ಹುಬ್ಬಳ್ಳಿ: ಈ ದೇಶದಲ್ಲಿ ಮಕ್ಕಳು ಅತ್ಯಂತ ಅಮೂಲ್ಯ ಸಂಪತ್ತು, ಅವರಿಗೆ ಸಿಗಬೇಕಿರುವ ಮೂಲಭೂತ ಹಕ್ಕುಗಳನ್ನು ಜಾರಿಮಾಡಲು ಐಸಿಡಿಎಸ್ ಯೋಜನೆ ಜಾರಿಮಾಡಿದೆ. ಈ ಯೋಜನೆಯ ಮೂಲಕ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು, ಲಸಿಕೆ ನೀಡುವುದು, ಆರೋಗ್ಯ ರಕ್ಷಣೆ ಇತ್ಯಾದಿ ಖಾಯಂ ಸ್ವರೂಪದ ಕೆಲಸ ಮಾಡುತ್ತಿದ್ದರೂ ಅದನ್ನು ಯೋಜನೆಯಾಗಿಯೇ ನೋಡಲಾಗುತ್ತಿದೆ. ಹೊರಗುತ್ತಿಗೆಯಿಂದ ಖಾಯಂ ಸ್ವರೂಪದ ಕೆಲಸಗಳಿಗೂ ತಾತ್ಕಾಲಿಕ ನೇಮಕಾತಿ ಮಾಡುವುದು ಕಾನೂನು ಬಾಹಿರ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಕಳವಳ ವ್ಯಕ್ತಪಡಿಸಿದರು.
2022ರ ಮಾರ್ಚ್ 22ರಂದು ಹುಬ್ಬಳ್ಳಿಯ ಅಕ್ಕನಬಳಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ರಾಜ್ಯ ಸರ್ಕಾರಿ ಖಾಯಂಮೇತರ ನೌಕರರ ಒಕ್ಕೂಟದ ಬೆಳಗಾವಿ ವಿಭಾಗದ ಸಂಘಟನಾ ಸಮಾವೇಶ ನಡೆಸಲಾಯಿತು.
ಈ ಸಮಾವೇಶ ಉದ್ಘಾಟಿಸಿ ಮಾತನಾಡಿದ ಖಾಯಂಮೇತರ ನೌಕರರ ಸಂಘದ ಗೌರವ ಅಧ್ಯಕ್ಷರು ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಅವರು, ಐಸಿಪಿಎಸ್ ಯೋಜನೆ ಈ ದೇಶದಲ್ಲಿ ಅನಾಥ, ಪರಿತ್ಯಕ್ತ ಮತ್ತು ಅಸಹಾಯಕ ಮಕ್ಕಳಿರುತ್ತಾರೋ ಅಲ್ಲಿಯವರೆಗೂ ಆ ಮಕ್ಕಳ ರಕ್ಷಣೆಗಾಗಿ ಈ ಯೋಜನೆ ಇರಬೇಕು. ಆದರೆ ಸರ್ಕಾರಗಳು ತಾತ್ಕಾಲಿಕ ಹುದ್ದೆಗಳೊಂದಿಗೆ ಯೋಜನೆ ಅನುಷ್ಠಾನ ಮಾಡುತ್ತಿದೆ. ಕಳೆದ 07 ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ ಎಂದು ಹೇಳಿದರು.
ಮುಂದುವರೆದು ಐಸಿಪಿಎಸ್ ಯೋಜನೆಯ ಸಿಬ್ಬಂದಿ ಶಾಸನಾತ್ಮಕ ಹುದ್ದೆಗಳನ್ನು ನಿರ್ವಹಿಸುತ್ತಾರೆ. ಅನಾಥ, ಸಂಕಷ್ಟ ಪರಿಸ್ಥಿತಿಯಲ್ಲಿರುವ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳನ್ನು ರಕ್ಷಿಸುತ್ತಾರೆ. ಆದರೆ ಇವರಿಗೆ ಹೊರಗುತ್ತಿಗೆಯಿಂದ ಅಭದ್ರತೆ ಕಾಡುತ್ತಿದೆ. ಮಕ್ಕಳ ರಕ್ಷಣಾ ಕೆಲಸ ಒಂದು ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕೆಲಸ ಆದರೆ ಹೊರಗುತ್ತಿಗೆಯವರು ಮಕ್ಕಳ ರಕ್ಷಣೆ ಮಾಡುವಾಗ ಅಪಾಯ ಮೈಮೇಲೆ ಎಳೆದುಕೊಂಡು ದುಡಿಯುತ್ತಿದ್ದಾರೆ. ಇವರಿಗೆ ಸೇವಾ ಭದ್ರತೆ ಸಿಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತಾತ್ಮಕ ವೆಚ್ಚ ಕಡಿತಮಾಡುವ ಹೆಸರಿನಲ್ಲಿ ಸರ್ಕಾರಿ ಹುದ್ದೆಗಳನ್ನು ಕಡಿತ ಮಾಡಿ ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಂಡು ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತಿದೆ. ಇದು ಸರ್ಕಾರಿ ಪ್ರಾಯೋಜಿತ ಶೋಷಣೆ, ಇದು ಕೊನೆಯಾಗಬೇಕು. ತಾತ್ಕಾಲಿಕ ಸಿಬ್ಬಂದಿಗೆ ಭದ್ರತೆ ಒದಗಿಸಲು, ವೇತನ ಒದಗಿಸಲು ಆಂಧ್ರ ಮಾದರಿಯಲ್ಲಿ ಹೊರಗುತ್ತಿಗೆ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಿ ವೇತನ ನೀಡಬೇಕು ಎಂದರು.
ಸಂಘದ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಕಳೆದ 10 ವರ್ಷಗಳಿಂದ ಕೆಲಸ ಮಾಡಿದವರಿಗೂ ಹೊರಗುತ್ತಿಗೆಯಿಂದ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಇನ್‌ಸೋರ್ಸ್ ಮಾಡಬೇಕು, ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭರತೇಶ ರು ಮಾತನಾಡಿ, ಸರ್ಕಾರ ಕೂಡಲೇ ಮಿಷನ್ ವಾತ್ಸಲ್ಯ ಜಾರಿಮಾಡಿ ವೇತನ ಹೆಚ್ಚಳ ಮಾಡಬೇಕು ಅಲ್ಲದೇ ಖಾಯಂ ಸ್ವರೂಪದ ಹುದ್ದೆಗಳನ್ನು ಖಾಯಂ ಮಾಡಬೇಕು ಎಂದರು.
ಪರಶುರಾಮ, ಕುಸುಮಾ, ಪವನ್ ವೇದಿಕೆಯಲ್ಲಿದ್ದರು. ಮಲ್ಲಪ್ಪ ನಿರೂಪಿಸಿದರು, ಶ್ವೇತಾ ಎಲ್ಲರನ್ನು ಸ್ವಾಗತಿಸಿದರು, ಪ್ರಕಾಶ ಕೊಡ್ಲಿವಾಡ ವಂದಿಸಿದರು. ಕಾರ್ಯಕ್ರಮದಲ್ಲಿ ಐಸಿಪಿಎಸ್ ಮತ್ತು ಪೋಷಣಾ ಅಭಿಯಾನದ ಸಿಬ್ಬಂದಿಗಳು ಭಾಗವಹಿಸಿದರು.