ಮಹಿಳಾ ಕಾಂಗ್ರೆಸ್‌ನಿಂದ ಸಂಸದ ನಳೀನ್ ಕಟೀಲ್‌ಗೆ ಫಿನಾಯಿಲ್ ರವಾನೆ

ಕೊಪ್ಪಳ: ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಳೀನ್ ಕುಮಾರ್ ಕಟೀಲ್‌ಗೆ ಅಂಚೆ ಮುಖಾಂತರ ಫೆನಾಯಿಲ್ ರವಾನೆ ಮಾಡಲಾಯಿತು.

ಇಂದು ಕೊಪ್ಪಳ ನಗರದ ಅಂಚೆ ಕಚೇರಿ ಮುಂಭಾಗ ನಡೆದ ಮೌನ ಪ್ರತಿಭಟನೆ  ಉದ್ದೇಶಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಸಂಸದ ನಳೀನ್‌ಕುಮಾರ್ ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದು, ಡ್ರಗ್ಸ್ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದು, ದೇಶದ ಎಲ್ಲಾ ಉನ್ನತ ತನಿಖಾ ಸಂಸ್ಥೆಯವರು ಕೂಡಲೇ ನಳೀನ್‌ಕುಮಾರ್ ಅವರನ್ನು ಬಂಧಿಸಿ, ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಮಾಹಿತಿ ಪಡೆಯಬೇಕು. ಅವರ ಹಿಂದೆ ದೊಡ್ಡ ಡ್ರಗ್ಸ್ ಮಾಫಿಯಾ ಗ್ಯಾಂಗ್ ಇರುವ ಅನುಮಾನ ದಟ್ಟವಾಗಿದೆ. ಅನುಮಾನ ಹೋಗಲಾಡಿಸಲು ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನಿ ಅವರು ತಾವೇ ಮುಂದಾಗಬೇಕು ಎಂದರು.

ಈಚೆಗೆ ಗುಜರಾತ್ ಆದಾನಿ ಬಂದರಿನಲ್ಲಿ ಸಿಕ್ಕ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಪತ್ತೆಯಾದರೂ ಸಹ ಬಿಜೆಪಿ ಸರಕಾರಗಳ ಮೌನ ನೋಡಿದರೆ ದೇಶದ ಜನರಿಗೆ ಬಿಜೆಪಿನೇ ಡ್ರಗ್ಸ್ ಕೊಡುತ್ತಿದೆಯಾ ಎಂಬ ಅನುಮಾನ ಬರುತ್ತದೆ, ರಾಹುಲ್ ಗಾಂಧಿಯವರ ಬಗ್ಗೆ  ಆಪಾದನೆ ಮಾಡುವಾಗ ಮೈ ಮೇಲೆ ಎಚ್ಚರ ಇರಬೇಕು, ನಶೆಯಲ್ಲಿ ಮಾತನಾಡುವದನ್ನು ಬಿಡಬೇಕು, ಬಿಟ್ಟಿ ಪ್ರಚಾರದ ತೆವಲನ್ನು ಬಿಟ್ಟು, ಸಂಸದರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ ಪ್ರಚಾರ ಪಡೆಯಲಿ.

ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ನಳೀನ್ ಚಾರಿತ್ರ್ಯದಲ್ಲಿ ಇಲ್ಲ. ಅದಕ್ಕಾಗಿ ಅವರು ತಮ್ಮ ಹೊಲಸು ನಾಲಿಗೆಯನ್ನು ತೊಳೆದುಕೊಳ್ಳಲಿ ಎಂದು ಅಂಚೆ ಸ್ಪೀಡ್ ಪೋಸ್ಟ್ ಮೂಲಕ ಮಹಿಳಾ ಕಾಂಗ್ರೆಸ್ ನಿಂದ ಉಚಿತವಾಗಿ ಫಿನಾಯಿಲ್ ಕಳಿಸಿದ್ದೇವೆ ಬಾಯಿ ತೊಳೆದುಕೊಂಡು ದೇಶದ ಜನರ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಕ್ಷಮೆ ಕೇಳಿ ಅದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕಿರಿ ಎಂದು ಆಗ್ರಹಿಸಿದರು.

ಇದೇ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವಿಶಾಲಾಕ್ಷಿ ವಿ. ತಾವರಗೇರಿ ಮಾತನಾಡಿ, ನಳೀನ್‌ಕುಮಾರ್ ಕಟೀಲ ತಮ್ಮ ಕುಟಿಲ ಬುದ್ಧಿಯನ್ನು ಬಿಟ್ಟು ಸಮಾಜ ಸುಧಾರಿಸುವ ಕಾರ್ಯ ಮಾಡಲಿ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಜನರ ಋಣ ತೀರಿಸಲಿ. ಪ್ರಚಾರಕ್ಕಾಗಿ ಕಾಂಗ್ರೆಸ್ ಮುಖಂಡರನ್ನು ತೆಗಳುವ ಕೆಲಸ ಬಿಡಲಿ, ಸಂಸ್ಕಾರವAತ ಪಕ್ಷ ಎಂದು ಹೇಳಿಕೊಳ್ಳುವ ಸಂಘ ಪರಿವಾರಗಳು ತಮ್ಮ ಮುಖಂಡರಿಗೆ ಬುದ್ಧಿ ಹೇಳಲಿ ಎಂದರು. ನಗರ ಕಾಂಗ್ರೆಸ್ ಘಟಕ ಅಧ್ಯಕ್ಷೆ ಸವಿತಾ ಗೋರಂಟ್ಲಿ ಮಾತನಾಡಿ, ಮಾನಗೇಡಿ ಕೆಲಸ ಬಿಟ್ಟು ಮಾನವಂತರಾಗಿ ಬದುಕುವದನ್ನು ಕಲಿಯಲಿ ಎಂದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ವಿರುದ್ಧ ಘೋಷಣೆ ಕೂಗಿ, ಶೀಘ್ರ ಕ್ಷಮೆ ಕೇಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್. ಟಿ. ಘಟಕದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮಾಜಿ ಪಟ್ಟಣ ಪಂಚಾಯತ ಸದಸ್ಯೆ ಯಶೋಧಾ ಶಿವಶಂಕರ ಮರಡಿ, ಶಿಲ್ಪಾ ಭಾಗ್ಯನಗರ, ಜಯಶ್ರೀ ಕಿನ್ನಾಳ, ಮಾರುತಿ ಬೊಮ್ಮನಾಳ ಕಾಟ್ರಳ್ಳಿ, ಹನುಮಂತ ನಾಯಕ ಡಂಬ್ರಳ್ಳಿ, ನಂದೀಶಗೌಡ ಎಲ್ಲನಗೌಡ್ರ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *