ಕೊಪ್ಪಳ : ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಧರಣಿ ನಡೆಯುತ್ತಿದೆ. ಖಾಸಗಿ ಏಜೆನ್ಸಿಗೆ ನೀಡಿದ ಟೆಂಡರ್ ರದ್ದು ಮಾಡಿ, ನೇರವಾಗಿ ಇಲಾಖೆಯಿಂದ ವೇತನ ನೀಡಲು ಆಗ್ರಹಿಸಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರು ಧರಣಿ ಕುಳಿತಿದ್ದ ಪ್ರತಿಭಟನಾ ನಿರತರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಹೋರಾಟ ನಿರತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ ನಲಿನ್ ಅತುಲ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಹೋರಾಟ ನಿರತರು ಆಗ್ರಹಿಸಿದರು. ಮೂರು ದಿನಗಳಿಂದ ಬಿಸಿಲು, ಚಳಿ ಲೆಕ್ಕಿಸದೇ ಹೋರಾಡಿದರೂ ನಮಗೆ ಬೆಲೆಯೇ ಇಲ್ಲದಂತೆ ಜಿಲ್ಲಾಧಿಕಾರಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಆದರೆ ಜಿಲ್ಲಾಧಿಕಾರಿ ಮಾತ್ರ ಸ್ಥಳಕ್ಕೆ ಬರಲೇ ಇಲ್ಲ.
ಹೋರಾಟ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಆಕ್ರೋಶಗೊಂಡ ಇನ್ನುಳಿದ ಹೋರಾಟಗಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಹಾಗೂ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿದರು.
ಸಿಬ್ಬಂದಿಗೆ ಕನಿಷ್ಠ ಮಾಸಿಕ ವೇತನ ₹31 ಸಾವಿರ ವೇತನ ಪಾವತಿಸಬೇಕು, ಇಲಾಖೆಯಿಂದಲೇ ನೇರವಾಗಿ ವೇತನ ಕೊಡಬೇಕು, ನಿವೃತ್ತಿ ತನಕ ಸೇವಾ ಭದ್ರತೆ ಒದಗಿಸಬೇಕು, ಖಾಸಗಿ ಎಜೆನ್ಸಿಗಳಿಗೆ ನೀಡಿದ ಟೆಂಡರ್ ರದ್ದು ಪಡಿಸಬೇಕು, ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ವಿವಿಧೋದ್ದೇಶ ಸಹಕಾರ ಸಂಘವನ್ನು ನಮ್ಮ ಜಿಲ್ಲೆಯಲ್ಲಿಯೂ ಆರಂಭಿಸಲು ತುರ್ತು ಸಭೆ ನಡೆಸಬೇಕು ಎಂದು ಸಂಘಟನೆಯ ಗ್ಯಾನೇಶ್ ಕಡಗದ ಆಗ್ರಹಿಸಿದರು.