ಚನ್ನರಾಯಪಟ್ಟಣ : ರೈತ ಸಮುದಾಯ ಅನುಭವಿಸುತ್ತಿರುವ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಮೋದಿ ಮತ್ತು ಬೊಮ್ಮಾಯಿ ನೇತೃತ್ವದ ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರದ ರೈತ ವಿರೋಧಿ ನೀತಿಗಳೇ ಕಾರಣ, ಇವುಗಳ ವಿರುದ್ಧ ರೈತ ಸಮುದಾಯ ಸಂಘಟಿತವಾಗಿ ಹೋರಾಟ ಬಡೆಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವೀನ್ ಕುಮಾರ್ ತಿಳಿಸಿದರು.
ಚನ್ನರಾಯಪಟ್ಟಣದ ಕಲ್ಕೆರೆ ವೃತ್ತದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ಚನ್ನರಾಯಪಟ್ಟಣ ತಾಲ್ಲೂಕು ಸಮ್ಮೇಳನದ ಬಹಿರಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇವರು ದಿನದಿಂದ ದಿನಕ್ಕೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು ರೈತರು ಬೆಳೆದ ಬೆಳೆಗಳಿಗೆ ಮಾತ್ರ ಲಾಭದಾಯಕ ಬೆಲೆ ಸಿಗದೆ ರೈತರು ಒಂದೆಡೆ ಕೃಷಿಯಿಂದ ದೂರವಾಗುತ್ತಿದ್ದು ಮತ್ತೊಂದೆಡೆ ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇದು ಇಡೀ ಕೃಷಿಯನ್ನು ಬಿಕ್ಕಟ್ಟಿಗೆ ದೂಡಿದೆ. ರೈತರ ಆಧಾಯವನ್ನು ದ್ವಿಗುಣಗೊಳಿಸುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದವರು ದೇಶದಲ್ಲಿ ಕಾರ್ಪೊರೇಟ್ ಪರವಾದ ಕೃಷಿ ನೀತಿಯನ್ನು ಜಾರಿಗೊಳಿಸುವ ಮೂಲಕ ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಎಚ್.ಎಸ್. ಮಂಜುನಾಥ್ ಮಾತನಾಡಿ ರಾಜ್ಯ ಸರ್ಕಾರ ಗೋಹತ್ಯೆ ನಿಶೇದ ಕಾಯ್ದೆಯ ಹೆಸರಿನಲ್ಲಿ ಹೈನುಗಾರಿಕೆಯನ್ನು ಮಾಡುತ್ತಿದ್ದ ಬಡ ರೈತರ ಹೊಟ್ಟೆ ಮೇಲೆ ಒಡೆಯುತ್ತಿದೆ. ಮತ್ತೊಂದೆಡೆ ಹಾಲು, ಮೊಸರಿಗೂ ಜಿ.ಎಸ್.ಟಿ ನಿಗದಿ ಮಾಡಿ ಗ್ರಾಹಕರಿಗೂ ಅನ್ಯಾಯ ಮಾಡುತ್ತಿದೆ. ದಿನದಿಂದ ದಿನಕ್ಕೆ ಕೆಲವೇ ಕೆಲವು ವ್ಯಕ್ತಿಗಳು ದೇಶದ ಸಂಪತ್ತನ್ನೆಲ್ಲಾ ಲೂಟಿಮಾಡಿ ಆಗರ್ಭ ಶ್ರೀಮಂತರಾಗುತ್ತಿದ್ದಾರೆ. ಮತ್ತೊಂದೆಡೆ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಲ್ಲಿ ಬಳಲುತ್ತಿದ್ದಾರೆ ಎಂದರು. ಆರೋಗ್ಯ, ಶಿಕ್ಷಣ, ಆಹಾರ, ಉದ್ಯೋಗಗಳನ್ನು ನೀಡಬೇಕಾದ ಸರದಕಾರ ತನ್ನ ಜವಾಬ್ದಾರಿಯನ್ನು ಮರೆತು ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಸಭೆಯ ವೇದಿಕೆಯಲ್ಲಿ ವಿಚಾರವಾದಿಗಳಾದ ಶಂಕರೇಗೌಡ, ಡಮ್ಮಲಿಂಗೇಗೌಡ ಸಿಐಟಿಯು ಮುಖಂಡರಾದ ಕರಿಯಪ್ಪ, ದಲಿತ ಮುಖಂಡರಾದ ಗೋವಿಂದರಾಜು ಹಾಜರಿದ್ದರು ಗ್ರಾಮಪಂಚಾಯಿತಿ ಸದಸ್ಯರಾದ ವಾಸುದೇವ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಹಿರಂಗ ಸಭೆಯ ನಂತರ ನಡೆದ ಪ್ರತಿನಿಧಿಗಳ ಅಧಿವೇಶನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ 19 ಜನರ ನೂತನ ತಾಲ್ಲೂಕು ಸಮಿತಿಯನ್ನು ರಚಿಸಲಾಯಿತು.
ನೂತನ ತಾಲ್ಲೂಕು ಸಮಿತಿ: ಅಧ್ಯಕ್ಷರಾಗಿ ಶ್ರೀಧರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ, ಬಾಲಕೃಷ್ಣ, ಹರೀಶ್, ಡಂಬಲಿಂಗೇಗೌಡ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ, ವಾಸುದೇವ ಆಯ್ಕೆಯಾಗಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಮಂಜಣ್ಣ, ಗಿರೀಶ್, ಮಧು ಆಯ್ಕೆಯಾಗಿದ್ದಾರೆ.