ಕೋಲಾರ : ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಾತಿ ಮೇಲೆ ಸರ್ಕಾರ ನಿಯಂತ್ರಣದ ಕಾನೂನು ಜಾರಿಯಲ್ಲಿ ಇದ್ದರು ಸಮರ್ಪಕವಾಗಿ ಜಾರಿಮಾಡಲು ಒತ್ತಾಯಿಸಿ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಗುರುವಾರ ವಿದ್ಯಾರ್ಥಿ-ಪೋಷಕ ಸಮುದಾಯವು ಮನವಿ ಸಲ್ಲಿಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷ ಕೊವೀಡ್ -19 ರಿಂದ ಇಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧ್ಯಾರ್ಥಿ ಸಂಘಟನೆಗಳು, ಪೋಷಕರ ಹೋರಾಟದ ಪ್ರಭಾವದಿಂದ ಈ ಬಾರಿ ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ವಸೂಲು ಮಾಡಬಾರದು ಎಂದು ರಾಜ್ಯ ಸರ್ಕಾರದ ಆದೇಶ ಮಾಡಿದೆ. ಆದೇಶದ ಪ್ರಕಾರ ಖಾಸಗಿ ಶಾಲೆಗಳು ಈ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಹಾಗೂ ಕಳೆದ ವರ್ಷದ ಶುಲ್ಕದ ಶೇ. 70 ಮೊತ್ತವನ್ನು ಮಾತ್ರ ಪಡೆಯಬೇಕು ಎಂದು ನಿಯಮ ಇದ್ದರು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದರು.
ಸರ್ಕಾರದ ಆದೇಶ ಕೇವಲ ಕಾಗದ ಪತ್ರಕ್ಕೆ ಸೀಮಿತವಾಗಿದ್ದು. ಬಹುತೇಕ ಖಾಸಗಿ ಶಾಲೆಗಳು ಈ ಆದೇಶವನ್ನು ಪಾಲಿಸುತ್ತಿಲ್ಲ ಪ್ರತಿಯೊಂದು ಖಾಸಗಿ ಶಾಲೆಗಳು ಎಷ್ಟು ಶುಲ್ಕ ಪಡೆಯುತ್ತಿವೆ ಎಂದು ಬಹಿರಂಗವಾಗಿ ಫಲಕದಲ್ಲಿ ಶುಲ್ಕ ವಿವರಣೆ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡಬೇಕೆಂಬ ಆದೇಶವನ್ನು ಪಾಲಿಸುತ್ತಿಲ್ಲ ಮನಸೋ ಇಚ್ಛೆ ಖಾಸಗಿ ಶಾಲೆಗಳು ಶುಲ್ಕ ಪಾವತಿಸಲು ಪೋಷಕರಿಗೆ ಒತ್ತಡ ಹಾಕುತ್ತಿವೆ ಎಂದರು.
ಕೊವೀಡ್ ಲಾಕ್ ಡೌನ್ ನಿಂದ ಉದ್ಯೋಗ, ಆದಾಯ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರು, ಅಸಂಘಟಿತ ಕಾರ್ಮಿಕರು, ರೈತರು, ದುಡಿಯುವ ವರ್ಗದ ಜನರು ಈ ಖಾಸಗಿ ಶಾಲೆಗಳ ಶುಲ್ಕ ವಸೂಲಾತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲಿಸದೇ ಇರುವುದನ್ನು ಖಂಡಿಸುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿ ಇರುವ ಕಮಿಟಿ ಸಕ್ರಿಯವಾಗಿ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶ ಪಾಲಿಸದೆ ಇರುವ ಶಾಲೆಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕೆಂದು ವಿದ್ಯಾರ್ಥಿ-ಪೋಷಕರ ಸಮುದಾಯ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ಪಿ.ವಿ.ರಮಣಪ್ಪ, ಎಂ.ಎಚ್,ರಾಮಾಂಜಿನಪ್ಪ, ಎಸ್. ಸತೀಶ್, ಮುನಿರಾಜು,ಇಮ್ರಾನ್ ಪರ್ವೇಜ್ ಇದ್ದರು.