ಕೊಪ್ಪಳ: ನಗರದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳನ್ನು ಒಂದೇ ವಾಕ್ಯದಲ್ಲಿ ಹೇಳಿದರೆ ಕೊಪ್ಪಳವು ರಾಜ್ಯದ ಗಾಝಾ ಪಟ್ಟಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಇತ್ತೀಚೆಗೆ ಹೇಳಿದರು. ಕೊಪ್ಪಳ
ಪೀಪಲ್ಸ್ ಎಜುಕೇಶನ್ ಸೊಸೈಟಿ, ಸಿಂಚನ ಜನಸೇವಾ ಟ್ರಸ್ಟ್, ಚಿನ್ಮಯಿ ಪ್ರಕಾಶನ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಬಿ.ತಿರುಪತಿ ಶಿವನಗುತ್ತಿ ಅವರ ಕವನ ಸಂಕಲನ”ಎಂದೂ ಮುಳುಗದ ಸೂರ್ಯ” ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗಾಝಾದಲ್ಲಿನ ಜನರು ಇಸ್ರೇಲ್ ನಿಂದ ಏನು ತೊಂದರೆಗಳನ್ನು ಅನುಭವಿಸುತ್ತಿದ್ದಾರೋ ಅಂತಹ ತೊಂದರೆಗಳನ್ನು ಕೊಪ್ಪಳದಲ್ಲಿ ದಲಿತರು ಅನುಭವಿಸುತ್ತಿದ್ದಾರೆ, ಇದು ಖಂಡನೀಯ ಎಂದರು.
ಈ ವ್ಯವಸ್ಥೆಯಿಂದ ಹೊರಬರಲು ಅಕ್ಷರ, ಶಿಕ್ಷಣದಿಂದ ಮಾತ್ರ ಸಾಧ್ಯ.ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಆ ವಿಷಯದಲ್ಲಿ ಹಿಂದೇಟು ಹಾಕಬಾರದು ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸ್ಥಾನ ಬಲದಿಂದ ಕಿನ್ನಾಳ ಗ್ರಾಮವನ್ನು ದತ್ತು ತೆಗೆದುಕೊಂಡ ಬಳಿಕ ಅಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಸ್ಮಶಾನ ಒತ್ತುವರಿ ತೆರವು , ರಸ್ತೆ, ಮೂಲ ಸೌಕರ್ಯಗಳು, ಹೈದರಾಬಾದ್ ಕರ್ನಾಟಕ 371 (ಜೆ) ಪ್ರಮಾಣ ಪತ್ರಗಳ ವಿತರಣೆ ಮತ್ತಿತರ ಕಾರ್ಯಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸುತ್ತಿರುವದರಿಂದ ಜಿಲ್ಲೆಯಲ್ಲಿ 2023 ರಲ್ಲಿ 64 ಪ್ರಕರಣಗಳು, 2024 ರಲ್ಲಿ 43 ಹಾಗೂ 2025 ರಲ್ಲಿ ಈವರೆಗೆ 19 ಪ್ರಕರಣಗಳು ದಾಖಲಾಗಿವೆ. ಕೊಪ್ಪಳ
ಇವು ಪೊಲೀಸ್ ಠಾಣೆಗೆ ಹೋಗಿ ದಾಖಲಾಗಿರುವ ಪ್ರಕರಣಗಳು ಮಾತ್ರ ಆಗಿವೆ. ಆದರೆ ವ್ಯವಸ್ಥಿತವಾಗಿ ಪ್ರಕರಣಗಳು ದಾಖಲಾಗದೇ ಇರುವಂತೆ ನೋಡಿಕೊಳ್ಳುವ ವ್ಯವಸ್ಥೆ ,ಒತ್ತಡ ಹಾಕುವ ತಂತ್ರಗಾರಿಕೆ ನಡೆಯುತ್ತಿರುವುದು ಗಮನದಲ್ಲಿದೆ. ಅನೇಕ ಸಂದರ್ಭಗಳಲ್ಲಿ ವಿಚಾರಣೆಯನ್ನೇ ಮಾಡದೇ ಹೇಳಿಕೆ ಪಡೆಯುವ ಜಾಯಮಾನ ಇಂದಿಗೂ ಚಾಲ್ತಿಯಲ್ಲಿರುವುದು ವೇದ್ಯವಾಗುತ್ತಿದೆ. ಆದ್ದರಿಂದ ತನಿಖಾಧಿಕಾರಿಗಳ ಎದುರಿಗೆ ಹಾಗೂ ನ್ಯಾಯಾಲಯಗಳ ವಿಚಾರಣೆ ಸಂದರ್ಭದಲ್ಲಿ ಹೇಳಿಕೆಗಳು ವಿಭಿನ್ನ ಎಂದು ಸಾಬೀತು ಪಡಿಸಿ ನೈಜ ಪ್ರಕರಣಕ್ಕೆ ಹಿನ್ನಡೆ ಉಂಟು ಮಾಡುವ ವ್ಯವಸ್ಥೆ ಈ ಜಿಲ್ಲೆಯಾದ್ಯಂತ ಕೆಲಸ ಮಾಡುತ್ತಿರುವುದನ್ನು ಗಮನಿಸಲಾಗುತ್ತಿದೆ ಎಂದರು.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗುವಂತಹ ರೀತಿಯಲ್ಲಿ ವರ್ತಿಸಿದವರ ಮೇಲೆ ಪ.ಜಾ.ಹಾಗೂ ಪ.ಪಂ.ಮೇಲಿನ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳದೇ ಬೇರೆ ಕಾನೂನುಗಳಡಿ ಪ್ರಕರಣ ದಾಖಲಿಸಿಕೊಂಡು ವಂಚಿಸುವ ಕಾರ್ಯಗಳು ಜಿಲ್ಲೆಯಲ್ಲಿ ನಡೆಯುತ್ತಿವೆೆ .ಜಿಲ್ಲೆಯಾದ್ಯಂತ ದಲಿತ ಸಮುದಾಯಗಳಿಗೆ ರಕ್ಷಣೆ ಇಲ್ಲವಾದ್ದರಿಂದ ಸ್ವತಃ ನನಗೆ ಇಲ್ಲಿನ ಪೊಲೀಸರು ನೀಡಿದ್ದ ಬೆಂಗಾವಲು ವ್ಯವಸ್ಥೆಯನ್ನು ವಾಪಸು ಮಾಡಿದ್ದೇನೆ. ನನಗೆ ಬಾಸಾಹೇಬರು ನೀಡಿರುವ ಶಿಕ್ಷಣ, ಭೀಮಪಥ, ಭೀಮಮಾರ್ಗದಲ್ಲಿ ಸುರಕ್ಷಿತ ರಕ್ಷಣೆ ಇದೆ ಎಂದು ಸಾರಿದ್ದೇನೆ. ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕದಲ್ಲಿಯೇ ಅತಿಹೆಚ್ಚು ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಬಿ.ತಿರುಪತಿ ಶಿವನಗುತ್ತಿ ಅವರು ತಮ್ಮ ಸಂಕಲನದಲ್ಲಿ ಲಾವಣಿ ರೂಪದಲ್ಲಿ ಬರೆದ ಪದ್ಯಗಳು ಇಂತಹ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ದಲಿತ ಸಮಾಜ, ಸಂಘಟನೆಗಳು ದಮನಿತರಿಗೆ ಕಾನೂನು ನೆರವು ನೀಡಲು ಅಲ್ಲಿನ ಸುಶಿಕ್ಚಿತರು, ಕಾನೂನು ಪದವೀಧರರು ಸೇರಿ ಒಂದು ಕಾನೂನು ನೆರವು ಘಟಕ ಮಾಡಿಕೊಂಡು ನೊಂದವರಿಗೆ ಸಲಹೆ, ಸಹಕಾರ ನೀಡಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯೋ, ದೇಶದೊಳಗಿನ ಸ್ವಾತಂತ್ರ್ಯವೂ ಕೂಡ ಅಷ್ಟೇ ಮುಖ್ಯ. ದಕ್ಷಿಣ ಕೊರಿಯಾದಲ್ಲಿ ಆರ್ಥಿಕ ಹಿನ್ನಡೆ ಉಂಟಾದಾಗ ಅಲ್ಲಿನ ನಾಗರಿಕರು ದೇಶಕ್ಕಾಗಿ ತಮ್ಮ ಬೆಲೆ ಬಾಳುವ ಒಡವೆ,ವಸ್ತ್ರಗಳನ್ನು ಸ್ವಯಂಪ್ರೇರಣೆಯಿಂದ ದೇಶಕ್ಕಾಗಿ ಅರ್ಪಿಸಲು ಮುಂದೆ ಬಂದರು ಈ ಮಾದರಿಯ ದೇಶಪ್ರೇಮದ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಕೃತಿ ಕುರಿತು ಸಾಹಿತಿ ಡಿ.