ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆಗೆ ಕೊನೆಗೂ ತೆರೆ ಬಿದ್ದಿದೆ. ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇಂದು ಕೋಲಾರಕ್ಕೆ ಭೇಟಿ ನೀಡಿರುವ ಅವರು, ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ತಮ್ಮ ಕ್ಷೇತ್ರದ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶ. ಆದರೆ ಸ್ಪರ್ಧೆಯ ವಿಚಾರದಲ್ಲಿ ಪಕ್ಷದ ನಿರ್ಧಾರ ಅಂತಿಮವಾಗಲಿದೆ. ತೀರ್ಮಾನವೇ ಅಂತಿಮವಾಗಲಿದೆ ಎಂದರು.
” ಇಲ್ಲಿ ಯಾವುದೇ ಕಾರಣಕ್ಕೂ ತಪ್ಪು ಸಂದೇಶ ಹೋಗಬಾರದು. ನೀವು ಯಾವುದೇ ಕಾರಣಕ್ಕೂ ಸಂಶಯ ಪಡಬೇಡಿ. ಸಿದ್ದರಾಮಯ್ಯ ಇಲ್ಲಿ ಬರೋದಿಲ್ಲ, ಜನರ ಕಷ್ಟ ಸುಖ ಕೇಳೋದಿಲ್ಲ. ಸಿದ್ದರಾಮಯ್ಯ ಹೊರಗಿನವರು ಅಂತ ಅಪಪ್ರಚಾರ ಮಾಡ್ತಾರೆ. ಆದರೆ ಈಗ ಮಾತು ಕೊಡುತ್ತೇನೆ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಚಡ್ಡಿ ಹಾಕಿದವನು ಕೂಡ, ಅಂದರೇ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಮಾಡಬಹುದು” ಎಂದು ಸಿದ್ದರಾಮಯ್ಯ ಹೇಳಿದರು.
ಕೋಲಾರ ಕಡಿಮೆ ಮಳೆಯಾಗುವ ಜಿಲ್ಲೆಯಾಗಿದೆ. ಇಲ್ಲಿ ಜನರು ಬಹಳ ಶ್ರಮ ಜೀವಿಗಳು. ಹಾಲು, ಹಣ್ಣು, ರೇಷ್ಮೆ ಹಾಗೂ ತರಕಾರಿಗಳನ್ನು ಬಹಳ ಶ್ರಮವಹಿಸಿ ಬೆಳೆಸುತ್ತಾರೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ರಾಜ್ಯದ ಎಲ್ಲಾ ಭಾಗಗಳಿಗೂ ವಿಶೇಷ ಯೋಜನೆಗಳನ್ನು ನೀಡಿ ಅಭಿವೃದ್ಧಿಯ ಪಥ ನಿರ್ಮಿಸಿದ್ದೇವು. ಆದರೆ ಕಳೆದ ಬಾರಿ ಅಧಿಕಾರಕ್ಕೆ ಬರಲು ಆಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಈಗಾಗಲೇ ಭರವಸೆ ನೀಡಿದ್ದಂತೆ, ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಕೋಲಾರ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯಲ್ಲಿ ಯಾವುದೇ ದೊಡ್ಡ ನದಿ ಇಲ್ಲ. ನೇತ್ರಾವತಿ ನದಿಯಿಂದ ನೀರು ತಂದು ಇಲ್ಲಿನ ಕೆರೆಗಳನ್ನು ತುಂಬಿಸಲು ಮುಂದಾಗಿದ್ದೇವೆ. ಇಲ್ಲಿನ ರೈತರು ಬಹಳ ಕಷ್ಟ ಪಡ್ತಾರೆ. ಅದ್ದರಿಂದಲೇ ನಾವು ಕೋಲಾರವನ್ನು ಸಿಲ್ಕ್-ಮಿಲ್ಕ್ ಅಂತ ಹೇಳ್ತೇವೆ. ಈ ಭಾಗದ ಜನರಿಗೆ ನೀರು ಕೊಡುವ ಕೆಲಸವನ್ನು ಮೊದಲು ಮಾಡುತ್ತೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ಮನವಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಮಾಡ್ತೀವಿ. ಈ ಹಿಂದೆ 165 ಭರವಸೆಗಳನ್ನು ಕೊಟ್ಟಿದ್ದೇವು. ಅದರಲ್ಲಿ 160 ಭರವಸೆಗಳನ್ನು ಈಡೇರಿಸಿದ್ದೇವು. ನಾವು ಮಾಡಿದ್ದ ಯಾವುದೇ ಯೋಜನೆ ಈಗ ಮುಂದುವರಿದಿಲ್ಲ ಎಂದರು.
ಇದಕ್ಕೂ ಮುನ್ನ ಕೋಲಾರಕ್ಕೆ ಆಗಮಿಸುತ್ತಿದ್ದಂತೆ ರಾಮಸಂದ್ರ ಗಡಿಯಲ್ಲಿ ಅದ್ಧೂರಿ ಸ್ವಾಗತ ಮಾಡಿದ ಕೈ ಕಾರ್ಯಕರ್ತರು, ಹೂವಿನ ಹಾರ ಹಾಕುವ ಮೂಲಕ ಜೈಕಾರ ಕೂಗಿದರು. ಅವರ ಆಗಮನ ಹಿನ್ನೆಲೆಯಲ್ಲಿ ರಸ್ತೆಯುದ್ಧಕ್ಕೂ ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿಲಾಗಿತ್ತು. ಅವುಗಳನ್ನು ನೋಡಿದ ಸಿದ್ದರಾಮಯ್ಯ, ಬಳಿಕ ನೇರವಾಗಿ ಕೆ.ಹೆಚ್.ಮುನಿಯಪ್ಪ ಅವರ ಮನೆಗೆ ತೆರಳಿದರು.
ಸಾಕಷ್ಟು ಕುತೂಹಲ ಬಳಿಕ ಇತ್ತೀಚೆಗೆಷ್ಟೇ ಕ್ಷೇತ್ರ ಆಯ್ಕೆ ಮಾಡದೇ ಅವರು ಸ್ಪರ್ಧೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ತಮ್ಮ ಕ್ಷೇತ್ರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿ ಅರ್ಜಿ ಸಲ್ಲಿಸಿದ್ದರು. ಇಂದು ತಾವು ಸ್ಪರ್ಧೆ ಮಾಡಲಿರುವ ಕ್ಷೇತ್ರವನ್ನು ಬಹಿರಂಗಪಡಿಸುವ ಮೂಲಕ ಎಲ್ಲ ಕುತೂಹಲಕ್ಕೂ ತೆರೆ ಎಳೆದರು.