ಖಾಸಗಿ ವೈದ್ಯಕೀಯ ಕಾಲೇಜುಗಳು ತೆರೆಯಲು ಮುಕ್ತ ಅವಕಾಶ: ಎಐಡಿಎಸ್‌ಓ ವಿರೋಧ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿನ ಕಾರ್ಪೋರೇಟ್ ಸಂಸ್ಥೆಗಳು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಮುಕ್ತ ಅವಕಾಶ ನೀಡಿರುವ ಕ್ರಮಕ್ಕೆ ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌‌ ಆರ್ಗನೈಜೆಷನ್‌(ಎಐಡಿಎಸ್‌ಓ) ವಿರೋಧ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಉಗ್ರವಾಗಿ ಖಂಡಿಸಿರುವ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಕ್ರೇನಿನಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ, ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವುದು ಒಂದು ಜವಾಬ್ದಾರಿಯುತ ಕರ್ತವ್ಯ ಸರ್ಕಾರಕ್ಕೆ ಆಗಬೇಕಿತ್ತು. ಆದರೆ, ಭಾರತೀಯ ವಿದ್ಯಾರ್ಥಿಗಳು ಎಂಬಿಬಿಎಸ್‌ ಓದಲು ವಿದೇಶಕ್ಕೆ ಹೋಗುತ್ತಿದ್ದು, ಅದನ್ನು ನೆಪವಾಗಿಟ್ಟುಕೊಂಡು ಪ್ರಧಾನ ಮಂತ್ರಿಗಳು ವೈದ್ಯಕೀಯ ಶಿಕ್ಷಣದ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ಇದು ಕೇಂದ್ರ ಸರ್ಕಾರದ ಹಠಾತ್ ನಿರ್ಧಾರವಲ್ಲ. ಬದಲಿಗೆ, ಎನ್‌ಎಂಸಿ ಕಾಯಿದೆ 2020ರ ನೀತಿಗಳ ಅನುಷ್ಠಾನವಾಗಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣದ ಖಾಸಗೀಕರಣವನ್ನು ಹಿಂದಿನ ಸರ್ಕಾರಗಳು ಕೂಡ ಮಾಡಿದ್ದವು ಮತ್ತು ಈಗಿನ ಬಿಜೆಪಿ ಸರ್ಕಾರವು ಮಾಡುತ್ತಿದೆ. ಅದರಲ್ಲೂ ಎನ್‌ಎಂಇಸಿ ಅನುಷ್ಠಾನಕ್ಕೆ ತರುವ ಮೂಲಕ ಅದನ್ನು ಮತ್ತಷ್ಟು ತೀವ್ರವಾಗಿ ಮಾಡುತ್ತಿದೆ. ಕೇಂದ್ರ ಸರ್ಕಾರದ ನಡೆಯಂತೆಯೇ, ದೇಶದ ಹಲವು ರಾಜ್ಯ ಸರ್ಕಾರಗಳು ಇದೇ ದಾರಿಯನ್ನು ಅನುಸರಿಸುತ್ತಿವೆ.

ಯಾವುದೇ ಕನಿಷ್ಠ ಮೂಲಸೌಕರ್ಯಗಳಿಲ್ಲದ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜುಗಳನ್ನು ಲಂಗುಲಗಾಮಿಲ್ಲದೆ ತೆರೆಯಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಸಾಮಾನ್ಯ ವಿದ್ಯಾರ್ಥಿಗಳ ಮತ್ತು ಒಟ್ಟಾರೆ ಸಮಾಜದ ಹಿತಾಸಕ್ತಿ ದೃಷ್ಟಿಯಿಂದ ನೋಡಿದರೆ, ಸರ್ಕಾರವು ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು ಈ ಹೊತ್ತಿನ ಅವಶ್ಯಕತೆಯಾಗಿದೆ.

ಅದರ ಬದಲಿಗೆ, ಸರ್ಕಾರವು ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿದೆ. ಖಾಸಗಿ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ವಿದೇಶಿ ಹಾಗೂ ದೇಶಿ ಕಾರ್ಪೊರೇಟ್‌ಗಳಿಗೆ ಭೂಮಿ, ಕಟ್ಟಡ, ಆಸ್ಪತ್ರೆಗಳನ್ನು ಒದಗಿಸುವ ಮೂಲಕ, ಅವುಗಳ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ನಿರತವಾಗಿದೆ. ಈ ಕಾರಣದಿಂದಾಗಿ, ವೈದ್ಯಕೀಯ ಶಿಕ್ಷಣವು ಒಂದು ಸರಕಾಗಿ ಮಾರ್ಪಡುತ್ತಿದೆ. ಇದರಿಂದಾಗಿ ಕೆಳ ವರ್ಗದ ಮತ್ತು ಮದ್ಯಮ ವರ್ಗದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗುತ್ತಾರೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಮತ್ತು ಶುಲ್ಕಗಳು ಅತ್ಯಂತ ದುಬಾರಿಯಾಗುತ್ತವೆ ಎಂದು ಅಜಯ್ ಕಾಮತ್ ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ದೇಶದ ವಿದ್ಯಾರ್ಥಿಗಳು ಹಾಗೂ  ಶಿಕ್ಷಣ ಪ್ರೇಮಿ ಜನತೆ ಒಂದಾಗಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕೆಂದು ಎಐಡಿಎಸ್‌ಓ ಸಂಘಟನೆಯು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *