ಹಾವೇರಿ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರದಲ್ಲಿ ಪರಿಶಿಷ್ಟಜಾತಿಯ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳು ಗರ್ಭಿಣಿಯಾಗಿದ್ದ ಮಾನ್ಯಾ ಪಾಟೀಲ ಮೇಲೆ ಸ್ವತಃ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಭೀಕರ ಹತ್ಯೆಯು ನಾಗರೀಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಮಗಳು ಗರ್ಭಿಣಿ ಎನ್ನುವುದನ್ನು ಪರಿಗಣಿಸದೇ ಕೊಲೆಗೈದವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ನಗರದ ತಹಶಿಲ್ದಾರವರ ಕಛೇರಿ ಎದುರು ಡಿವೈಎಫ್ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ದಲಿತ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದ ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಮದುವೆಯಾಗಿ ಊರಿಗೆ ಬಂದಿದ್ದ ಮಾನ್ಯಾಳನ್ನು ಆಕೆಯ ಹೆತ್ತ ತಂದೆ ಮತ್ತು ಕುಟುಂಬಸ್ಥರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದಿರುವ ಕ್ರೂರ ಘಟನೆಯನ್ನು ಮಾನವೀಯ ನಾಗರೀಕ ಸಮಾಜ ಸಹಿಸುವುದಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ : ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ: ಸಿಪಿಐ(ಎಂ) ನಿಯೋಗ ಭೇಟಿ ಕುಟುಂಬಕ್ಕೆ ಸಾಂತ್ವನ : ಕಠಿಣ ಶಿಕ್ಷೆಗೆ ಆಗ್ರಹ
ಎಂಟು ಶತಮಾನಗಳ ಹಿಂದೆಯೇ ಬಸವಣ್ಣನವರು ಅಂತರಜಾತಿ ವಿವಾಹವನ್ನು ಮಾಡಿ ಜಾತಿಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಸಮಾಜದಲ್ಲಿ ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿ ಧ್ವೇಷ, ಅಸ್ಪೃಷ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನೋಸ್ಥಿತಿ ಆಳವಾಗಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗರ್ಭೀಣಿಯಾದ ತನ್ನ ಮಗಳನ್ನೆ ಅಮಾನುಷವಾಗಿ ತಂದೆಯೇ ಕೊಲ್ಲುವ ಜಾತಿ ಪ್ರತಿಷ್ಠೆಯು ಘನ ಘೋರವಾಗಿದೆ. ಈ ಜಾತಿ ತಾರತಮ್ಯ, ಜಾತಿ ಧ್ವೇಷ, ಅಸ್ಪೃಷ್ಯತೆ ನಿರ್ಭೀಜಗೊಳಿಸದೇ ಸಮಾಜದ ಬೆಳವಣಿಗೆ, ಸಾಮರಸ್ಯ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಮೃತ ಯುವತಿ ಮಾನ್ಯ ದೊಡ್ಡಮನಿ ಹಾಗೂ ಆಕೆಯ ಪತಿ ವಿವೇಕಾನಂದ ಪ್ರಾಪ್ತವಯಸ್ಕರು ಮಾತ್ರವಲ್ಲ ಉತ್ತಮ ಶಿಕ್ಷಣ ಪಡೆಯುತ್ತಾ ಉತ್ತಮ ಭವಿಷ್ಯದ ಕನಸು ಕಾಣುತ್ತಾ ಹೊಸ ಬದುಕು ಕಟ್ಟಿಕೊಂಡಿದ್ದರು. ಆದರೆ ಜಾತಿಯ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡ ಮೃತ ಮಾನ್ಯಳ ತಂದೆ ಮನೆಯವರು ಮಗಳು ದಲಿತ ಯುವಕನನ್ನು ಮದುವೆಯಾದ ಒಂದು ನೆಪಮಾಡಿ ಅಮಾನುಷವಾಗಿ ಹತ್ಯೆ ಮಾಡಿರುವುದು ಜಾತಿ ಶ್ರೇಷ್ಠತೆಯ ವ್ಯಸನಕ್ಕೆ ಜಗತ್ತು ನೋಡುವ ಮುಂಚೆಯೆ ಗರ್ಭದಲ್ಲಿರುವ ಶಿಶುವನ್ನು ಕೂಡ ಹತ್ಯೆಗೈದಿರುವುದನ್ನು ಸಹಿಸುವುದಾದರೂ ಹೇಗೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಮಾರ್ಯದೆ ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕುಟುಂಬಕ್ಕಿರುವ ಆತಂಕದಂತೆ ಮಾನ್ಯಾಳ ಪತಿ ವೀವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಆಗ್ರಹಿಸಿದರು.
