-ಜಿ.ಎನ್.ನಾಗರಾಜ
ಕೊಮಗಾಟಮಾರು ಈ ಹೆಸರು ಕೇಳಿದ್ದೀರಾ !
ಭಾರತೀಯ ವಲಸೆಗಾರರನ್ನು ಕ್ರಿಮಿನಲ್‌ಗಳಂತೆ ಕಟ್ಟಿ ಹೊರಹಾಕಲ್ಪಟ್ಟ ದೃಶ್ಯ ನೋಡಿ ದೇಶದ ಪ್ರಜೆಗಳ ಮನ ಮಿಡಿಯುತ್ತಿದೆ. 110 ವರ್ಷಗಳ ಹಿಂದೆ ಅಮೆರಿಕಾ ಖಂಡ 376 ವಲಸೆಗಾರರನ್ನು ಭಾರತಕ್ಕೆ ಹಿಂದಟ್ಟಿದ ಇಂತಹುದೇ ಪ್ರಸಂಗವೊಂದು ನೆನಪಿಗೆ ಬರುತ್ತಿದೆ. ಬ್ರಿಟಿಷರ ಅಧೀನದಲ್ಲಿದ್ದ ಭಾರತ ಮತ್ತು ಇಂದಿನ ಸ್ವತಂತ್ರ ಭಾರತದ ನಡುವೆ ಏನು ವ್ಯತ್ಯಾಸ ಎಂಬ ಪ್ರಶ್ನೆ ಮೂಡುತ್ತದೆ.
ಇದಕ್ಕೆ ವ್ಯತ್ಯಾಸ ಇದೆ. ಅಂದು ಈ ಅಮಾನವೀಯ ಘಟನೆ ದೇಶ, ವಿದೇಶಗಳಲ್ಲಿದ್ದ ಭಾರತೀಯರನ್ನು ರೊಚ್ಚಿಗೆಬ್ಬಿಸಿತ್ತು. ದೇಶ ವಿದೇಶಗಳಲ್ಲಿ ಭಾರತೀಯರು ಪ್ರತಿಭಟನೆ, ಹೋರಾಟ ನಡೆಸಿದ್ದರು. ಕೊಮಗಾಟ ಮಾರು ಎಂಬುದೊಂದು ಜಪಾನಿ ಹಡಗು. ಅದನ್ನು ಬಡತನದಿಂದ ನರಳುತ್ತಿದ್ದ 376 ಭಾರತೀಯರು ಕೆನಡಾಕ್ಕೆ ಹೋಗಿ ಅಲ್ಲಿ ಬದುಕು ಕಂಡುಕೊಳ್ಳಲು ಬಾಡಿಗೆಗೆ ಪಡೆದುಕೊಂಡರು. ಹಾಂಕಾಂಗ್, ಜಪಾನ್ ಮೂಲಕ ಕೆನಡಾದ ವಾಂಕೂವರ್ ನಗರವನ್ನು ತಲುಪಿದರು. ಆದರೆ ವಾಂಕೂವರ್ ನಗರದ ಆಡಳಿತಗಾರರು ಮತ್ತು ಕೆನಡಾದ ಸರ್ಕಾರ ಆ ಹಡಗು ಬಂದರನ್ನು ತಲುಪಲು ಕೂಡಾ ಬಿಡಲಿಲ್ಲ.
ಅವರಿಗೆ ನೀರು, ಊಟ ಕೊಡದೆ ಸೈನ್ಯವನ್ನು ಬಳಸಿ ಹಿಂದಟ್ಟಿದರು. ಆದರೆ ಇದೇ ಸಮಯದಲ್ಲಿ ಕೆನೆಡಾಕ್ಕೆ ವಲಸೆ ಬಂದ ಹತ್ತಾರು ಸಾವಿರ ಯುರೋಪಿನ ಬಿಳಿಯರಿಗೆ ಯಾವ ಅಡೆ ತಡೆಯೂ ಇರಲಿಲ್ಲ. ಇದು ಈ ಪ್ರದೇಶದಲ್ಲಿ ಅನುಸರಿಸುತ್ತಿದ್ದ ಜನಾಂಗ ಬೇಧಕ್ಕೆ ಉದಾಹರಣೆಯಾಗಿದೆ.
ಇದನ್ನೂ ಓದಿ: 2025ರ ವಿಶ್ವದ ಪ್ರಬಲ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಭಾರತಕ್ಕಿಲ್ಲ ಸ್ಥಾನ
ಹೊಸ ಭವಿಷ್ಯವನ್ನು ರೂಪಿಸಿಕೊಳ್ಳ ಹೊರಟ ಇಷ್ಟೂ ಜನರ ಕನಸು ಕಮರಿಹೋಯಿತು. ಆ ಹಡಗು ಮತ್ತೆ ಪಯಣಿಸಿ ಕಲಕತ್ತಾ ಬಳಿಯ ಬಜ್ ಬಜ್ ಬಂದರನ್ನು ಪ್ರವೇಶಿಸಿತು. ಆಗ ಭಾರತವನ್ನು ಆಳುತ್ತಿದ್ದ ಬ್ರಿಟಿಷರು ಈ ವಲಸೆಗಾರರನ್ನು ಅಪರಾಧಿಗಳಂತೆ ಬಂಧಿಸಲು ಪ್ರಯತ್ನಿಸಿದರು. ಸಂಕಟದಿಂದ ತೊಳಲಾಡುತ್ತಿದ್ದ, ಅವಮಾನಗಳಿಂದ ಬೇಸತ್ತಿದ್ದ ಈ ವಲಸೆಗಾರರು ಪ್ರತಿಭಟಿಸಿದರು.
ಬ್ರಿಟಿಷ್ ಪೋಲೀಸರು ಕೆಲವರನ್ನು ಕೊಂದು ಹಾಕಿ ಉಳಿದವರನ್ನು ಬಂಧಿಸಿದರು. ಈ ಜನರ ನಾಯಕರಿಗೆ ಜೈಲು ಶಿಕ್ಷೆ ವಿಧಿಸಿದರು. ಉಳಿದವರನ್ನು ಅವರವರ ಮೂಲ ಗ್ರಾಮಗಳಿಗೆ ತಂದಿಳಿಸಿ ಅಲ್ಲಿಯೇ ನಾಲ್ಕು ವರ್ಷಗಳ ಕಾಲ ಸ್ಥಾನ ಬದ್ಧತೆಯಲ್ಲಿಟ್ಟರು.
ಈ ಪ್ರಕರಣದ ನಂತರ ಕೆನಡಾದಿಂದ ಮೆಕ್ಸಿಕೊವರೆಗೆ ಇಡೀ ಅಮೆರಿಕಾದಲ್ಲಿದ್ದ ವಲಸೆ ಭಾರತೀಯರ ನಡುವೆ ಹಲವಾರು ಪ್ರತಿಭಟನಾ ಸಭೆಗಳು ನಡೆದವು. ಭಾರತದಲ್ಲಿಯೂ ಸ್ವಾತಂತ್ರ್ಯದ ಹಂಬಲವನ್ನು ಹಾಗೂ ಆ ಮೂಲಕ ಚಳುವಳಿಯನ್ನು ಬಲಗೊಳಿಸಿತು.
ಅಮೇರಿಕ ಎಂದರೆ ವಲಸೆಗಾರರ ಸ್ವರ್ಗ ಎಂದೇ ಪರಿಗಣಿತವಾಗಿತ್ತು. ಯುರೋಪಿನ ನಿರುದ್ಯೋಗಿ ಬಡ ಜನರು ಅಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ವಲಸೆ ಹೋದರು. ಆಫ್ರಿಕಾದ ಕಪ್ಪು ಜನರನ್ನು ಪ್ರಾಣಿಗಳಂತೆ ಹಿಡಿತಂದು ಎತ್ತುಗಳಂತೆ ದುಡಿಸಿಕೊಳ್ಳಲಾಯಿತು. ನಂತರವೂ ವಿಶ್ವದೆಲ್ಲೆಡೆಯಿಂದ ಜನ ಅಲ್ಲಿಗೆ ವಲಸೆ ಹೋದರು. ಅಮೇರಿಕವನ್ನು ಸಂಪತ್ತಿನ ಆಗರವಾಗಿ ಬೆಳೆಸಿದರು.
ಈಗ ಈ ಮಾಜಿ ವಲಸೆಗಾರರು ಮತ್ತವರ ಮರಿ ಮಕ್ಕಳಿಗೆ ವಲಸೆಗಾರರು ಬೇಡವಾಗಿದ್ದಾರೆ. ಅವರನ್ನು ಈ ಪಶು ಮನಸ್ಕರು ಪಶುಗಳಂತೆ ಹೊರಹಾಕುತ್ತಿದ್ದಾರೆ. ಯುರೋಪಿನಲ್ಲಿಯೂ ಎಲ್ಲ ಕಠಿಣ ಕೆಲಸಗಳಿಗೆ, ಕಡಿಮೆ ಕೂಲಿಯ ಕೆಲಸಗಳಿಗೆ ವಲಸೆಗಾರರ ಶ್ರಮದ ದುಡಿಮೆಯನ್ನು ಬಳಸಿಕೊಂಡು ಅಲ್ಲಿಯ ಬಿಳಿಯರು ಉನ್ನತ ತಂತ್ರಜ್ಞಾನದ ಕೆಲಸಗಳಿಗೆ ಸೀಮಿತವಾದರು. ತಮ್ಮ ಸಂಪತ್ತನ್ನು ಬೆಳೆಸಿಕೊಂಡರು. ದಶಕಗಳ ನಂತರ ಈಗ ಯುರೋಪಿನ ಹಲವು ದೇಶಗಳಲ್ಲಿ ಇದ್ದಕ್ಕಿದ್ದಂತೆ ಈ ಅಗ್ಗದ ದುಡಿಮೆಗಾರರು ಬೇಡವಾಗಿದ್ದಾರೆ.
2008 ರಲ್ಲಿ ಅಮೇರಿಕ, ಯುರೋಪಿನ ಮಹಾ ಮಹಾ ಬ್ಯಾಂಕುಗಳು ನೆಲಗಚ್ಚಿದ ಮಹಾ ಆರ್ಥಿಕ ಬಿಕ್ಕಟ್ಟಿನ ನಂತರ ಈ ಎಲ್ಲ ದೇಶಗಳ ಆರ್ಥಿಕ ಬೆಳವಣಿಗೆ ಕುಂದಿದೆ.
ಏಕೆ ? ಏಕೆ ??
ಲಾಭ, ಅತಿಲಾಭ, ದುರ್ಲಾಭವನ್ನು ಅರಸಿ ಈ ದೇಶಗಳ ಬಂಡವಾಳಿಗರು ಜಗತ್ತಿನ ಎಲ್ಲ ದೇಶಗಳಿಗೆ, ಆ ದೇಶಗಳ ಕೋಟೆಗಳನ್ನು ಒಡೆದು, ಮುಚ್ಚಿದ ಬಾಗಿಲುಗಳನ್ನು ಒದ್ದು ನುಗ್ಗುತ್ತಿದ್ದಾರೆ . ತಂತಮ್ಮ ದೇಶಗಳಲ್ಲಿನ ಸಾಮಾನ್ಯ ಜನರ ಬದುಕನ್ನು ಅರಳಿಸಲು ಬೇಕಾದ ಆದರೆ ಲಾಭ ಹೆಚ್ಚಿಲ್ಲದ ಉತ್ಪಾದನೆಗಳನ್ನು ಮಾಡುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ಹೀಗೆ ಜಾಗತೀಕರಣದ ಮಂತ್ರ ವಿಶ್ವದ ಬಡದೇಶಗಳ ಆರ್ಥಿಕತೆಗೆ ಮುಳುವಾಗಿ ಈಗ ಅದನ್ನು ಹುಟ್ಟಿಸಿದ ದೇಶಗಳಿಗೇ ಹಾನಿ ಮಾಡುತ್ತಿದೆ. ಈಗ ಅಮೆರಿಕ, ಯುರೋಪುಗಳಿಗೆ ಜಾಗತೀಕರಣ ಬೇಡವಾಗಿದೆ.
ಅದರಿಂದಾಗಿ ಅಲ್ಲಿ ನಿರುದ್ಯೋಗ ದಿನೇ ದಿನೇ ಹೆಚ್ಚುತ್ತಿದೆ. ಆದ್ದರಿಂದ ಈಗ ವಲಸೆಗಾರರ ಮೇಲೆ ಕೆಟ್ಟ ಕಣ್ಣು ಬಿದ್ದಿದೆ. ಟ್ರಂಪ್‌ನಂತಹ ಫ್ಯಾಸಿಸ್ಟ್ ಶಕ್ತಿಗಳು ಶರವೇಗದಲ್ಲಿ ಬೆಳೆಯುತ್ತಿದ್ದಾರೆ. ವಲಸೆಗಾರರನ್ನು ಹೊರಹಾಕುತ್ತೇವೆ ಎಂಬುದೇ ಅವರೆಲ್ಲರ ಗೆಲುವಿನ ಮಂತ್ರವಾಗಿದೆ. ಭಾರತದಲ್ಲಿಯೂ ದ್ವೇಷ ಸಾಮ್ರಾಜ್ಯ ಬೆಳೆಸಲಾಗುತ್ತಿದೆ. ಸಿಟಿಜನ್ ಆಕ್ಟ್ , ಎನ್.ಎ.ಎ ಇಂತಹವು ಇದೇ ಮೂಲದವು. ಇಂದಿನ ಭಾರತದ ಸರ್ಕಾರ ಒಳಗೊಳಗೇ ಹಿಗ್ಗಿನಿಂದ, ಭಾರತದೊಳಗಿನ ಲಕ್ಷಾಂತರ ಜನರನ್ನು ಹೀಗೆ ಹೊರಹಾಕುವ ಮಾದರಿಯಾಗಿ ಈ ಅಮಾನವೀಯ ಕ್ರಮವನ್ನು ನೋಡುತ್ತಿದೆ.
ಅದೇ ಸಮಯದಲ್ಲಿ ಅಮೆರಿಕ ,ಯುರೋಪುಗಳಲ್ಲಿ ಆ ದೇಶಗಳ ಬಡ ಜನರು- ಬಿಳಿಯರು ಕೂಡಾ ಮನೆ ಮಾರು ಕಳೆದುಕೊಂಡು, ಹಸಿವಿನಿಂದ ನರಳುತ್ತಿದ್ದಾರೆ. ಅವರೆಲ್ಲರಿಗೆ ಮನೆ, ಬಟ್ಟೆ, ಆಹಾರವನ್ನು ಒದಗಿಸಿದರೆ ಸಾಕು ಆ ದೇಶಗಳ ಆರ್ಥಿಕ ಬೆಳವಣಿಗೆ ಏರುಮುಖದಲ್ಲಿ ಸಾಗುತ್ತದೆ ಎಂಬ ಸತ್ಯ ಪಥ ಅಲ್ಲಿಯ ಸರ್ಕಾರಗಳಿಗೆ ಬೇಕಾಗಿಲ್ಲ.
ಇಂತಹ ಸಂದರ್ಭದಲ್ಲಿ ” ಮಾನವರೆಲ್ಲರೂ ಹುಟ್ಟಿನಿಂದಲೇ ಸಮಾನರು ” ಎಂಬ ಅವರ ದೇಶಗಳ ಸಂವಿಧಾನದ ಘೋಷ ವಾಕ್ಯ ಮರೆತು ಹೋಗುತ್ತಿದೆ. ಮತ್ತೆ ಮತ್ತೆ ಈ ಘೋಷ ವಾಕ್ಯ ನೆನಪಾಗಬೇಕು. ಅದರ ಉನ್ನತ ಹಂತದ ಬೆಳವಣಿಗೆಯಾದ “ವಿಶ್ವದ ಕಾರ್ಮಿಕರೇ ಒಂದಾಗಿ ” ಎಂಬ ಧ್ಯೇಯ ವಾಕ್ಯ ಮೊಳಗಬೇಕು.
ವಿಶ್ವದೆಲ್ಲೆಡೆ ಕಾರ್ಪೊರೇಟ್ ದಬ್ಬಾಳಿಕೆಯನ್ನು ನಾಶ ಮಾಡದೆ ಮಾನವರನ್ನು ಪಶುಗಳಂತೆ ಕಾಣುವ ಈ ಸಮಸ್ಯೆಗೆ ಕೊನೆ ಹಾಡಲಾಗದು. ಇದನ್ನು ವಿಶ್ವದ ಎಲ್ಲ ಜನ, ಮುಖ್ಯವಾಗಿ ದುಡಿಮೆಗಾರರು ಅರಿತು ಒಂದಾಗಿ ದನಿಯೆತ್ತಿದಾಗ ಮಾತ್ರ ಪರಿಹಾರ.
ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media