ಬೆಂಗಳೂರು : ಸಂವಿಧಾನದ ತಿರುಳು ತಿಳಿಯದವರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಸಂವಿಧಾನ ಬದ್ದ ,ಶಾಸನ ಬದ್ದ ಕರ್ತವ್ಯಗಳನ್ನು ಸರಿಯಾಗಿ ಸರ್ಕಾರಗಳು ನಿರ್ವಹಿಸುತ್ತಿಲ್ಲ. ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ಭೂಮಿ ಹಕ್ಕು ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ಜಸ್ಟೀಸ್ ವಿ. ಗೋಪಾಲಗೌಡ ಆರೋಪಿಸಿದರು. ಸಂವಿಧಾನ
ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಭೂಮಿ ಹಕ್ಕು ರೈತ ಕೃಷಿ ಕಾರ್ಮಿಕರಿಗೂ ಕಾರ್ಪೊರೇಟ್ ಬಕಾಸುರರಗಾಗಿಯೋ ಬದಲಾಗುತ್ತಿರುವ ಭೂನೀತಿ ಹಾಗು ಸಂಬಂದಗಳು ಕುರಿತು ರಾಜ್ಯ ಮಟ್ಟದ ದುಂಡುಮೇಜಿನ ಸಭೆಗೆ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು, ಭೂ ರಹಿತ ಕೃಷಿಕರಿಗೆ ಭೂಮಿ ಒದಗಿಸುವ ಮೂಲಕ ರೈತರ ಬದುಕಿಗೆ ಭದ್ರತೆ ಒದಗಿಸಬೇಕು, ಆದರೆ ಆಳುವ ಸರ್ಕಾರ ಇತ್ತ ರೈತರಿಗೆ ಭೂಮಿಯನ್ನು ಕೊಡುತ್ತಿಲ್ಲ, ಉಳಿಮೆ ಮಾಡುತ್ತಿರುವ ಅರಣ್ಯ ಸಾಗುವಳಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ರೈತ, ಕೂಲಿಕಾರನ್ನು ಬೀದಿ ತಂದ ಸರ್ಕಾರಗಳನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಕರೆ ನೀಡಿದರು.
ರೈತರು ಮತ್ತು ಕೂಲಿಕಾರರು ಒಬ್ಬರೂ ಒಟ್ಟೊಟ್ಟಿಗೆ ಜೀವನ ಸಾಗಿಸಬೇಕಿದೆ. ಅವರಿಬ್ಬರ ನಡುವೆ ಅನ್ಯೋನ್ಯ ಸಂಬಂಧವಿದೆ. ಅದನ್ನು ಉಳಿಸಿ ಬೆಳಸಬೇಕಿದೆ. ಕರ್ನಾಟಕದಲ್ಲಿ ಭೂ ಸುಧಾರಣೆ ಕುರಿತು ಸಾಕಷ್ಟು ಚರ್ಚೆಗಳಿದ್ದವು, ಒಂದಿಷ್ಟು ಪ್ರಗತಿಪರವಾಗಿ ಸರ್ಕಾರಗಳು ಯೋಚನೆ ಮಾಡುತ್ತಿದ್ದವು, ಯಾವಾಗ ಕಾರ್ಪೊರೇಟ್ ಕಂಪನಿಗಳ ಕಣ್ಣಿಗೆ ಭೂಮಿ ಬಿತ್ತು, ಮತ್ತು ಸರ್ಕಾರಗಳು ಆ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದ ನಂತರ ಕರ್ನಾಟಕ ಭೂ ಸುಧಾರಣೆ ಹಳ್ಳ ಹಿಡಿಯಿತು, ದಲಿತರು, ಕೂಲಿಕಾರರು, ರೈತರು ಭೂಮಿಯಿಂದ ವಂಚಿತರಾಗುವಂತಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತರೈತ ಸಂಘದ ಜಿಸಿ ಬಯ್ಯಾರೆಡ್ಡಿ ವಹಿಸಿದ್ದರು. ವೇದಿಕೆಯ ಮೇಲೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ವಿ. ನಾಗರಾಜ್ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷರಾದ ಪುಟ್ಟಮಾದು, ಉಪಾಧ್ಯಕ್ಷರಾದ ಜಿ.ಎನ್.ನಾಗರಾಜ್ ಇದ್ದರು. ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್, ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್ ನವೀನ್ ಕುಮಾರ್ ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ರೈತ, ಕೂಲಿಕಾರ ಮುಖಂಡರು ಭಾಗವಹಿಸಿದ್ದರು.