ಮಂಗಳೂರು : ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೋಟತಟ್ಟು ಎಂಬಲ್ಲಿ ಮೆಹಂದಿ ಕಾರ್ಯಕ್ರಮ ನಡೆಸುತ್ತಿದ್ದ ಕೊರಗ ಸಮುದಾಯದ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರನ್ನು ಬಂಧಿಸಿ ಜೈಲಿಗೆ ಅಟ್ಟುವ ಬದಲು ದೌರ್ಜನ್ಯಕ್ಕೊಳಗಾದ ಕೊರಗ ಸಮುದಾಯದ 7 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದು ಯಾವ ನ್ಯಾಯ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಪ್ರಶ್ನಿಸಿದ್ದಾರೆ.
ಕೋಟ ಠಾಣೆಯ ಪೊಲೀಸರು ಕೊರಗ ಸಮುದಾಯದ ಮನೆಗೆ ನುಗ್ಗಿ ದಾಂಧಲೆ ನಡೆಸಿ ದೌರ್ಜನ್ಯ ಎಸಗಿರುವ ಕೃತ್ಯವನ್ನು ಖಂಡಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಲಿತ ಹಕ್ಕುಗಳ ಸಮಿತಿ, ಡಿವೈಎಫ್‌ಐ ವತಿಯಿಂದ ಗುರುವಾರ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊರಗ ಸಮುದಾಯ ಇಲ್ಲಿನ ಮೂಲನಿವಾಸಿಗಳು. ವರ್ಷದಿಂದ ವರ್ಷಕ್ಕೆ ಈ ಸಮುದಾಯದ ಜನಸಂಖ್ಯೆ ಇಳಿಕೆಯಾಗುತ್ತಲೇ ಇದೆ. ಇವರನ್ನು ರಕ್ಷಿಸಿ ಮುಖ್ಯವಾಹಿನಿಗೆ ತರಬೇಕಾದ ಪೊಲೀಸರೇ ದಾಂಧಲೆ ನಡೆಸಿ ದಬ್ಬಾಳಿಕೆ ಮಾಡಿರುವುದು ಅಕ್ಷಮ್ಯ. ತಪ್ಪಿತಸ್ಥ ಪೊಲೀಸರನ್ನು ವರ್ಗಾವಣೆ ಅಥವಾ ಅಮಾನತು ಮಾಡಿದರೆ ಸಾಲದು. ಅವರನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಮತ್ತು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಕೃಷ್ಣಪ್ಪ ಕೊಂಚಾಡಿ ಒತ್ತಾಯಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ದೌರ್ಜನ್ಯಕ್ಕೊಳಗಾದ ವರನ ಮದುವೆಯಲ್ಲಿ ಪಾಲ್ಗೊಂಡು ಮೊಸಳೆ ಕಣ್ಣೀರು ಸುರಿಸಿದ್ದಾರೆ. ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾದ ಕೊರಗ ಸಮುದಾಯದ ಮೇಲೆ ಸಚಿವರಿಗೆ ಕಾಳಜಿ ಇದ್ದರೆ ವರ ಸಹಿತ ಕೊರಗ ಸಮುದಾಯದ 7 ಮಂದಿಯ ವಿರುದ್ಧ ಪೊಲೀಸರು ದಾಖಲಿಸಿದ ಪ್ರಕರಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿವೃತ್ತ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್ ಮಾತನಾಡಿದರು.
ಸಂಘಟನೆಗಳ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಬಶೀರ್ ಪಂಜಿಮೊಗರು, ಯೋಗೀಶ್ ಜಪ್ಪಿನಮೊಗರು, ಭಾರತಿ ಬೋಳಾರ, ವಾಸುದೇವ ಉಚ್ಚಿಲ್, ಜಯಂತಿ ಬಿ. ಶೆಟ್ಟಿ, ಮನೋಜ್ ವಾಮಂಜೂರು, ಮಹಾಬಲ ದೆಪ್ಪಲಿಮಾರ್, ಮುಸ್ತಫಾ, ಸಂತೋಷ್, ಸುನಂದಾ ಕೊಂಚಾಡಿ, ಅಸುಂತಾ ಡಿಸೋಜ ಮತ್ತಿತರರು ಪಾಲ್ಗೊಂಡಿದ್ದರು.