ಸಿಂಘು ಗಡಿ: ಸಿಂಘು ಗಡಿಯಲ್ಲಿ, ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಈ ಕೊಲೆಗೂ ತಮ್ಮ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕೊಲೆ ಪ್ರಕರಣದಲ್ಲಿ ಕೇಳಿಬರುತ್ತಿರುವ ನಿಹಂಗ್ ಸಿಖ್ ಸಮುದಾಯವಾಗಲೀ ಅಥವಾ ಕೊಲೆಯಾದ ವ್ಯಕ್ತಿಯಾಗಲಿ ತಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟನೆ ನೀಡಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ತರಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ರೈತರು ನಡೆಸಲಾಗುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಸಂಯುಕ್ತ ಕಿಸಾನ್ ಮೋರ್ಚಾ ವಹಿಸಿಕೊಂಡಿದೆ. ಹತ್ಯೆ ಪತ್ತೆಯಾದ ಬೆನ್ನಲ್ಲೇ ಮೋರ್ಚಾದ ನಾಯಕರು ಮಾಧ್ಯಮಗೋಷ್ಠಿ ನಡೆಸಿ ವಿವರಣೆ ನೀಡಿವೆ.
ಈ ಹತ್ಯೆಯನ್ನು ಖಂಡಿಸಿದ್ದು, ಘಟನೆಯಿಂದ ಅಂತರ ಕಾಪಾಡಿಕೊಂಡಿದೆ. ಮೃತ ವ್ಯಕ್ತಿ ಹಾಗೂ ನಿಹಾಂಗ್ ಗುಂಪು ಯಾವುದೇ ಸಂಬಂಧವಿಲ್ಲ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾ ನಿಹಾಂಗ್ ಗುಂಪು ಹೀಗೆ ಹಿಂಸಾತ್ಮಕವಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಪಾಟಿಯಾಲದಲ್ಲಿ ಕೊವಿಡ್ ಲಾಕ್ಡೌನ್ ವೇಳೆ ಸಂಚರಿಸುತ್ತಿದ್ದವರನ್ನು ತಡೆದು ಪ್ರಶ್ನಿಸಿದ್ದಕ್ಕೆ ನಿಹಾಂಗ್ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಚ್ಚಿ ಹಾಕಿದ್ದ. ಇದೇ ರೀತಿ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಈ ಸಮುದಾಯಕ್ಕೆ ಸೇರಿದವರು ಹಿಂಸಾತ್ಮಕವಾಗಿ ವರ್ತಿಸಿದ್ದರು ಎಂದು ತಿಳಿಸಿದೆ.
‘ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟಕ್ಕೆ ಧರ್ಮದ ಬಣ್ಣ ನೀಡುವ ಯತ್ನಗಳು ನಡೆಯುತ್ತಿವೆ. ಇಲ್ಲಿ ನಡೆದುದ್ದರ ಬಗ್ಗೆ ನಮಗೆಲ್ಲಾ ವಿಷಾದವಿದೆ. ಕಿಸಾನ್ ಸಂಯುಕ್ತ ಮೋರ್ಚಾವು ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದೆ. ಈ ಘಟನೆ ನಮ್ಮ ವಿರುದ್ಧ ನಡೆಸಲಾದ ಒಂದು ಸಂಚು ಇರಬಹುದು’ ಎಂದು ಹೇಳಿದೆ.
ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಪವಿತ್ರತೆಗೆ ವಿರುದ್ಧವಾಗಿಲ್ಲ. ಆದರೆ, ಮೋರ್ಚಾವು ಯಾರ ಕೈಗೂ ಕಾನೂನನ್ನು ತೆಗೆದುಕೊಳ್ಳುವ ಹಕ್ಕನ್ನು ನೀಡುವುದಿಲ್ಲ. ಕಾನೂನಿನ ಪ್ರಕಾರ ಅಪರಾಧಿಗಳನ್ನು ಶಿಕ್ಷಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿಕೆ ನೀಡಿದೆ. ಮಾತ್ರವಲ್ಲದೇ ಈ ಕೃತ್ಯದ ಕಾರಣೀಕರ್ತರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. ಅಲ್ಲದೆ, ಯಾರೂ ಕೂಡ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಈ ಸಂಬಂಧ ತಮ್ಮ ಸಂಘಟನೆ ಪೊಲೀಸರಿಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಹೇಳಿದೆ.
