ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್(ನೈಸ್) ಕಂಪನಿ ವಿರುದ್ಧ ಘನತೆಗೆ ಚ್ಯುತಿ ಉಂಟಾಗುವಂತಹ ಆರೋಪ ಮಾಡಿರುವುದರಿಂದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ನೈಸ್ ಸಂಸ್ಥೆಗೆ ₹2 ಕೋಟಿ ಪರಿಹಾರ ನೀಡುವಂತೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ನೈಸ್ ಸಂಸ್ಥೆಯು ಸಲ್ಲಿಸಿದ್ದ ಮೊಕದ್ದಮೆ ವಿಚಾರಣೆ ನಡೆಸಿದ 15ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಮಲ್ಲನಗೌಡ ಅವರು ಈ ಆದೇಶವನ್ನು ನೀಡಿದ್ದಾರೆ.
2011ರ ಜೂನ್ 20ರಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನೈಸ್ ಕಂಪನಿ ‘ಸಾರ್ವಜನಿಕ ಹಣ ಲೂಟಿ ಮಾಡುವ ಯೋಜನೆ’ ಎಂದು ಆರೋಪಿಸಿದ್ದರು. ‘ಗೌಡರ ಗರ್ಜನೆ’ ಎಂಬ ಶೀರ್ಷಿಕೆಯಡಿ ಈ ಸಂದರ್ಶನ ಪ್ರಸಾರವಾಗಿತ್ತು.
‘ದೇವೇಗೌಡರ ಹೇಳಿಕೆಯಿಂದ ಸಂಸ್ಥೆಯ ಘನತೆಗೆ ಚ್ಯುತಿಯಾಗಿದ್ದು, ಅದಕ್ಕಾಗಿ ರೂ. 10 ಕೋಟಿ ಪರಿಹಾರ ಕೊಡಿಸಬೇಕು’ ಎಂದು ನೈಸ್ ಸಂಸ್ಥೆಯು 2012ರಲ್ಲಿ ಮೊಕದ್ದಮೆ ದಾಖಲಿಸಿತ್ತು. ತಮ್ಮ ಹೇಳಿಕೆ ಸತ್ಯ ಎಂಬುದನ್ನು ದೇವೇಗೌಡರು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಅಲ್ಲದೆ, ನೈಸ್ ವಿರುದ್ಧ ಮುಂದೆಂದೂ ಯಾವುದೇ ಮಾನಹಾನಿಕಾರ ಹೇಳಿಕೆ ನೀಡದಂತೆ ನ್ಯಾಯಾಲಯವು ನಿರ್ಬಂಧ ವಿಧಿಸಿದೆ.
ನೈಸ್ ಸಂಸ್ಥೆ ಮತ್ತು ಅದು ಕೈಗೊಂಡಿದ್ದ ಕಾಮಗಾರಿಗಳ ವಿರುದ್ಧ ದೇವೇಗೌಡರು ಆರೋಪ ಮಾಡಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಹಲವು ಸಂದರ್ಭಗಳಲ್ಲಿ ಸಂಸ್ಥೆಯ ಯೋಜನೆಗಳನ್ನು ಎತ್ತಿ ಹಿಡಿದಿವೆ ಎಂದು ನ್ಯಾಯಾಲಯ ಪ್ರಸ್ತಾಪಿಸಿದೆ.