ಕೆ.ಕೆ.ಆರ್.ಡಿ.ಬಿ. ನೂತನ ಅಧ್ಯಕ್ಷರಿಗೆ ಮೊದಲ ಪತ್ರ

ಇನ್ನೂ ಕಲ್ಯಾಣ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹದಗೆಟ್ಟ ಹೈದ್ರಾಬಾದ್ ಕರ್ನಾಟಕದ ಕತೆಗಳೇ. ವೈದ್ಯರಾದ ತಮಗೆ ಇದೆಲ್ಲ ಗೊತ್ತಿಲ್ಲದ್ದೇನಲ್ಲ. ಆದರೆ ಅದನ್ನೆಲ್ಲ ದುರಸ್ತಿ ಮಾಡಬಲ್ಲ ಅಧಿಕಾರ ಮತ್ತು ಅವಕಾಶ ತಮಗೆ ದೊರಕಿದೆ. ಅಷ್ಟಕ್ಕೂ ಅದನ್ನೆಲ್ಲ ಸರಿಮಾಡಬಲ್ಲ ಸೂಕ್ತ ವ್ಯಕ್ತಿ ನೀವು. ವೈದ್ಯರಾದ ತಮಗೆ ಆರೋಗ್ಯ ಇಲಾಖೆ ಅರ್ಥವಾದಷ್ಟು ಇತರರಿಗೆ ಅರ್ಥವಾಗದು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿರುವ ಶಾಸಕ ಡಾ. ಅಜಯ್ ಸಿಂಗ್ ರವರಿಗೆ ಹಿರಿಯ ಚಿಂತಕ ಮಲ್ಲಿಕಾರ್ಜುನ ಕಡಕೋಳ ಪತ್ರ ಬರೆದಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ದೀಗೆ ಅಜಯ್ ಸಿಂಗ್ ಬದ್ಧರಾಗಿ ಕಾರ್ಯನಿರ್ವಹಿಸಬೇಕೆಂಬ ಆಶಯದಿಂದ ಈ ಪತ್ರವನ್ನು ಅವರು ಬರೆದಿದ್ದಾರೆ. ಪತ್ರದ ಸಾರಾಂಶ ಹೀಗಿದೆ.

ಸರ್ ನಮಸ್ಕಾರ,

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ತಮಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ತಂದೆಯವರಿಗೆ ದೊರಕಿದ ಅವಕಾಶ ನಿಮಗೆ ದೊರಕಿದೆ. ನಿಮ್ಮನ್ನು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾಗಿ ನೇಮಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳು.

ನೀವು ಕರ್ನಾಟಕ ಸರಕಾರದ ಮಂತ್ರಿಯಾಗಿದ್ರೆ ಒಂದು ಇಲಾಖೆಯ ಅಭಿವೃದ್ಧಿಗೆ ಸೀಮಿತವಾಗಿರುತ್ತಿತ್ತು. ಈಗ ಕೆ.ಕೆ.ಆರ್‌.ಡಿ.ಬಿ. ಅಧ್ಯಕ್ಷರಾಗುವ ಮೂಲಕ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳ ಸಮಗ್ರ ಅಭ್ಯುದಯಕ್ಕೆ ಕಾರಣರಾಗುವ ಸುವರ್ಣ ಅವಕಾಶ ನಿಮಗೆ ಒದಗಿ ಬಂದಿದೆ. ತನ್ಮೂಲಕ ಕಲ್ಯಾಣ ಕರ್ನಾಟಕದ ನಮ್ಮ ಪಾಲಿನ ಅಭಿವೃದ್ಧಿಯ ಮುಖ್ಯಮಂತ್ರಿ ಆಗುವುದನ್ನು ಸಾಬೀತು ಮಾಡುವ ಸದವಕಾಶ ನಿಮಗೆ ಪ್ರಾಪ್ತವಾಗಿದೆ. ನಿಮ್ಮ ಇಚ್ಛಾಶಕ್ತಿ ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಂಡರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನೀಗದ ಕನಸೇನಲ್ಲ. ಅಷ್ಟಕ್ಕೂ ಸಿದ್ಧರಾಮಯ್ಯನವರು ಈ ಬಾರಿಯ ಆಯವ್ಯಯದಲ್ಲಿ ಐದುಸಾವಿರ ಕೋಟಿ ಹಣ ನೀಡಿದ್ದಾರೆ. ಅದರ ಆದ್ಯತೆಗಳ ಆಯ್ಕೆ ನಿಮ್ಮ ನೇತೃತ್ವದಲ್ಲಿ ನಡೆಯಲಿದೆ.

ಹೆಸರಲ್ಲಷ್ಟೇ ಕಲ್ಯಾಣ ಕರ್ನಾಟಕ. ಅದರ ಉಸಿರತುಂಬಾ ಮತ್ತದೇ ಹಳೆಯ ಹೈದ್ರಾಬಾದ್ ಕರ್ನಾಟಕದ ಹಳವಂಡಗಳೇ ತಾಂಡವವಾಡುತ್ತಲಿವೆ. ಏಳು ಜಿಲ್ಲೆಗಳ ಆಡಳಿತ ಚುರುಕುಗೊಳಿಸದೇ ಹೋದರೆ ಎಂದಿನಂತೆ ಬ್ಯುರೋಕ್ರಸಿಯದೇ ಅಟ್ಟಹಾಸ. ಆಯಕಟ್ಟಿನ ಅಧಿಕಾರಶಾಹಿಗೆ ಜಾಣತನದ ಬಿಸಿ ಮುಟ್ಟಿಸದೇ ಇದ್ದರೆ ಜೋಬದ್ರಗೇಡಿ ಆಗುವ ಅಪಾಯಗಳಿವೆ.

ಯಾವುದೇ ಸಮಾಜದಲ್ಲಿ ಸುಸ್ಥಿರವಾದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ನಿರ್ಮಾಣಗೊಂಡಿದ್ದರೇ ಇನ್ನುಳಿದಂತೆ ಎಲ್ಲ ನಾಗರಿಕ ಬದುಕು ಹಸನಾಗಿರಬಲ್ಲದು. ಸುದೈವಕ್ಕೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾಗಿ ನೇಮಕಗೊಂಡಿರುವ ತಾವು ವೈದ್ಯರೇ ಆಗಿದ್ದೀರಿ. ನಿಮಗೆ ಪಬ್ಲಿಕ್ ಹೆಲ್ತ್ ಸುಧಾರಣೆಯ ದಟ್ಟವಾದ ಪರಿಚಯ ಇದ್ದೇ ಇರುತ್ತದೆ. ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ (IPHS) ಮಾನದಂಡಗಳ ಅನುಷ್ಠಾನದ ವಿಷಯದಲ್ಲಿ ಕಲ್ಯಾಣ ಕರ್ನಾಟಕ ಬಹಳೇ ಕೆಳಮಟ್ಟದ್ದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನಾರೋಗ್ಯದ ಕೇಂದ್ರಗಳಾಗಿವೆ. ಹಳ್ಳಿಗಳ ಆರೋಗ್ಯ ಉಪಕೇಂದ್ರಗಳು ರೋಗಪೀಡಿತವಾಗಿವೆ. ಗ್ರಾಮದ ಮನೆ ಬಾಗಿಲಿಗೆ ಹೋಗಿ ಮೂಲಭೂತ ಆರೋಗ್ಯ ಸೇವೆ ನೀಡುವ ಆರೋಗ್ಯ ಸಹಾಯಕಿಯರು ಉಪಕೇಂದ್ರಗಳಲ್ಲಿ ಕಡ್ಡಾಯವಾಗಿ ವಾಸಿಸಬೇಕು. ವಾಸಯೋಗ್ಯ ಸುಸಜ್ಜಿತ ಆರೋಗ್ಯ ಉಪಕೇಂದ್ರಗಳು ಸಜ್ಜಾಗಬೇಕು.

ಇದನ್ನೂ ಓದಿ:ಕೋಟ್ಯಧೀಶರಿಗೆ ನೀಡುವ ಉಚಿತ ಸವಲತ್ತುಗಳು

ಉಪಕೇಂದ್ರಗಳು ಕೇವಲ ಗುತ್ತಿಗೆದಾರರ ಹಣದಾಹಕ್ಕಾಗಿ ನಿರ್ಮಾಣಗೊಂಡ ನಿರ್ಜೀವ ಕಟ್ಟಡಗಳಾಗಬಾರದು. ಉದಾಹರಣೆಗೆ ಜೇವರ್ಗಿ ಕ್ಷೇತ್ರದ ಬಹುಪಾಲು ಉಪಕೇಂದ್ರಗಳೇ ಬೆಸ್ಟ್ ಎಗ್ಝಾಂಪಲ್ಸ್. ಉಪಕೇಂದ್ರಗಳು ಅಭಿವೃದ್ಧಿಯಾದರೆ ಗ್ರಾಮೀಣ ಆರೋಗ್ಯ ಸೇವೆಗಳು ಸದೃಢಗೊಳ್ಳುತ್ತವೆ. ಜನಾರೋಗ್ಯಕೇಂದ್ರಿತ ಭಾರತ ಸರ್ಕಾರದ ಪಬ್ಲಿಕ್ ಹೆಲ್ತ್ ಪರಿಕಲ್ಪನೆ ಅನುಷ್ಠಾನಕ್ಕೆ ಬರಬಲ್ಲದು. ಜನರು ಆರೋಗ್ಯಪೂರ್ಣ ಸಮಾಜ ನಿರ್ಮಿಸಬಲ್ಲರು.

ಇನ್ನೂ ಕಲ್ಯಾಣ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹದಗೆಟ್ಟ ಹೈದ್ರಾಬಾದ್ ಕರ್ನಾಟಕದ ಕತೆಗಳೇ. ವೈದ್ಯರಾದ ತಮಗೆ ಇದೆಲ್ಲ ಗೊತ್ತಿಲ್ಲದ್ದೇನಲ್ಲ. ಆದರೆ ಅದನ್ನೆಲ್ಲ ದುರಸ್ತಿ ಮಾಡಬಲ್ಲ ಅಧಿಕಾರ ಮತ್ತು ಅವಕಾಶ ತಮಗೆ ದೊರಕಿದೆ. ಅಷ್ಟಕ್ಕೂ ಅದನ್ನೆಲ್ಲ ಸರಿಮಾಡಬಲ್ಲ ಸೂಕ್ತ ವ್ಯಕ್ತಿ ನೀವು. ವೈದ್ಯರಾದ ತಮಗೆ ಆರೋಗ್ಯ ಇಲಾಖೆ ಅರ್ಥವಾದಷ್ಟು ಇತರರಿಗೆ ಅರ್ಥವಾಗದು.

ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣದ ಕ್ಷೇತ್ರಗಳು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಕೆ ಮಾಡದಷ್ಟು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಿಂದುಳಿದಿವೆ. ಅವುಗಳ ಅಂಕಿಅಂಶಗಳು, ಮಾನವ ಅಭಿವೃದ್ಧಿ ಸೂಚ್ಯಂಕಗಳು ಅಕ್ಷರಶಃ ಅಚ್ಚರಿ ಹುಟ್ಟಿಸುವಂತಿವೆ‌. ಒಣಕಲು ಅಂಕಿಅಂಶಗಳನ್ನು ಸಾದರ ಪಡಿಸುವ ಪಾಂಡಿತ್ಯವನ್ನು ಪ್ರದರ್ಶನ ಮಾಡಲಾರೆ. ನಮ್ಮ ಬಹುಪಾಲು ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಅವುಗಳನ್ನು ಜ್ಞಾನದ ಬಂಡವಾಳದಂತೆ ಬಳಸಿಕೊಳ್ಳುವುದು ಬಹಳಷ್ಟು ಬಾರಿ ರೇಜಿಗೆ ಬರಿಸಿ ಕ್ಲೀಷೆಯಾಗುತ್ತದೆ.

ಅಷ್ಟಕ್ಕೂ ಅದೆಲ್ಲ ತಾವು ಅರಿಯದ್ದೇನಲ್ಲ ಎಂದು ಕೊಂಡಿದ್ದೇನೆ. ಗೊತ್ತಿಲ್ಲದಿದ್ದರೂ ಅದನ್ನು ಅಧಿಕಾರಸ್ಥ ಸಿಬ್ಬಂದಿ ಮೂಲಕ ತಿಳಿಯುವುದು ಕಷ್ಟವೇನಲ್ಲ. ಶರಣರು, ಸೂಫಿ ಸಂತರು, ತತ್ವಪದಕಾರರ ಆಡುಂಬೊಲವೇ ಆಗಿರುವ ಕಲ್ಯಾಣ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರಕಬೇಕಿದೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಇಡೀ ಕಲ್ಯಾಣ ಕರ್ನಾಟಕದಲ್ಲಿ ಅಕಾಡೆಮಿಗಳು ಒತ್ತಟ್ಟಿಗಿರಲಿ, ಇದುವರೆಗೆ ಒಂದೇಒಂದು ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪನೆಯಾಗಿಲ್ಲ. ವೈದ್ಯರಾದ ತಮಗೆ ಆರೋಗ್ಯ ಇಲಾಖೆ ಹೆಚ್ಚು ಹತ್ತಿರದ ಕಾರಣ ಇತರೆ ಇಲಾಖೆಗಳ ಕುರಿತು ಪ್ರಸ್ತಾಪಿಸಲಿಲ್ಲ. ಇತರೆ ಎಲ್ಲ ಇಲಾಖೆಗಳ ಅಪಸವ್ಯಗಳನ್ನು ಸರಿಪಡಿಸುವ ಮತ್ತು ಸೂಕ್ತ ಪರಿಹಾರದ ದೃಢಸಂಕಲ್ಪ ಮತ್ತು ತಾಯ್ತನದ ಇಚ್ಛಾಶಕ್ತಿಯ ಅಗತ್ಯವಿದೆ. ಅದು ತಮ್ಮಿಂದ ಸಾಧ್ಯವಾಗಲಿ ಎಂಬ ವಿನಮ್ರ ವಿನಂತಿ.

Donate Janashakthi Media

Leave a Reply

Your email address will not be published. Required fields are marked *