ಹರಿಯಾಣ-ದೆಹಲಿ ಗಡಿಯ ಕುಂಡಲಿ ಎಂಬಲ್ಲಿ ವ್ಯಕ್ತಿಯೊಬ್ಬನ ಕೈ ಕಡಿದು, ನೇಣು ಬಿಗಿದು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಸ್ಪಷ್ಟ ಕಾರಣವನ್ನು ಪೊಲೀಸರು ಈವರೆಗೆ ದೃಢಪಡಿಸಿಲ್ಲ, ಆದರೆ ಸಿಖ್ ಪಂಥ ನಿಹಾಂಗ್ಗೆ ಸೇರಿದವರು ಈ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸಿಖ್ಖರ ಪವಿತ್ರ ಗ್ರಂಥ ‘ಗ್ರಂಥ ಸಾಹಿಬ್’ಗೆ ಅವಮಾನ ಮಾಡಿದ್ದ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ಹೇಳಿಕೊಳ್ಳುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೊಲೆಯಾದ ವ್ಯಕ್ತಿಯ ಶವವನ್ನು ಹಗ್ಗ ಕಟ್ಟಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ.
ಈಗಾಗಲೇ ಹರಿಯಾಣ ಪೊಲೀಸರು 302/34 ಐಪಿಸಿ (ಭಾರತೀಯ ದಂಡ ಸಂಹಿತೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ವಿಧಿವಿಜ್ಞಾನ ತಂಡವು ಅಪರಾಧದ ಸ್ಥಳವನ್ನು ಪರಿಶೀಲಿಸಿದೆ. ಇತ್ತ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ನಮ್ಮಲ್ಲಿ ಕೆಲವು ಶಂಕಿತ ಹೆಸರುಗಳಿವೆ ಶೀಘ್ರದಲ್ಲೇ ಅವರ ವಿಚಾರಣೆ ನಡೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಖಿರ್ವಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ
ನೆನ್ನೆ ಬೆಳಂಬೆಳಿಗ್ಗೆ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನಾ ರೈತರನ್ನು ಬೆಚ್ಚಿ ಬೀಳಿಸಿದೆ. ಜೊತೆಗೆ ಈ ಕೃತ್ಯದ ಹೊಣೆಯನ್ನು ನಿಹಾಂಗ್ ಗುಂಪು ಹೊತ್ತುಕೊಂಡಿದೆ. ದೆಹಲಿಯ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರ ಕೈ ಕತ್ತರಿಸಿದ ಮೃತದೇಹ ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹತ್ಯೆಯನ್ನು ನಿಹಾಂಗ್ ಗಳು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಲಖಬೀರ್ ಸಿಂಗ್ನನ್ನು ಹಿಂಸಿಸುವ, ಅವನ ಸಾವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರುವ ದೃಶ್ಯಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.
