ಖಾಸಗೀಕರಣಕ್ಕೆ ವಿರೋಧ: ಸಾರಿಗೆ ನೌಕರರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ

ಬೆಂಗಳೂರು: ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಕೊರೋನಾ ಸಂಕಷ್ಟದಲ್ಲಿ ಸಾರಿಗೆ ನೌಕರರಿಗೆ ಪೂರ್ಣ ವೇತನ ಒದಗಿಸಬೇಕು ಮುಂತಾದ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ರಾಜ್ಯ ಸಾರಿಗೆ ನೌಕರರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಐಟಿಯು ಕಾರ್ಮಿಕ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ನೇತೃತ್ವದಲ್ಲಿ ನಾಲ್ಕು ಸಾರಿಗೆ ನಿಗಮಗಳ ಕಾರ್ಮಿಕರು ಇಂದು ಗುರುವಾರ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆ 11:30 ಗಂಟೆಗೆ ಪ್ರತಿಭಟನೆ ಪ್ರಾರಂಭವಾಗಿದ್ದು, ಸರ್ಕಾರಕ್ಕೆ ಮತ್ತು ಆಡಳಿತ ವರ್ಗಕ್ಕೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ.

ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ಸುರಕ್ಷತಾ ಸಾಮಗ್ರಿಗಳನ್ನ ಒದಗಿಸಿಲ್ಲ. 50ಕ್ಕೂ ಹೆಚ್ಚು ಕಾರ್ಮಿಕರು ಕೊರೋನಾಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರವೇ 30 ಲಕ್ಷ ರೂ ಪರಿಹಾರ ಘೋಷಿಸಿದರೂ ನಿಗಮಗಳಿಂದ ಈ ಆದೇಶ ಜಾರಿ ಆಗಿಲ್ಲ. ಕೂಡಲೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಬೇಕು ಎಂಬುದು ಇವರ ಬೇಡಿಕೆಗಳಲ್ಲೊಂದಾಗಿದೆ.

ಪ್ರತಿಭಟನೆಯಲ್ಲಿ  ಸಾರಿಗೆ ನೌಕರರ  ಒಕ್ಕೂಟದ ಅಧ್ಯಕ್ಷ ಹೆಚ್.ಡಿ. ರೇವಪ್ಪ, ಪ್ರಧಾನಕಾರ್ಯದರ್ಶಿ ಹೆ.ಎಸ್. ಮಂಜುನಾಥ್, ಉಪಾಧ್ಯಕ್ಷ  ಡಾ. ಕೆ. ಪ್ರಕಾಶ್,  ಮುಖಂಡರಾದ ರವಿ.ಎಸ್, ಕುಸುಮಾ, ಸಿ.ಎಸ್. ರಂಗಸ್ವಾಮಿ, ಮೋಹನದಾಸ್, ಆನಂದ್, ಸಂತೋಷ ಕೆ.ಎಮ್ ಸೇರಿದಂತೆ   ಐನ್ನೂರಕ್ಕೂ ಹೆಚ್ಚು ಕಾರ್ಮಿಕರು ಇವತ್ತಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು:

1) ಸಾರಿಗೆ ನಿಗಮಗಳಲ್ಲಿ ವಾಹನಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಬರುವವರೆಗೂ ಕಾರ್ಮಿಕರಿಗೆ ಪೂರ್ಣ ವೇತನ ನೀಡಬೇಕು.
2) ಕಾರ್ಮಿಕರು ಗಳಿಸಿದ್ದ ರಜೆಗಳನ್ನು ಅವರ ಖಾತೆಗೆ ಪುನಃ ವಾಪಸ್ ನೀಡಬೇಕು.
3) ಕೊರೋನಾ ಪಾಸಿಟಿವ್ ಬಂದು ಕ್ವಾರಂಟೈನ್ ಆದ ಅವಧಿ ಹಾಗೂ ಚಿಕಿತ್ಸೆ ಪಡೆದ ಅವಧಿಯಲ್ಲಿ ವೇತನಸಹಿತ ರಜೆ ನೀಡುವ ಆದೇಶ ಹೊರಡಿಸಬೇಕು.
4) ಕೊರೋನಾದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ಹಣ ಒದಗಿಸಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು.
5) ಬಿಎಂಟಿಸಿ ನಿಗಮದಲ್ಲಿ ಪಾಳಿಯಲ್ಲಿ ಮಾರ್ಗ ಕಾರ್ಯಾಚರಣೆಯ ವ್ಯವಸ್ಥೆ ಮಾಡಬೇಕು.
6) ನಿಗಮದಿಂದ ನಿಗಮಕ್ಕೆ ವರ್ಗಾವಣೆಯ ಅವಕಾಶ ಇರಬೇಕು.
7) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ಯಾಕೇಜ್ ರೂಪದಲ್ಲಿ ಸಾರಿಗೆ ನಿಗಮಗಳಿಗೆ ಹಣ ನೀಡಬೇಕು.
8) ಸಾರಿಗೆ ನಿಗಮಗಳಿಗೆ ಸರ್ಕಾರ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡಬೇಕು.
9) ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗಿಕರಣ ಮಾಡುವ ಕೆಲ ನಿಲ್ಲಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ರದ್ದು ಮಾಡಬೇಕು. ಸರ್ಕಾರದ ಒಡೆತನದಲ್ಲೇ ಎಲೆಕ್ಟ್ರಿಕ್ ಬಸ್ಸುಗಳು ಓಡಬೇಕು.

Donate Janashakthi Media

Leave a Reply

Your email address will not be published. Required fields are marked *