ಗ್ರಾಹಕರಿಗೆ ಮತ್ತಷ್ಟು ಹೊರೆ; ಹಾಲು-ಮೊಸರಿನ ದರ ರೂ.2 ಹೆಚ್ಚಳ-ಕೆಎಂಎಫ್‌ ಘೋಷಣೆ

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ ತಲಾ 2 ರೂಪಾಯಿ ಹೆಚ್ಚಳ ಮಾಡಿ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ನಿಯಮಿತ ಆದೇಶ ಹೊರಡಿಸಿದೆ. ದರ ಏರಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ನಂದಿನಿ ಹಾಲು ಲೀಟರ್ ಗೆ 2 ರೂಪಾಯಿ ಹೆಚ್ಚಿಸಿದ್ದು, ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆಯಾಗಿದೆ. ನಂದಿನಿ ಹಾಗೂ ಮೊಸರಿನ ಪರಿಸ್ಕೃತ ದರ ನಾಳೆಯಿಂದಲೇ(ನವೆಂಬರ್ 24) ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 2 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ.

ಇಂದು ಬೆಂಗಳೂರಿನಲ್ಲಿ ಕೆಎಂಎಫ್​ ನಿರ್ದೇಶಕರುಗಳ ಸಭೆ ನಡೆದಿದ್ದು, ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು. ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಸರಾಸರಿ 31ರಿಂದ 32 ರೂಪಾಯಿ ಸಿಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಹಾಲಿನ ದರ ಸಂಬಂಧ ಕಳೆದ 15 ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್​ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಇತ್ತೀಚಿಗೆ ಕೆಎಂಎಫ್‌ ಹಾಲಿನ ದರ ಹೆಚ್ಚಳದ ಬಗ್ಗೆ ಪ್ರಕಟಣೆ ನೀಡಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಎಂಎಫ್‌ನ  ದರ ಏರಿಕೆ ನಿರ್ಧಾರವನ್ನು ತಡೆಹಿಡಿದಿದ್ದರು. ಆದರೆ, ಇದೀಗ ಮತ್ತೆ ಕೆಎಂಎಫ್​ ಸಭೆ ಸೇರಿ ಅಂತಿಮವಾಗಿ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಿಸಲಾಗಿದೆ.

ಟೋನ್ಡ್ ಹಾಲಿನ ದರ 37 ರಿಂದ 39 ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಸ್ಪೆಷಲ್ ಹಾಲಿನ ದರ 43 ರಿಂದ 45 ರೂಪಾಯಿಗೆ, ಸಮೃದ್ಧಿ ಹಾಲಿನ ದರ 48 ರಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೋಮೋಜಿನೈಸ್ಡ್ ಹಾಲು 38 ರೂ. ರಿಂದ 40 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ. ರಿಂದ 44 ರೂ.ಗೆ ಏರಿಕೆ. ಶುಭಂ ಹಾಲು 43 ರೂ. ರಿಂದ 45 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ. ರಿಂದ 46 ರೂ.ಗೆ ಏರಿಕೆ. ಸಂತೃಪ್ತಿ ಹಾಲು 50 ರೂ. ರಿಂದ 52 ರೂ.ಗೆ ಏರಿಕೆ. ಡಬಲ್ ಟೋನ್ಡ್ ಹಾಲು 36 ರೂ. ರಿಂದ 38 ರೂ.ಗೆ ಏರಿಕೆಯಾಗಿದೆ.

ಮೊಸರಿನ ದರವನ್ನು ಲೀಟರ್ ಗೆ 45 ರಿಂದ 47 ರೂಪಾಯಿಗೆ ಏರಿಕೆ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *