- ಡಿಸ್ಚಾರ್ಜ್ ಆಗಿದ್ದ 23 ಜನರನ್ನು ಸಾವಿನ ಪಟ್ಟಿಗೆ ಸೇರಿಸಿದ ಆರೋಗ್ಯ ಇಲಾಖೆ
- ತಂತ್ರಾಂಶದಲ್ಲಿ ನೋಂದಣಿ ವೇಳೆ ಎಡವಟ್ಟ
- 91 ಜನರ ಬಗ್ಗೆ ಮಾಹಿತಿಯೇ ಇಲ್ಲ
ಕೊಪ್ಪಳ : ಕೊಪ್ಪಳ ಜಿಲ್ಲಾಧಿಕಾರಿ ಕೊವಿಡ್ ಸಾವಿನ ಸಂಖ್ಯೆಯಲ್ಲಾದ ಮಹಾ ಎಡವಟ್ಟನ್ನು ಬಯಲು ಮಾಡಿದ್ದಾರೆ. 23 ಜನ ಜೀವಂತವಿದ್ದರೂ, ಕೊರೊನಾಗೆ ಬಲಿ ಅಂತ ಅಧಿಕಾರಿಗಳು ಲೆಕ್ಕ ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳ ಎಡವಟ್ಟನ್ನು ಕೊಪ್ಪಳ ಡಿಸಿ ಬಯಲು ಮಾಡಿದ್ದಾರೆ.
23 ಜನ ಡಿಸ್ಚಾರ್ಜ್ ಆಗಿರುವುದನ್ನ ಸಾವನ್ನಪ್ಪಿದ್ದಾರೆ ಆರೋಗ್ಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ ಎಂದು ಡಿಸಿ ವಿಕಾಸ್ ಕಿಶೋರ್ ಹೇಳಿದ್ದಾರೆ. ಸಾವನ್ನಪ್ಪಿದ್ದಾರೆ ಎಂದು ದಾಖಲಿಸಲಾದವರ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿದಾಗ ಈ ಮಾಹಿತಿ ಲಭ್ಯವಾಗಿದೆ. ಕುಟುಂಬಸ್ಥರಿಂದ ಮಾಹಿತಿ ಪಡೆದ ನಂತರ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಎಡವಟ್ಟಿಗೆ ತಲೆ ಚಚ್ಚಿಕೊಳ್ಳುವಂತಾಗಿದೆ. ಕೋವಿಡ್ 19 ನಿಂದ ಗುಣಮುಖರಾಗಿ ಬಿಡುಗಡೆ ಹೊಂದುವಾಗ ಕಂಪ್ಯೂಟರ್ ನೋಂದಣಿ ಮಾಡುವಾಗ ಡಿಸ್ಚಾರ್ಜ್ ಮತ್ತು ಡೆತ್ ಕಾಲಂ ಎಂದು ಇದ್ದು ಡಿಸ್ಚಾರ್ಜ್ ಬದಲಿಗೆ ಡೆತ್ ಕಾಲಂ ಎಂದು ಒತ್ತಿರಬಹುದು ಎಂದು ಹೇಳಲಾಗುತ್ತಿದೆ. ಆರೋಗ್ಯ ಅಧಿಕಾರಿಗಳ ಎಡವಟ್ಟಿಗೆ ಜಿಲ್ಲೆಯ ಜನ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆ ಒಟ್ಟು ಸೇರಿ ಕೊಪ್ಪಳ ಜಿಲ್ಲೆಯಲ್ಲಿ 571 ಜನ ಮೃತ ಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಸಿದ್ಧಪಡಿಸಿದ ಅಂಕಿ ಅಂಶಗಳಲ್ಲಿ ಆರೋಗ್ಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.ಎನ್ನುವ ಅಂಶ ಈಗ ಬಹಿರಂಗ ಗೊಂಡಿದೆ. ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್‌ರವರು ಈ ಬಗ್ಗೆ ಮಾಹಿತಿ ನೀಡಿದ್ದು, ಕೊವಿಡ್‌ನಿಂದ 517 ಜನರ ಸಾವನ್ನಪ್ಪಿದ್ದಾರೆ. ಈ ಪೈಕಿ 371 ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ದಾಖಲಾತಿ ಸಂಗ್ರಹಿಸಲಾಗುತ್ತಿದೆ. 91 ಜನರ ಸಾವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ ಅಂತ ಅವರು ತಿಳಿಸಿದ್ದಾರೆ.
91 ಜನರ ಸಾವಿನ ಮಾಹಿತಿ ನಮಗೆ ಸಿಕ್ಕಿಲ್ಲವೆಂದು ತಿಳಿಸಿದ ಜಿಲ್ಲಾಧಿಕಾರಿ, ಅದರಲ್ಲಿ ಕೆಲವರು ಬೇರೆ ಬೇರೆ ಜಿಲ್ಲೆಯವರಿದ್ದಾರೆ. ಕೆಲವರು ಪರಿಹಾರ ಬೇಡ ಅಂದಿದ್ದಾರೆ. ಕೆಲವರ ಹೆಸರುಗಳು 2 ಬಾರಿ ದಾಖಲಾಗಿದೆ. ಹೀಗಾಗಿ 91 ಜನರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದು ಉದ್ದೇಶಪೂರ್ವಕವಾಗಿ ನಡೆದ ಪ್ರಮಾದವೋ, ಅಥವಾ ನಿರ್ಲಕ್ಷ್ಯದಿಂದಾದ ಪ್ರಮಾದವೊ ಗೊತ್ತಾಗಬೇಕಿದೆ. ಕೋವಿಡ್ ಸಾವಿನಲ್ಲಿ ಗೋಲ್ ಮಾಲ್ ನಡೆದಿರುವ ಸಾಧ್ಯತೆ ಇದ್ದು, ಇನ್ನಷ್ಟು ತನಿಖೆ ನಡೆಯಬೇಕಿದೆ. ಇನ್ನೂ ಆರೋಗ್ಯ ಇಲಾಖೆಯ ಈ ರೀತಿಯ ನಿರ್ಲಕ್ಷ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಆಗ್ರಹಿಸಿದ್ದಾರೆ.