- ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಾದಲ್ಲಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವ ಆತಂಕ
ಕೊಡಗು: ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಂತಿರುವ ಕೊಡಗು ಜಿಲ್ಲೆಯ ಜನರ ತಲೆ ಮೇಲೆ ಕಸ್ತೂರಿ ರಂಗನ್ ವರದಿಯ ತೂಗುಗತ್ತಿ ನೇತಾಡುತ್ತಿದೆ. 2020 ಡಿಸೆಂಬರ್ ಅಂತ್ಯದೊಳಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡುತ್ತಿದ್ದಂತೆ ವರದಿಯನ್ನು ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿಯಿಂದ ಕೊಡಗಿನ ಸಾವಿರಾರು ಕುಟುಂಬಗಳಿಗೆ ತಮ್ಮ ನೆಲೆ, ನೆಲವನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.
2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವರದಿಯನ್ನು ಜಾರಿ ಮಾಡಲು ಬಿಡುವುದಿಲ್ಲ. ಒಂದು ವೇಳೆ ಸಾಕಷ್ಟು ತಿದ್ದುಪಡಿ ಮಾಡಿಸಿ ಕೊಡಗಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಮಾಡುವುದಾಗಿ ಬಿಜೆಪಿಯ ಸಂಸದ, ಮತ್ತು ಶಾಸಕರು ಭರವಸೆ ನೀಡಿದ್ದರು. ಜೊತೆಗೆ ಶಾಸಕ ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ರಚಿಸಲಾಗಿತ್ತು. ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಕಸ್ತೂರಿ ರಂಗನ್ ವರದಿ ತಿದ್ದುಪಡಿ ಮಾಡಿ ಬಳಿಕ ಜಾರಿ ಮಾಡುವಂತೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ ಅದನ್ನು ಸ್ವೀಕರಿಸದೇ ವರದಿಯನ್ನು ಜಾರಿ ಮಾಡಲು ಮುಂದಾಗಿರುವುದು ಕೊಡಗಿನ ಜನತೆಯನ್ನು ಆತಂಕಕ್ಕೆ ದೂಡಿದೆ.
ಹೀಗಾಗಿ ವರದಿಯನ್ನು ಜಾರಿ ಮಾಡುವುದಕ್ಕಿಂತ ಮೊದಲು ಮತ್ತೊಂದು ಸಮಿತಿಯನ್ನು ಮಾಡಿ ಪಶ್ಚಿಮಘಟ್ಟಗಳಲ್ಲಿರುವ ಗ್ರಾಮಗಳ ಅಭಿವೃದ್ಧಿಗೆ ಯಾವುದೇ ತಡೆಯಾಗದಂತೆ ಮತ್ತೊಂದು ತಿದ್ದುಪಡಿ ವರದಿ ಸಲ್ಲಿಸಲು ಅವಕಾಶ ನೀಡುವಂತೆ ರೈತ ಮುಖಂಡರಾದ ಈರಾ ದುರ್ಗಾಪ್ರಸಾದ್ ಆಗ್ರಹಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಬಿಜೆಪಿ ಸರ್ಕಾರವೇ ಜಾರಿ ಮಾಡುವುದಾಗಿ ಅಫಿಡವಿಟ್ ಸಲ್ಲಿಸಿರುವುದು ಕೊಡಗಿನ ಜನರನ್ನು ಸಿಟ್ಟಿಗೇಳಿಸಿದ್ದು, ಆತಂಕವೂ ಮನೆ ಮಾಡಿದೆ. ಆದರೆ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಅಪ್ಪಚ್ಚು ರಂಜನ್ ಮಾತ್ರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿಲ್ಲ. ಜೊತೆಗೆ ಎಲ್ಲಿ ಸ್ವಾಭಾವಿಕ ಕಾಡಿದೆಯೊ ಅಲ್ಲಿಗೆ ಬಫರ್ ಜೋನ್ ಮಾಡಬೇಕು ಎಂದು ಒತ್ತಾಯಿಸಿದ್ದೇವೆ. ಅದನ್ನು ಸರ್ಕಾರ ಕೂಡ ಒಪ್ಪಿಕೊಂಡಿದೆ ಎನ್ನುತ್ತಿದ್ದಾರೆ.
ಕೇರಳದಲ್ಲಿ ಗ್ರಾಮ ಮಟ್ಟದಿಂದಲೂ ಅಧ್ಯಯನ ಮಾಡಿ ವರದಿ ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಆ ಕೆಲಸ ಮಾಡಲಿಲ್ಲ. ಇದರಿಂದಾಗಿ ಸಾವಿರಾರು ಜನರ ಬದುಕಿಗೆ ಮಾರಕವಾಗುತ್ತಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಜಾರಿಗೆ ತರುತ್ತಿರುವುದು ಕೊಡಗಿನ ಜನರಿಗೆ ಮಾತ್ರ ಆತಂಕ ತಂದೊಡ್ಡಿದೆ.