ರಾಮಣ್ಣ ಆಲ್ಮರ್ಸೀಕೇರಿ ಮಾತನಾಡಿ,ದಲಿತ ಸಮುದಾಯ ಅನುಭವಿಸುತ್ತಿರುವ ನೋವು,ತಲ್ಲಣಗಳನ್ನು ಕವಿ ತಿರುಪತಿ ಶಿವನಗುತ್ತಿ ಅವರು ಈ ಸಂಕಲನದಲ್ಲಿ ಸಮರ್ಥವಾಗಿ ಅಭ್ಯವ್ಯಕ್ತಿಸಿದ್ದಾರೆ. ಸಂಕಲನದಲ್ಲಿರುವ ಸುಮಾರು 50 ಕವಿತೆಗಳು ಸಮಾಜದ ಅಂಗವೈಕಲ್ಯ,ಶೋಷಣೆ, ಅಸಮಾನತೆಯ ಅವಮಾನಗಳನ್ನು ಕಾವ್ಯವಾಗಿ ಹಿಡಿದಿಟ್ಟಿವೆೆ. ನಮ್ಮ ಓರೆ ಕೋರೆಗಳನ್ನು ತಿದ್ದಿಕೊಳ್ಳಲು ಕೈ ದೀವಿಗೆಯಾಗಿವೆ. ಸ್ವಾತಂತ್ರ್ಯ, ಸಂವಿಧಾನ ಜಾರಿಗೊಂಡು 75 ವರ್ಷಗಳ ಬಳಿಕವೂ ದಮನಿತರಿಗೆ ಇನ್ನೂ ಸ್ವಾತಂತ್ರ್ಯ ಗಗನಕುಸುಮವಾಗಿದೆ ಎಂಬ ಆಶಯಗಳನ್ನು ಇಲ್ಲಿನ ಕವಿತೆಗಳು ಧ್ವನಿಸುತ್ತವೆ.ಇಲ್ಲಿನ ಬಹುತೇಕ ಕವಿತೆಗಳು ಲಯಬದ್ಧವಾಗಿ ಹಾಡುವ,ಜಾಗೃತಿ ಮೂಡಿಸುವ ರಚನೆಗಳಾಗಿವೆ ಎಂದರು.
ಮಂಡ್ಯದ ಸಾಹಿತಿ, ಹೋರಾಟಗಾರ ಅಭಿ ಒಕ್ಕಲಿಗರ ಅವರು ಅಂಬೇಡ್ಕರ್ ಎನ್ನುವ ಎಂದೂ ಮುಳುಗದ ಸೂರ್ಯ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಛಲವಾದಿ ಜಾಗೃತಿ ವೇದಿಕೆಯ ಸಂಚಾಲಕ ಕೃಷ್ಣ ಎಂ.ಇಟ್ಟಂಗಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು,
ಜಿಲ್ಲಾ ಛಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ.ಬೆಲ್ಲದ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ನಿವೃತ್ತ ಪ್ರಾಚಾರ್ಯ ಸೋಮನಗೌಡ ಪಾಟೀಲ, ಪತ್ರಕರ್ತ ಚಾಮರಾಜ ಸವಡಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಪ ಸಭಾಪತಿ ಡಾ.ಶ್ರೀನಿವಾಸ ಹ್ಯಾಟಿ, ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ,ಜಿಲ್ಲಾ ಎಸ್ ಸಿ , ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಮ್ಯಾಗಳಮನಿ, ಗುಡದಪ್ಪ ಹಡಪದ, ವೇಣುಗೋಪಾಲ, ಪ್ರಕಾಶಕ ರಾಜೇಶ್ ಯಾವಗಲ್, ಬಸವರಾಜ ಕಡೇಮನಿ ಮತ್ತಿತರರು ವೇದಿಕೆಯಲ್ಲಿದ್ದರು.
ಇದನ್ನೂ ನೋಡಿ: ಡಾ. ಎಸ್. ಬಾಲಚಂದ್ರರಾವ್ ಜೊತೆಗಿನ ಒಡನಾಟ ಹಂಚಿಕೊಂಡ ಜಿ.ಆರ್ Janashakthi Media