ಮೃತ ಲಖಬೀರ್ ಸಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸೋದರಿ, ಹೆಂಡತಿ ಮತ್ತು ಮೂರು ಹೆಣ್ಣುಮಕ್ಕಳಿದ್ದಾರೆ. ದೊಡ್ಡ ಮಗಳಿಗೆ ಈಗ 12 ವರ್ಷ. ಲಖಬೀರ್ ಸಿಂಗ್ ಮೂರು ದಿನಗಳ ಹಿಂದೆ ಸಿಂಘು ಗಡಿಗೆ ಬಂದಿದ್ದರು. ದೆಹಲಿ ಗಡಿಗೆ ಹತ್ತಿರವಿರುವ ಸಿಂಘು ಬಳಿ ನಿಹಾಂಗ್ ಕ್ಯಾಂಪ್ನಲ್ಲಿ ತಂಗಿದ್ದರು. ಲಖಬೀರ್ ಸಿಂಗ್ ಸಿಹಾಂಗ್ ಸಿಖ್ಖರಲ್ಲಿ ಒಬ್ಬರು. ಇವರು ತಮ್ಮ ಬಳಿ ಸರ್ಬಲೋಹ್ ಗ್ರಂಥವನ್ನು ಹೊಂದಿದ್ದರು. ಈ ಗ್ರಂಥವನ್ನು ಅವರು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮುಂಜಾನೆ 3 ಗಂಟೆ ಸುಮಾರಿಗೆ ಆತನ ಕೈಯನ್ನು ಕತ್ತರಿಸಿ ಹಲ್ಲೆ ಮಾಡಲಾಗಿದೆ. ಆತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಲಾಗಿದೆ. ಆತ ಪ್ರಜ್ಞೆ ಕಳೆದುಕೊಂಡಾಗ ಆತನ ದೇಹವನ್ನು ಬ್ಯಾರಿಕೇಡ್ಗೆ ಕಟ್ಟಲಾಗಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಘಟನೆಯ ಬಗ್ಗೆ ಸ್ಥಳೀಯ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದರು. ಅಷ್ಟರಲ್ಲಾಗಲೇ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಘಟನಾ ಸ್ಥಳದಲ್ಲಿ ಪ್ರತಿಭಟನಾನಿರತರು ಜಮಾಯಿಸಿದ್ದರು.
ಯಾರು ಈ ನಿಹಾಂಗರು?
ಕಟ್ಟಾ ಸಿಖ್ ಯೋಧರನ್ನು ನಿಹಾಂಗರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಡು ನೀಲಿ ಬಣ್ಣದ ನಿಲುವಂಗಿ, ಅದೇ ಬಣ್ಣದ ದೊಡ್ಡ ಪೇಟ, ಭುಜಕೀರ್ತಿಗಳಲ್ಲಿ ಖಡ್ಗಗಳು, ದೊಡ್ಡ ಖಡ್ಗ, ಚೂರಿ ಇವು ನಿಹಾಂಗರ ವೇಷಭೂಷಣ. ಗುರು ಗೋವಿಂದ ಸಿಂಗ್ ಅವರ ಕಾಲದಿಂದಲೂ ಈ ಪಂಗಡ ಇದೆ. ಧರ್ಮ ರಕ್ಷಣೆ ತಮ್ಮ ಹಕ್ಕು ಎಂದು ಇವರು ಭಾವಿಸಿದ್ದಾರೆ.
ಬ್ರಿಟಿಷರು ಭಾರತಕ್ಕೆ ಬಂದಾಗ ಪಂಜಾಬ್ ಪ್ರಾಂತದಲ್ಲಿ ಈ ಪಂಥವು ಪ್ರಾಬಲ್ಯ ಹೊಂದಿತ್ತು. ಭಾರತದ ಮೇಲೆ ಅಫ್ಗಾನಿಸ್ತಾನ, ಇರಾನ್ನ ದಾಳಿಯನ್ನು ಈ ಪಂಥದ ಯೋಧರು ತಡೆದಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. 1818ರಲ್ಲಿ ಈ ಪಂಥವು ಛಿದ್ರವಾಯಿತು. ಆಗ ಬಹುತೇಕ ನಿಹಾಂಗರನ್ನು ಬ್ರಿಟಿಷರು ತಮ್ಮ ಸೇನೆಗೆ ಸೇರಿಸಿಕೊಂಡರು. ನಂತರ ಅದೇ ಸಿಖ್ ರೆಜಿಮೆಂಟ್ ಆಯಿತು. ಸೇನೆಯನ್ನು ಸೇರದೆ ಉಳಿದ ನಿಹಾಂಗರು, ತಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ.
ಆದರೆ ಇವರಲ್ಲಿ ಕೆಲವು ಗುಂಪುಗಳು ಗುರು ಗ್ರಂಥ ಸಾಹಿಬ್ನಲ್ಲಿ ಸೂಚಿಸಿರುವುದಕ್ಕಿಂತ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪವಿದೆ. ನಿಹಾಂಗರು ಈಗ ಭೂಮಾಫಿಯಾ, ಮಾದಕವಸ್ತು ಸೇವೆನೆ-ಮಾರಾಟಗಳಲ್ಲಿ ತೊಡಗಿದ್ದಾರೆ ಎಂಬ ಆರೋಪವೂ ಇದೆ.