ಖಾಯಂ ಶಿಕ್ಷಕರೇ ಇಲ್ಲದ ಉತ್ತರ ಕನ್ನಡದ 120 ಸರ್ಕಾರಿ ಶಾಲೆಗಳು

ಕಾರವಾರ : ಇಂದು ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ಶಿಕ್ಷಣ ಇಲಾಖೆ ಶಾಲೆ ಪ್ರಾರಂಭೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲೆ ಪ್ರಾರಂಭಕ್ಕೆ ಈಗಾಗಲೇ ಅಧಿಕಾರಿಗಳು ಶಾಲಾ ಶಿಕ್ಷಕರೊಂದಿಗೆ ಸಭೆ ನಡೆಸಿದ್ದಾರೆ. ಆದರೆ, ಜಿಲ್ಲೆಯ ಸುಮಾರು 120ಕ್ಕೂ ಅಧಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೆ ಇರುವುದು ಕಳವಳಕಾರಿಯಾಗಿದೆ.

ಅತ್ಯಂತ ಗುಡ್ಡಗಾಡು ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 12 ತಾಲೂಕುಗಳಿರುವುದರಿಂದ ಕಾರವಾರ ಹಾಗೂ ಶಿರಸಿ ಎರಡು ಶೈಕ್ಷಣಿಕ ಜಿಲ್ಲೆಯನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಮಾರು 102 ಶಾಲೆಗಳಲ್ಲಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯ 26 ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ.

ಘಟ್ಟದ ಮೇಲ್ಭಾಗದ ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಜೋಯಿಡಾ, ದಾಂಡೇಲಿ, ಯಲ್ಲಾಪುರ, ಹಳಿಯಾಳ, ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕುಗಳಲ್ಲಿ ಹೆಚ್ಚಿನ ಜನವಸತಿ ಪ್ರದೇಶಗಳು ಗುಡ್ಡಗಾಡು ಪ್ರದೇಶದಗಳಲ್ಲಿ ಇವೆ. ಈ ಪ್ರದೇಶದ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಆಧಾರ. ಆದರೆ, ಇಂತಹ ಗುಡ್ಡಗಾಡು ಪ್ರದೇಶದ ಹಲವು ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ.

ಶಾಲೆ ಪ್ರಾರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಮೂಲಸೌಕರ್ಯ ಒದಗಿಸುವುದರ ಜತೆಗೆ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಆಗ ಮಾತ್ರವೇ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿದೆ. ಕೂಡಲೇ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂಬುದು ಪಾಲಕರ ಆಗ್ರಹವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 935 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 49 ಪ್ರೌಢ ಶಾಲೆಗಳಿವೆ. ಇದರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 1,161 ರ ಪೈಕಿ 1,131 ಶಿಕ್ಷಕರು, ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1,854 ಶಿಕ್ಷಕರ ಪೈಕಿ 1,571 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿರಶಿ ಶೈಕ್ಷಣಿಕ ಜಿಲ್ಲೆಯಲ್ಲಿ 1,109 ಸರ್ಕಾರಿ ಪ್ರಾಥಮಿಕ, 74 ಪ್ರೌಢ ಶಾಲೆಗಳಿವೆ. ಈ ಪೈಕಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 739, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 421 ಮತ್ತು ಪ್ರೌಢ ಶಾಲೆಯಲ್ಲಿ 120 ಹುದ್ದೆಗಳು ಖಾಲಿಯಾಗಿವೆ.

ಶಿಕ್ಷಕರ ವರ್ಗಾವಣೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಬೇರೆ ಜಿಲ್ಲೆಯ ಶಿಕ್ಷಕರು ಹಿಂದೇಟು ಹಾಕುತ್ತಾರೆ. ಅದರಲ್ಲಿಯೂ ಜಿಲ್ಲಾ ವ್ಯಾಪ್ತಿಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿನ ಶಾಲೆಗೆ ಖಾಯಂ ಶಿಕ್ಷಕರು ವರ್ಗಾವಣೆ ಮಾಡಿಕೊಂಡು ನಗರದ ಸಮೀಪದ ಶಾಲೆಗಳತ್ತ ಮುಖ ಮಾಡಿದ ಪರಿಣಾಮ ಖಾಯಂ ಶಿಕ್ಷಕರ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಮಾತಾಗಿದೆ.

Donate Janashakthi Media

Leave a Reply

Your email address will not be published. Required fields are marked *