ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ಎದುರಿಸುತ್ತಿರುವ ಉದ್ಯೋಗದ ಅಭದ್ರತೆಯ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಹಾಗೂ ಖಾಯಂಗೊಳಿಸಲು ಕ್ರಮಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘವು ಮಾರ್ಚ್ 07ರಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿಯನ್ನು ನಡೆಸಲು ತೀರ್ಮಾನಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ರಾಜ್ಯ ಸಂಚಾಲಕಿ ಚಿತ್ರಲೇಖಾ, ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಭರ್ತಿಗೊಳಿಸಬೇಕೆಂಬ ಅತ್ಯಂತ ಪ್ರಮುಖವಾದ ಹಲವು ಬೇಡಿಕೆಗಳು ಒಳಗೊಂಡಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಅತಿಥಿ ಶಿಕ್ಷಕರೆಂದು ಗುತ್ತಿಗೆಯಾಧಾರದಡಿ ದುಡಿಯುತ್ತಿರುವ ಫ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಅತಿಥಿ ಶಿಕ್ಷಕರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲದೆ ಸಿಗುವಂತಹ ಗೌರವ ಧನವೂ ಕನಿಷ್ಟವಾಗಿದ್ದು ಇದರಿಂದ ಜೀವನ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲಿ ಉದ್ಯೋಗ ಇಲ್ಲದೆ ಮಾಡಿದ ಸಾಲಸೋಲವನ್ನು ಈವರೆಗೂ ತೀರಿಸಲು ಸಾಧ್ಯವಾಗದೆ ಇದ್ದು, ಬರುವ ಆದಾಯಗಳೆಲ್ಲವೂ ಸಾಲದ ಕಂತು, ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರದಂತಹ ದಿನನಿತ್ಯದ ಅಗತ್ಯಗಳ ಪೂರೈಕೆಗಳಿಗೂ ಈಡೇರಿಸಲಾಗದಂತಹ ದುಸ್ಥಿತಿಯಲ್ಲಿ ಬದುಕುವಂತಾಗಿದೆ. ಬಹುತೇಕ ಅತಿಥಿ ಶಿಕ್ಷಕರು ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೆ ಖಿನ್ನತೆಗೊಳಗಾಗಿ ಆತ್ಮಹತ್ಯೆಯಂತಹ ದಾರಿಯನ್ನಿಡಿದು ತಮ್ಮ ಜೀವವನ್ನೇ ಕೊನೆಯಾಗಿಸಿದ ಘಟನೆಗಳು ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
ಅತಿಥಿ ಶಿಕ್ಷಕರು ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳನ್ನು ಹಾಗೂ ಉದ್ಯೋಗ ಭದ್ರತೆಯ ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದೆ ಈಗಾಗಲೇ ಹಲವು ರೀತಿಯ ಪ್ರತಿಭಟನೆಗಳ ಮೂಲಕ ಮನವಿಗಳನ್ನು ಸಲ್ಲಿಸುತ್ತಾ ಬಂದಿರುತ್ತೇವೆ. ಆದರೆ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿ, ಶಿಕ್ಷಣ ಸಚಿವರಾಗಲಿ ಸ್ಪಂದಿಸದೆ ಶಿಕ್ಷಕರ ವಿರೋಧಿಯಾಗಿ ವರ್ತಿಸುತ್ತಿದ್ದಾರೆ.
ಇತ್ತೀಚೆಗೆ ಸರಕಾರಿ ನೌಕರರ ಹೋರಾಟದ ಸಂದರ್ಭ ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸಿದ ಸರಕಾರ, ಕಳೆದ ಹಲವು ವರುಷಗಳಿಂದ ಶಾಂತಿಯುತವಾಗಿ ಒತ್ತಾಯಿಸುತ್ತ ಬಂದ ನಮ್ಮ ಬೇಡಿಕೆಗಳ ಈಡೇರಿಕೆಗೆ ಕನಿಷ್ಟ ನ್ಯಾಯವೂ ಒದಗಿಸಲು ಮುಂದಾಗದಿರುವುದು ಅತ್ಯಂತ ಖೇದಕರ. ಅದೇ ಪಕ್ಕದ ರಾಜ್ಯಗಳಲ್ಲಿ ಶಿಕ್ಷಣದ ಸುಧಾರಣೆಗಾಗಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವ ಮಹತ್ವಪೂರ್ಣ ತೀರ್ಮಾನವನ್ನು ಅಲ್ಲಿನ ಸರಕಾರಗಳು ಕೈಗೊಂಡಿದೆಯಾದರೂ ಅಂತಹ ತೀರ್ಮಾನಗಳನ್ನು ಕರ್ನಾಟಕ ರಾಜ್ಯ ಸರಕಾರವೂ ಜಾರಿಗೊಳಿಸಬೇಕೆಂದು ಅತಿಥಿ ಶಿಕ್ಷಕರ ಸಂಘವೂ ಬಲವಾದ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