ಕೊಡಗು ಜಿಲ್ಲೆಯಲ್ಲಿ ಕೊವಿಡ್ ನಡುವೆ ಪ್ರವಾಹದ ಭೀತಿ ಕಾಡುತ್ತಿದೆ

ಪ್ರವಾಹ ಪೀಡಿತ ಗ್ರಾಮಗಳ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಂತೆ ಆಗ್ರಹ

 

ಕೊಡಗು : ಕೊಡಗು ಜಿಲ್ಲೆಯ ಜನ ಇತ್ತೀಚೆಗೆ ಭೀತಿಯ ನಡುವೆ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.  ಜಿಲ್ಲೆಯ  ಹತ್ತಾರು ಹಳ್ಳಿಗಳಿಗೆ ಕಳೆದ ಮೂರು ವರ್ಷಗಳಿಂದ ಪ್ರವಾಹ, ಭೂಕುಸಿತದ ಭೀತಿಯಲ್ಲಿ ಜೀವನ ನಿರ್ವಹಿಸಿದ್ದ ಕೊಡಗಿನ ಜನತೆಗೆ ಕೋವಿಡ್‌ ಬರಸಿಡಿಲಿನಂತೆ ಅಪ್ಪಳಿಸಿತ್ತು.  ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಈ ಬಾರಿಯೂ ಪ್ರವಾಹ ಉದ್ಭವಿಸುವುದಿಲ್ಲ ಎನ್ನೋ ಯಾವ ಖಾತರಿಯೂ ಇಲ್ಲ. ಕೊವಿಡ್ ಸೋಂಕಿನ ಭೀತಿ ನಡುವೆ ಪ್ರವಾಹದ ಭೀತಿ ತೀವ್ರವಾಗಿ ಕಾಡುತ್ತಿದೆ.  ಇವೆಲ್ಲದರ ನಡುವೆ ಪ್ರವಾಹ ಪೀಡಿತ ಗ್ರಾಮಗಳ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಂತೆ ಸಾರ್ವಜನಿಕರು  ಆಗ್ರಹಿಸುತ್ತಿದ್ದಾರೆ.

ಸಾಮಾನ್ಯವಾಗಿ ಮಳೆ ತೀವ್ರವಾಯಿತ್ತೆಂದರೆ ಬಾಗಮಂಡಲದಿಂದ ಆರಂಭವಾಗಿ ಇತ್ತ ಕಣಿವೆ ಗ್ರಾಮದವರೆಗೂ ಕಾವೇರಿ ನದಿ ದಂಡೆಯ 80 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ, ಕುಂಬಾರ ಗುಂಡಿ ಬರಡಿ ಸೇರಿದಂತೆ ಹಲವು ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕತ್ತವೆ. ಈ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಾಕಷ್ಟು ಕುಟುಂಬಗಳಿಗೆ ಇಂದಿಗೂ ಬದಲಿ ವಸತಿ ವ್ಯವಸ್ಥೆ ಆಗಿಲ್ಲ. ಹೀಗಾಗಿ ನದಿ ದಂಡೆಯಲ್ಲೇ ಮತ್ತೆ ಶೆಡ್ ಗಳನ್ನು ನಿರ್ಮಿಸಿಕೊಂಡು ಬದುಕು ನಡೆಸುತ್ತಿವೆ. ಪ್ರತಿ ಬಾರಿ ಪ್ರವಾಹ ಎದುರಾದಾಗ ಸರಕಾರ ಬದಲಿ ವ್ಯವಸ್ಥೆ ಮಾಡಿ ಕೊಡುವ ಭರವಸೆ ಕಾಗದಲ್ಲೆ ಉಳಿಯುತ್ತಿದೆ.  ಹಲವಾರು ಪ್ರತಿಭಟನೆಗಳನ್ನು ನಡೆಸಿದರು ಶಾಶ್ವತ ಪರಿಹಾರ ಒದಗಿಸುವ ವ್ಯವಸ್ಥೆ ಸರಕಾರದಿಂದ ನಡೆದಿಲ್ಲ.  ಒಂದೊಮ್ಮೆ ಏನಾದ್ರೂ ಈ ಬಾರಿಯೂ ಪ್ರವಾಹ ಎದುರಾಗಿದ್ದೇ ಆದಲ್ಲಿ ಇಂತಹ ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಕಳೆದ ಮೂರು ವರ್ಷದಂತೆ ಈ ಬಾರಿಯೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕಾಗಿರುವುದು ಅಗತ್ಯ. ಹೀಗಾಗಿಯೇ ಜಿಲ್ಲಾಧಿಕಾರಿಯವರು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದಾರೆ.

