ಕೊಡಗು: ಕಾವೇರಿಯ ತೀರ್ಥೋದ್ಭವ ಇದೇ ಅಕ್ಟೋಬರ್ 17ರಂದು ಭಾನುವಾರ ಮಧ್ಯಾಹ್ನ 1.11ಕ್ಕೆ ನಡೆಯಲಿದೆ. ಕೋವಿಡ್ ನಿಬಂಧನೆಗಳ ನೆಪ ಹೇಳಿ ಭಕ್ತರಿಗೆ ತೀಥೋದ್ಭವ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ನಿರ್ಬಂಧದ ವಿರುದ್ಧ ಕೊಡವರು ಆಕ್ರೋಶಗೊಂಡಿದ್ದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಅಕ್ಟೋಬರ್ 17 ರಂದು ನಡೆಯುವ ಕಾವೇರಿ ತೀರ್ಥೋದ್ಭವಕ್ಕೆ ಕೋವಿಡ್ ನಿಯಮಗಳನ್ನು ಪಾಲಿಸಿ ಎಲ್ಲರೂ ಭಾಗವಹಿಸಬಹುದು ಹಾಗೂ ತಲಕಾವೇರಿಗೆ ತೆರಳಲು ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಅಕ್ಟೋಬರ್ 2ರಂದು ನಡೆದ ಸಭೆಯಲ್ಲಿ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿತ್ತು. ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಿ, ವಾಹನಗಳ ಪ್ರವೇಶಕ್ಕೂ ನಿಷೇಧಿಸಲಾಗಿತ್ತು. ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ತೀರ್ಥೋದ್ಭವದ ವೇಳೆ ಅವಕಾಶ ಇರಲಿದೆ ಎಂದು ಆದೇಶಿಸಲಾಗಿತ್ತು. ಸರ್ಕಾರದ ಆದೇಶದ ವಿರುದ್ಧ ಕೊಡವರು ಸೇರಿದಂತೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು.
ಈಗಾಗಲೇ ಎಲ್ಲ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ. ಆದರೆ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ನಿರ್ಬಂಧ ಹೇರಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ನಿರ್ಬಂಧ ಸಡಿಲಿಸದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಕೊಡವರು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮತ್ತೆ ಬದಲಿಸಲಾಗಿರುವ ನಿಯಮಗಳ ಬಗ್ಗೆ ತಿಳಿಸಿದರು.