ಸರ್ಕಾರ ಅಂತರಜಾತಿ ವಿವಾಹವಾಗುವ ಎಲ್ಲ ಯುವಕ ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಅವರಿಗೆ ಸಾಮಾಜಿಕವಾಗಿ ಆರ್ಥಿಕ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಳಗೊಳಿಸಬೇಕು ಹಾಗೂ ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಈಗಾಗಲೇ ಅವಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ ಸರ್ವೊಚ್ಛ ನ್ಯಾಯಾಲಯದ ಆದೇಶಗಳನ್ನು ಬದ್ದತೆಯಿಂದ ಪಾಲಿಸುವ ಮೂಲಕ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಯ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು ಎಂದರು.
ಅವಮರ್ಯಾದಾ ಹತ್ಯೆಗಳ ವಿರುದ್ಧ ಜನಸಮುದಾಯಗಳನ್ನ ಸಂವೇಧನಾಶೀಲಗೊಳಿಸಲು ಸರ್ಕಾರ ಮುಂದಾಗಬೇಕು. ಅವಮರ್ಯಾದಾ ಹತ್ಯೆಗಳನ್ನ ಪ್ರೊತ್ಸಾಹಿಸುವ, ಸಹಕರಿಸುವ, ಸಹಾಯ ಮಾಡುವವರ ವಿರುದ್ಧವು ಕ್ರಮ ಕೈಗೊಳ್ಳಬೇಕು. ಯಾವ ಜಿಲ್ಲೆಯಲ್ಲಿ ಹೆಚ್ಚು ಅವಮರ್ಯಾದಾ ಹತ್ಯೆಗಳು ಮತ್ತೆ ಮತ್ತೆ ಮರಕಳಿಸುತ್ತಿದೆಯೊ ಆ ಜಿಲ್ಲೆಯ ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿ ಜನಜಾಗೃತಿ ಕಾರ್ಯಕ್ರಮಗಳನ್ನ ಸಂಘಟಿಸಬೇಕು. ಮಹಿಳೆಯರ ಮೇಲಾಗುವ ಎಲ್ಲ ತರಹದ ದೌರ್ಜನ್ಯಗಳನ್ನು ತಡೆಗಟ್ಟಲು ನ್ಯಾ. ಜಿ.ಎಸ್ ವರ್ಮಾ ಸಮಿತಿಯ ಹಾಗೂ ಉಗ್ರಪ್ಪ ಸಮಿತಿಯ ಮಹಿಳಾ ಪರ ಕಾನೂನು ಶಿಫಾರಸ್ಸುಗಳನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ರಾಜ್ಯ ಕಾರ್ಯದರ್ಶಿ ಉಡಚಪ್ಪ ಮಾಳಗಿ, ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಹಾವೇರಿ ಜಿಲ್ಲಾ ಸಂಚಾಲಕರಾದ ವೀರಣ್ಣ ಎನ್ ಗಡ್ಡಿಯವರ, ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್.ಯು) ಜಿಲ್ಲಾ ಮುಖಂಡರಾದ ನಾರಾಯಣ ಕಾಳೆ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ಹರೀಶ ಘೋರ್ಪಡೆ, ಹಬೀಬ್ ಮುಲ್ಲಾ, ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶೆಟ್ಟಿ ವಿಭೂತಿ ನಾಯಕ್, ಕರ್ನಾಟಕ ರಾಜ್ಯ ರೈತ ಸಂಘಟನೆ ಶಹರ ಘಟಕದ ಅಧ್ಯಕ್ಷರಾದ ಸುರೇಶ ಛಲವಾದಿ, ರೈತ ಸಂಘಟನೆಯ ಜಿಲ್ಲಾ ಮುಖಂಡರಾದ ನಾಗರಾಜ ರಿತ್ತಿಕುರಬರ, ತಿರಕಪ್ಪ ಹುಳಕೆಲ್ಲಪ್ಪನವರ, ಬಹುಜನ ಸಮಾಜ ಚಳುವಳಿ ಜಿಲ್ಲಾ ಮುಖಂಡರಾದ ಎಂ.ಕೆ ಮಕಬುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಹಾವೇರಿ | ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ Janashakthi Media
