಾಜ್ಯದ ರೈತರ ಹಿತರಕ್ಷಣೆಗಾಗಿ ಶಾಸನಸಭೆಗಳಲ್ಲಿ ಹೋರಾಡಲು ಸಿಪಿಐಎಂ ಶಾಸಕರನ್ನು ಚುನಾಯಿಸಬೇಕಾಗಿದೆ ಎಂದುರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್‌ ತಿಳಿಸಿದ್ದಾರೆ.

ಡಾ.ಎ ಅನಿಲ್ ಕುಮಾರ್ ರವರು ಅತ್ಯುನ್ನತ ತಜ್ಞ ವೈದ್ಯಕೀಯ ವಿದ್ಯಾಭ್ಯಾಸವನ್ನು ಹೊಂದಿದವರಾಗಿದ್ದು ,ಕೋವಿಡ್ ಮಹಾಪಿಡುಗಿನ ಸಂದರ್ಭದಲ್ಲಿ ತಮ್ಮದೇ ಆದ ಚಿಕಿತ್ಸಾ ವಿಧಾನಗಳ ಮೂಲಕ ಪ್ರಾಣ ಹಾನಿ ತಡೆಗಟ್ಟಿ ವಿಶ್ವ ಆರೋಗ್ಯ ಸಂಸ್ಥೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಜನಾರೋಗ್ಯ ನೀತಿಗಳನ್ನು ರೂಪಿಸಲು, ಆರೋಗ್ಯ-ಶಿಕ್ಷಣ ದ ಹಕ್ಕು ಎಲ್ಲರಿಗೂ ದೊರಕುವಂತೆ ಮಾಡಲು ಬೇಕಾದ ನೀತಿ-ನಿರೂಪಣೆಗಳನ್ನು ರೂಪಿಸಬಲ್ಲ ಸಾಮಾರ್ಥ್ಯವನ್ನು ಹೊಂದಿದ್ದಾರೆ. ಬಚಾವತ್ ಬಿ ಸ್ಕೀಮ್ ನಲ್ಲಿ ರಾಜ್ಯಕ್ಕೆ ಲಭ್ಯವಾಗಿರುವ ನೀರನ್ನು ಬಾಗೇಪಲ್ಲಿ ರೈತರಿಗೂ ಸಿಗುವಂತೆ ಗಂಭೀರವಾಗಿ ಚಿಂತಿಸಿ ಹೋರಾಟ ನಡೆಸುತ್ತಿದ್ದಾರೆ. ಶಾಶ್ವತ ನೀರಾವರಿಗಾಗಿ ,ಬರಗಾಲದಿಂದ ಬಾಗೇಪಲ್ಲಿಯನ್ನು ಮುಕ್ತಿ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅದ್ದರಿಂದ ಯಾವುದೇ ಹಣ -ಆಮಿಷಗಳ ಪ್ರಲೋಭನೆಗೆ ಒಳಗಾಗದೇ ಸಿಪಿಐಎಂ ಅಭ್ಯರ್ಥಿಯ ಗೆಲುವಿಗಾಗಿ ರೈತರು ಶ್ರಮಿಸಲಿದ್ದಾರೆ ಎಂದವರು ತಿಳಿಸಿದರು.

ಬಾಗೇಪಲ್ಲಿಯಲ್ಲಿ ಇದುವರೆಗೆ ಆಗಿರುವ ನೀರಾವರಿ ಯೋಜನೆಗಳು ,ಅಂತರ್ಜಲ ವೃದ್ದಿ ,ರಸ್ತೆ, ಸಾರಿಗೆ, ಅಸ್ಪತ್ರೆ ,ಶಾಲೆ/ಕಾಲೇಜುಗಳು ಬಹಳಷ್ಟು ಸಿಪಿಐಎಂ ಶಾಸಕರ ಅವಧಿಯಲ್ಲಿ ಆಗಿರುವಂತಹವು ಎಂಬುದು ಗಮನಾರ್ಹ ವಾಗಿದೆ. ಹಾಗಾಗಿ ಬಾಗೇಪಲ್ಲಿ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಸಾಧಿಸಲು ಸಿಪಿಐಎಂ ಅಭ್ಯರ್ಥಿಯನ್ನು ಚುನಾಯಿಸಬೇಕು ಹಾಗೂ ನಿಷ್ಕ್ರಿಯ, ಜನ ವಿರೋಧಿ ಶಾಸಕರನ್ನು ಮತ್ತು ಕೋಮುವಾದಿ ಪಕ್ಷಗಳನ್ನು ಸೋಲಿಸಬೇಕೆಂದು ಬಾಗೇಪಲ್ಲಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *