ಬಿ.ಎಂ. ಹನೀಫ್
ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರಜೆಗಳ ಹತ್ಯೆ ಆತಂಕ ಹುಟ್ಟಿಸುವಂತಿದೆ. ಅದರಲ್ಲೂ ಅಲ್ಪಸಂಖ್ಯಾತ ಪಂಡಿತರನ್ನು ಗುರಿಯಾಗಿಸಿ ನಡೆಯುತ್ತಿರುವ ಉಗ್ರರ ದಾಳಿ ಖೇದ ಹೆಚ್ಚಿಸುತ್ತಿದೆ.
ಪತ್ರಿಕಾ ವರದಿಗಳ ಪ್ರಕಾರ ಕಳೆದ ಐದು ತಿಂಗಳ ಅವಧಿಯಲ್ಲಿ ಒಟ್ಟು 33 ಜನರನ್ನು ಉಗ್ರರು ಕೊಂದು ಹಾಕಿದ್ದಾರೆ. ನಮ್ಮ ಭದ್ರತಾ ಪಡೆಗಳಿಗೂ ಅಲ್ಲಿ ಭದ್ರತೆ ಇಲ್ಲದಂತಾಗಿದೆ. ಹತ್ಯೆ ಆದವರಲ್ಲಿ 15 ಮಂದಿ ಭದ್ರತಾ ಪಡೆಯ ಸಿಬ್ಬಂದಿ. ನಾಗರಿಕರ ಸಂಖ್ಯೆ 18.
ಹೀಗೆ ಉಗ್ರರಿಂದ ಕೊಲೆಯಾದವರಲ್ಲಿ ಪಂಡಿತರು, ಮುಸ್ಲಿಮರು, ಸಿಕ್ಖರು ಎಲ್ಲರೂ ಇದ್ದಾರೆ. ಕೊಲೆ ಮಾಡುವಾಗ ಉಗ್ರರು ಜಾತಿ, ಧರ್ಮಗಳನ್ನು ನೋಡುತ್ತಿಲ್ಲ, ಭಾರತಕ್ಕೆ ನಿಷ್ಠರಾದವರನ್ನಷ್ಟೇ ನೋಡುತ್ತಿದ್ದಾರೆ ಎನ್ನುವುದೂ ಸ್ಪಷ್ಟ.
ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಯಾಕೆ ವಿಫಲವಾಗಿದೆ? ಪ್ರಜೆಗಳಿಗೆ ಮಾತ್ರವಲ್ಲ ಪೊಲೀಸರಿಗೂ ರಕ್ಷಣೆ ಇಲ್ಲದ ಸ್ಥಿತಿ ನೋಡಿದರೆ ಸರ್ಕಾರ ಕೈ ಸೋತಂತೆ ಕಾಣುತ್ತಿದೆ. ನಿಜಕ್ಕೂ ಕಾಶ್ಮೀರದಲ್ಲಿ ಗಂಭೀರ ಪರಿಸ್ಥಿತಿ ಇದೆ.
ನಿರಂತರ ಹತ್ಯೆಗಳನ್ನು ಖಂಡಿಸಿ ಕಳೆದ 19 ದಿನಗಳಿಂದ ಅಲ್ಲಿನ ಪಂಡಿತರು ಧರಣಿ ಕುಳಿತಿದ್ದಾರೆ. ಅಧಿಕಾರಿಗಳು ಯಾರೂ ಕ್ಯಾರೇ ಅನ್ನುತ್ತಿಲ್ಲ. ಚುನಾಯಿತ ಸರಕಾರವೂ ಇಲ್ಲದ ದುಸ್ಥಿತಿಯಲ್ಲಿ ಈ ಹತ್ಯೆಗಳಿಗೆ ಹೊಣೆಗಾರರು ಯಾರು?
ಇದು ಬಿಜೆಪಿ, ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮುಂತಾಗಿ ಪಕ್ಷಗಳನ್ನು ದೂರಿ ಸುಮ್ಮನಾಗುವ ವಿಷಯವಲ್ಲ. ನೆಹರೂ ಕಾರಣ, ಗಾಂಧಿ ಕಾರಣ ಎಂದು ಕಥೆ ಹೇಳುವ ಸಮಯವೂ ಅಲ್ಲ. ಕಾಶ್ಮೀರಿ ಪಂಡಿತರನ್ನು ರಾಜಕೀಯ ದಾಳವಾಗಿಸಿ, ಹತ್ಯೆಗಳ ಕುರಿತು ನಿರ್ಲಕ್ಷ್ಯ ತಾಳುವುದು ಎಳ್ಳಷ್ಟೂ ಸರಿಯಲ್ಲ.
ಕಾಶ್ಮೀರದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹತ್ಯೆಗಳನ್ನು ನಿಲ್ಲಿಸಲು ತುರ್ತು ರಾಜಕೀಯ ಕ್ರಮ ಕೈಗೊಳ್ಳಬೇಕಾದ ಅಗತ್ಯ ಈಗ ಹೆಚ್ಚಿದೆ. ಕೇಂದ್ರ ಸರಕಾರದ ಆದ್ಯ ಕರ್ತವ್ಯವಿದು.