ಮಳುವಳ್ಳಿ : ಐವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಬಡ ಬಗರ್ ಹುಕುಂ ಸಾಗುವಳಿದಾರರಿಗೆ ಹಾಗೂ ನಿವೇಶನ ರಹಿತರಿಗೆ ನಿವೇಶನ ವಸತಿ ನೀಡಲು ಯೋಗ್ಯತೆ ಇಲ್ಲದ ಬಿಜೆಪಿ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ರಾಜ್ಯದ ಭೂ ಸಂಪತ್ತು, ಜಲ ಸಂಪತ್ತು ಹಾಗೂ ನೀರು, ವಿದ್ಯುತ್ತನ್ನು ಹೇರಳವಾಗಿ ಬಂಡವಾಳಶಾಹಿಗಳಿಗೆ ನೀಡಲು ಹೊರಟಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಳವಳ್ಳಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡುತ್ತಾ, ರೈತರ ಪಂಪ್‌ಸೆಟ್ ಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸಿ ರೈತ ಕುಲ ನಾಶ ಮಾಡಲು ರೂಪಿಸಿರುವ ರೈತ ವಿರೋದಿ .ವಿದ್ಯುತ್ ಮಸೂದೆ 2022 ಅನ್ನು ಸಂಸತ್ತಿನಿಂದ ವಾಪಸ್ಸು ಪಡೆಯಬೇಕು . ಅತಿವೃಷ್ಟಿಗೆ ಮನೆ-ಬೆಳೆ ಕಳೆದುಕೊಂಡ ರೈತ ಕೂಲಿಕಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಲ್ಲಾ ಗ್ರಾಮೀಣ ಜನತೆಯ, ಎಲ್ಲಾ ರೀತಿಯ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು, ಬಗರ್ ಹುಕಂ ಹಾಗೂ ಅರಣ್ಯ ಭೂಮಿ ಸಾಗುವಳಿ ಸಕ್ರಮಕ್ಕೆ ಒತ್ತಾಯಿಸಿದರು.
ರೈತರ-ದಲಿತರ ಸ್ವಾಧೀನದ ಬಗರ್ ಹುಕಂ ಭೂಮಿಯನ್ನು ಮಠ, ಮಂದಿರ, ಆರ್‌ಎಸ್‌ಎಸ್‌ನ ಟ್ರಸ್ಟ್ ಹಾಗೂ ರಿಯಲ್ ಎಸ್ಟೇಟ್ ಉದ್ದೇಶಕ್ಕೆ ನೀಡುತ್ತಿದ್ದಾರೆ. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ, ರೈತರಿಗೆ ಬ್ಯಾಂಕ್‌ಗಳಲ್ಲಿ ಸರಿಯಾದ ಸಮಯಕ್ಕೆ ಸಾಲ ಸಿಗುತ್ತಿಲ್ಲ, ಉದ್ಯೋಗ ಖಾತರಿ ಯೋಜನೆಯನ್ನ ಸಮರ್ಪಕವಾಗಿ ಜಾರಿಮಾಡಿ ವರ್ಷಕ್ಕೆ ಇನ್ನೂರು ದಿನ ಕೆಲಸ, ದಿನಕ್ಕೆ ಆರುನೂರು ರೂಪಾಯಿ ಕೂಲಿ ನೀಡಬೇಕು. ಎಲ್ಲಾ ಬಡವರಿಗೂ ಮನೆ-ನಿವೇಶನ ನೀಡಬೇಕು ಹಾಗೂ ಹಲಗೂರಿನ ಕೆರೆ ಅಂಗಳದಲ್ಲಿ ವಾಸವಿರುವ ನಿವಾಸಿಗಳಿಗೆ ಶೀಘ್ರವಾಗಿ ನಿವೇಶನ ನೀಡಬೇಕೆಂದು, ದಲಿತರ ಮೇಲೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೂ ಮುನ್ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ವಿಜಯಣ್ಣರವರು ಮೂಲಕ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಉಪಾಧ್ಯಕ್ಷರಾದ ಪ್ರಮೀಳಾ, ಎ.ಎಲ್ ಶಿವಕುಮಾರ್, ಚಿಕ್ಕಸ್ವಾಮಿ, ಗುರುಸ್ವಾಮಿ. ಸಹಕಾರ್ಯದರ್ಶಿ ಅನೀತಾ, ಶಿವಪ್ಪ ,ಹಿಪ್ಜುಲ್ಲಾ ,ಮರಿಲಿಂಗೇಗೌಡ, ಎಸ್ಕೆ ಶಿವಕುಮಾರ್, ರಾಜು ಸಾಗ್ಯ, ಮಹಾದೇವು, ಸಿದ್ದರಾಜು, ಗಣೇಶ್, ಬೋರಯ್ಯ, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಸಿದ್ದರು.