ಕೊಡಗು ಜಿಲ್ಲೆಯನ್ನು ಕಡೆಗಣಿಸಿತಾ ಸರ್ಕಾರ..?

ಕೊಡಗು : ರಾಜ್ಯ ಸರಕಾರ ಕೊಡಗು ಜಿಲ್ಲೆಯನ್ನು ಕಡೆಗಣಿಸಿದೆ, ಜೊತೆಗೆ ಕೊಡಗು ಜಿಲ್ಲೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಈಗ ಕೇಳಿ ಬರುತ್ತಿವೆ.

ಸೋಂಕು ತೀವ್ರವಾಗಿ ಹರಡುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಿನ್ನೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಿಎಂ ಯಡಿಯೂರಪ್ಪ ಅವರು ಹೆಸರಿಗೂ ಕೊಡಗು ಜಿಲ್ಲೆಯ ಸ್ಥಿತಿ ಹೇಗಿದೆ ಎನ್ನೋದನ್ನು ಪ್ರಶ್ನಿಸಿಲ್ಲ. ಬದಲಾಗಿ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಷ್ಟಕ್ಕೆ ಸಂವಾದ ಮೀಟಿಂಗ್ ಮುಗಿಸಿದ್ದಾರೆ. ಆದರೆ ಕೊಡಗು ಜಿಲ್ಲೆಯ ಹಳ್ಳಿ ಹಳ್ಳಿಗೂ ಕೊವಿಡ್ ಸೋಂಕು ಹರಡಿದ್ದು, ಜಿಲ್ಲೆಯ ಸಮಸ್ಯೆಗಳನ್ನು ರಾಜ್ಯ ಸರ್ಕಾರದೊಂದಿಗೆ ಹೇಳಿಕೊಳ್ಳುವ ತವಕದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಕುಳಿತಿದ್ದರು ಜಿಲ್ಲೆಯ ಸಮಸ್ಯೆಗಳನ್ನು ಹಂಚಿಕೊಳ್ಳಲು ಪಟ್ಟಿಯನ್ನು ತಯಾರು ಮಾಡಿಟ್ಟುಕೊಂಡಿದ್ದರು.

ಜಿಲ್ಲೆಯಲ್ಲಿ ನಿತ್ಯ ನಾಲ್ಕು ನೂರರಿಂದ ಐದು ನೂರು ಪ್ರಕರಣಗಳು ದಾಖಲಾಗುತ್ತಿದ್ದು, ಹನ್ನೆರಡರಿಂದ ಹದಿನೈದು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

ಮುಖ್ಯವಾಗಿ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎನ್ನೋದನ್ನು ಸ್ವತಃ ಸಚಿವ ಸೋಮಣ್ಣ ಅವರೇ ಹೇಳಿ ಹೋಗಿದ್ದರು. ಇನ್ನು ಜಿಲ್ಲೆಗೆ 900 ಆಕ್ಸಿಜನ್ ಸಿಲಿಂಡರ್ ಬೇಕಾಗಿದೆ. 30 ಕ್ಕೂ ಹೆಚ್ಚು ವೆಂಟಿಲೇಟರ್ ಬೇಕಾಗಿವೆ. ಇವೆಲ್ಲವನ್ನೂ ಸರ್ಕಾರದ ಬಳಿ ಹೇಳಿಕೊಳ್ಳುವ ತವಕದಲ್ಲೇ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಡಿಎಚ್‍ಓ ಮೋಹನ್ ಕುಮಾರ್ ಮತ್ತು ಡೀನ್ ಕಾರ್ಯಪ್ಪ ಇವರೆಲ್ಲರೂ ಕುಳಿತಿದ್ದರು. ಸಿಎಂ ಯಡಿಯೂರಪ್ಪ ಅವರಾಗಲಿ ಆರೋಗ್ಯ ಸಚಿವ ಸುಧಾಕರ್ ಅವರಾಗಲಿ ಒಮ್ಮೆಯೋ ಕೊಡಗಿನ ಕಡೆ ಗಮನವನ್ನೇ ಹರಿಸಲಿಲ್ಲ.

ಸರಕಾರದ ನಡೆಗೆ ತೀವ್ರ ಜನಾಕ್ರೋಶ ವ್ಯಕ್ತವಾಗಿದ್ದು. ನಮ್ಮ ಜಿಲ್ಲೆಯ ಬಗ್ಗೆ ಸರಕಾರದ ಕಾಳಜಿ ಎಂತದ್ದು ಎಂದು ಗೊತ್ತಾಯಿತು. ಇಂತಹ ಸರಕಾರವನ್ನು ಆಯ್ಕೆ ಮಾಡಿದ್ದಕ್ಕೆ ಒಳ್ಳೆ ಕಾಣಿಕೆ ಕೊಟ್ಟಿದ್ದಾರೆ ಎಂದು ಜನ‌ ಮಾತನಾಡಿಕೊಳ್ಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *