ಕೊಪ್ಪಳ: ಜಮೀನು ವಿವಾದದ ಹಿನ್ನಲೆಯಲ್ಲಿ 46 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಅಘಾತಕಾರಿ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ. ದುಷ್ಕರ್ಮಿಗಳು ಸಂತ್ರಸ್ತ ಮಹಿಳೆಯ ಪತಿಯ ಮೇಲೆ ಹಲ್ಲೆ ಕೂಡಾ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು 16 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳಲ್ಲಿ ಹಲವರು ಸಂತ್ರಸ್ತ ಮಹಿಳೆಯ ಸಂಬಂಧಿಕರು ಎಂದು ವರದಿಯಾಗಿದೆ.
ಘಟನೆ ಜುಲೈ 25ರಂದು ನಡೆದಿದೆ ಎಂದು TNIE ವರದಿ ಮಾಡಿದೆ. ಘಟನೆಯ ಬಗ್ಗೆ ಸಂತ್ರಸ್ತೆಯ ಕುಟುಂಬ ಸದಸ್ಯರು ಆಗಸ್ಟ್ 8 ರಂದು ದೂರು ನೀಡಿದ್ದಾರೆ. ಸಂತ್ರಸ್ತ ದಂಪತಿ ಮತ್ತು ಅವರ ಸಂಬಂಧಿಕರ ನಡುವೆ ತುಂಡು ಭೂಮಿ ವಿಚಾರವಾಗಿ ವಿವಾದವಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ವಿವಾದಿತ ಜಮೀನಿನಲ್ಲಿ ಸಾಗುವಳಿ ಮಾಡದಂತೆ ದಂಪತಿಗೆ ಎಚ್ಚರಿಕೆ ನೀಡಿದ್ದರು. ಆದರೆ ಮಹಿಳೆ ಮತ್ತು ಆಕೆಯ ಪತಿ ಜಮೀನು ತಮಗೆ ಸೇರಿದ್ದು ಎಂದು ಪ್ರತಿಪಾದಿಸಿ ಸಾಗುವಳಿ ಮಾಡಿದ್ದರು.
ಇದನ್ನೂ ಓದಿ: ಮುಂದಿನ ವರ್ಷವು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತೇನೆ : ಪ್ರಧಾನಿ ಮೋದಿ
ಮಹಿಳೆ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಂಪು ಅವರ ಮೇಲೆ ಹಾಡಹಗಲೆ ದಾಳಿ ಮಾಡಿದೆ. ಆರೋಪಿಗಳು ತನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದು, ಘಟನೆಯ ವಿಡಿಯೊ ಚಿತ್ರೀಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ದಾಳಿ ನಡೆಸಿದ ದುಷ್ಕರ್ಮಿಗಳು ಮಹಿಳೆಯನ್ನು ಅರೆಬೆತ್ತಲೆಯಾಗಿ ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
“ವೀಡಿಯೊಗಳು ವೈರಲ್ ಆದ ನಂತರ ಹಳ್ಳಿಯ ಜನರು ಆಘಾತಕ್ಕೊಳಗಾಗಿದ್ದಾರೆ. ಆರೋಪಿಗಳ ಪತ್ತೆಗೆ ಆಗುತ್ತಿರುವ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸಿ, ನನ್ನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡುತ್ತೇವೆ. ನಾಚಿಕೆಯಿಂದ ಗ್ರಾಮದಲ್ಲಿ ಬದುಕುವುದು ಹೇಗೆಂದು ತಿಳಿಯುತ್ತಿಲ್ಲ” ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.
ಪ್ರಕರಣ ದಾಖಲಾದರೂ ಪೊಲೀಸರು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮಹಿಳೆ ಮತ್ತು ಆಕೆಯ ಕುಟುಂಬ ಸೋಮವಾರ ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಹಳ್ಳಿಯಿಂದ ಪರಾರಿಯಾಗಿದ್ದಾರೆ ಎಂದು ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು TNIE ವರದಿ ಹೇಳಿದೆ.
ವಿಡಿಯೊ ನೋಡಿ: ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ : ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ವಿಶ್ಲೇಷಣೆ Janashakthi Media