ಬೆಂಗಳೂರು : ಕಾಂಗ್ರೆಸ್ ಬಿಜೆಪಿ ನಾಯಕರ ಸ್ವಪ್ರತಿಷ್ಠಿಗೆ ಕಾರಣವಾಗಿದ್ದು ಚಿಕ್ಕಬಳ್ಳಾಪುರ-ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ, ಕೊನೆಗೂ ಪ್ರತ್ಯೇಕವಾಗಿದೆ. ಕೋಲಾರದಿಂದ ಹಾಲು ಒಕ್ಕೂಟ ಪ್ರತ್ಯೇಕಿಸಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ. ಸುಧಾಕರ್ ಒತ್ತಾಸೆಯಂತೆ ಸಂಪುಟ ಒಪ್ಪಿಗೆ ನೀಡಿದ್ದು, ರಮೇಶ್ ಕುಮಾರ್‌ಗೆ ಹಿನ್ನಡೆಯಾಗಿದೆ. ಕೋಚಿಮುಲ್ ವಿಚಾರವಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.
ಕೊಚಿಮುಲ್ ಪ್ರತ್ಯೇಕಿಸುವ ಸುಧಾಕರ್ ಅವರ ಪ್ರಸ್ತಾವನೆಗೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯದ ವಾಕ್ಸಮರ, ಆರೋಪ- ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಈಗ ಕೊಚಿಮುಲ್ ಪ್ರತ್ಯೇಕಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಸ್ವಂತ ಸಹಕಾರ ಹಾಲು ಒಕ್ಕೂಟ ಪಡೆಯುವ ಜಿಲ್ಲೆಯ ಕನಸು ನನಸಾಗಿದೆ. ಇದರಿಂದ ಜಿಲ್ಲೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬಹಳಷ್ಟು ನೆರವಾಗಲಿದೆ ಎಂದು ಜಿಲ್ಲೆಯ ಜನ ಹೇಳುತ್ತಿದ್ದಾರೆ.
‘ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ 14 ವರ್ಷಗಳು ಕಳೆದರೂ ಕೊಚಿಮುಲ್ ಪ್ರತ್ಯೇಕವಾಗಿರಲಿಲ್ಲ. ರೈತರು ಹಾಗೂ ಹಾಲು ಉತ್ಪಾದಕರು ಯಾವುದೇ ಸಮಸ್ಯೆಗಳಿದ್ದರೂ ಕೋಲಾರಕ್ಕೆ ಪ್ರಯಾಣಿಸಬೇಕಿತ್ತು. ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿರುವುದರಿಂದ ಪ್ರತ್ಯೇಕವಾದ ಒಕ್ಕೂಟ, ಆಡಳಿತ ಮಂಡಳಿ ಅಗತ್ಯವಿತ್ತು. ಇದಕ್ಕಾಗಿ ಕೊಚಿಮುಲ್ ವಿಭಜಿಸಬೇಕಾಗಿತ್ತು’ ಎಂದು ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ.
‘ಕೊಚಿಮುಲ್ ಷೇರುಗಳಲ್ಲಿ ₹35 ಕೋಟಿ ಮೊತ್ತ ಚಿಕ್ಕಬಳ್ಳಾಪುರಕ್ಕೆ ಸೇರುತ್ತದೆ. ₹15 ಕೋಟಿ ಅಧಿಕ ಮೊತ್ತ ಅಭಿವೃದ್ಧಿ ನಿಧಿ ಇದೆ. ಮೀಸಲು ನಿಧಿಯಲ್ಲೂ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಪಾಲು ಇದೆ. ಎರಡು ಲಕ್ಷ ಲೀಟರ್ ಹಾಲು ಉತ್ಪಾದಿಸುವ ಚಾಮರಾಜನಗರ ಹಾಗೂ 50 ಸಾವಿರ ಲೀಟರ್ ಹಾಲು ಉತ್ಪಾದಿಸುವ ಬೀದರ್, ಕಲಬುರಗಿ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟಗಳಿವೆ. ಇದನ್ನು ಉದಾಹರಣೆಯಾಗಿ ಪರಿಗಣಿಸಿದರೆ ಚಿಕ್ಕಬಳ್ಳಾಪುರ ಕೂಡ ಪ್ರತ್ಯೇಕ ಒಕ್ಕೂಟ ಹೊಂದುವುದು ನ್ಯಾಯಯುತ ಬೇಡಿಕೆಯಾಗಿತ್ತು. ಆಡಳಿತದ ಮತ್ತು ರೈತರ ಹಿತದೃಷ್ಟಿಯಿಂದ ಸೂಕ್ತವೂ ಆಗಿತ್ತು. ಬೇಸಿಗೆಯಲ್ಲೂ ಜಿಲ್ಲೆಯಲ್ಲಿ 3.50 ಲಕ್ಷ ಹಾಲು ಉತ್ಪಾದನೆ ಆಗುತ್ತದೆ. ಪ್ರತ್ಯೇಕ ಒಕ್ಕೂಟ ಮಾಡುವುದರಿಂದ ಯಾವುದೇ ಸಮಸ್ಯೆಯೇ ಇಲ್ಲ’ ಎಂದು ಸುಧಾಕರ್ ತಿಳಿಸಿದ್ದಾರೆ.