ಇದನ್ನು ಓದಿ: ಹಾಲಿಗೆ ನೀರು ಬೆರೆಸಿ ವಂಚನೆ: ಸಿಐಡಿ ತನಿಖೆಗೆ ಮುಖ್ಯಮಂತ್ರಿ ಬಿಎಸ್‌ವೈ ಆದೇಶ

ಆದರೆ ಜಿಲ್ಲಾಡಳಿತ ಈ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದರೆ ಕೊವಿಡ್ ಸೋಂಕು ತೀವ್ರವಾಗಿ ಹರಡೋದು ಖಚಿತ. ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ 200 ಕ್ಕೂ ಹೆಚ್ಚು ಕೊವಿಡ್ ಪಾಸಿಟಿವ್ ಪ್ರಕರಣಗಳಿವೆ. ಕುಂಬಾರಗುಂಡಿ, ನೆಲ್ಯಹುದಿಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಇಂದಿಗೂ ಸಾಕಷ್ಟು ಕೊವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಿತಿ ಹೀಗಿರುವಾಗ ಪ್ರವಾಹದ ಎದುರಾಗುತ್ತಿದ್ದಂತೆ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಿದ್ದೇ ಆದಲ್ಲಿ ಕೊವಿಡ್ ಸೋಂಕು ಕಾಳಜಿ ಕೇಂದ್ರಗಳಿಗೆ ಬರುವ ಎಲ್ಲರಿಗೂ ಹರಡೋದು ಸತ್ಯ ಎನ್ನಲಾಗಿದೆ.

ಇದನ್ನೂ ಓದಿ : ಕುಗ್ರಾಮಗಳಿಗೆ ಲಸಿಕೆ, ಔಷಧ ತಲುಪಿಸಲು ಡ್ರೋನ್‌ ಬಳಕೆ-‘ಬಿಡ್‌‘ ಆಹ್ವಾನ

ಹೀಗಾಗಿ ಜಿಲ್ಲಾಡಳಿತ ಈ ಪ್ರವಾಹ ಎದುರಾಗುವ ಎಲ್ಲಾ ಗ್ರಾಮಗಳ 18 ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಾದರೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದಂತೆ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದೆವು. ಆದರೆ ಈ ಬಾರಿ ಕೊವಿಡ್ ಸೋಂಕು ಇರುವುದರಿಂದ ಸಂಬಂಧಿಕ ಮನೆಗಳಿಗೂ ಹೋಗುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿದೆ. ಹೀಗಾಗಿ ತಕ್ಷಣವೇ ಜನರಿಗೆ ವ್ಯಾಕ್ಸಿನ್ ನೀಡಬೇಕು ಹಾಗೂ ಪ್ರವಾಹದಿಂದ ತಪ್ಪಿಸಿಕೊಳ್ಳಲು ಜನರಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು  ಸಾರ್ವಜನಿಕರು  ಆಗ್ರಹಿಸಿದರು.

ವರದಿ :  ಆರ್‌.ಎಸ್‌. ಹಾಸನ

Donate Janashakthi Media

Leave a Reply

Your email address will not be published. Required fields are marked *