ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ: ಖಾಸಗೀ ಆಸ್ಪತ್ರೆ ದಿಗ್ಬಂಧನ ಮಾಡಿದ ಆರೋಗ್ಯ ಇಲಾಖೆ

ಬೆಳಗಾವಿ: ಮೂಡಲಗಿ ಪಟ್ಟಣದ ಸೇತುವೆ ಬಳಿ ಹಳ್ಳದಲ್ಲಿ ನೆನ್ನೆ(ಜೂನ್‌ 24) 7 ಭ್ರೂಣಗಳು ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭ್ರೂಣ ಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕೋಣಿ, ಮೂಡಲಗಿ  ಪೊಲೀಸರ ನೇತೃತ್ವದಲ್ಲಿ ವೆಂಕಟೇಶ ಹೆರಿಗೆ ಆಸ್ಪತ್ರೆ ದಿಗ್ಬಂಧನ ಮಾಡಿಸಿದ್ದಾರೆ.

ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್‍ಒ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಹೆರಿಗೆ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೆಂಕಟೇಶ ಹೆರಿಗೆ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಆರೋಗ್ಯಾಧಿಕಾರಿ ಮಹೇಶ್ ಕೋಣಿ ದಿಗ್ಬಂಧನ ಮಾಡಿದ್ದಾರೆ.

ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ದಿಗ್ಬಂಧನ ಮಾಡಲಾಗಿದ್ದು, ನೆನ್ನೆ ಸಿಕ್ಕಿರುವ ಏಳು ಭ್ರೂಣ ಮೃತದೇಹಗಳು ಮೂರು ವರ್ಷಗಳ ಹಿಂದೆ ಅಬಾಷನ್ ಮಾಡಿದ್ದವು ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ಬಯಲಿಗೆ ಬಂದಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಎರಡು ದಿನಗಳ ಹಿಂದೆ ರಾತ್ರೋರಾತ್ರಿ ಏಳು ಭ್ರೂಣಗಳನ್ನು ಐದು ಬಾಟಲಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದರು.

ವೆಂಕಟೇಶ ಹೆರಿಗೆ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ವೀಣಾ ಕಣಕರೆಡ್ಡಿ, ಏಳು ಭ್ರೂಣಗಳನ್ನು ನಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನ್‌ ನಲ್ಲಿ ಭದ್ರಪಡಿಸಿ ಭ್ರೂಣಗಳನ್ನು ಬಾಟಲಿನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಬದಲಿಸುವಾಗ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ಸಿಬ್ಬಂದಿ ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ. ವೆಂಕಟೇಶ ಆಸ್ಪತ್ರೆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂನ್‌ 23ರಂದು ಹಳ್ಳದಲ್ಲಿ ಎಸೆದಿರುವುದಾಗಿ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಪ್ಪು ಒಪ್ಪಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು, ಪೊಲೀಸರು ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ದಾರೆ ಎಂಬುದು ಹಾಗೂ ಇವೆಲ್ಲವೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಸುಮ್ಮನೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಯ್ಕಾನಿಂಗ್ ಸೆಂಟರ್ ಮಾಲೀಕರು, ದನದಾಹಿ ವೈದ್ಯರು ಮತ್ತು ಪೋಷಕರ ಗಂಡುಮಗುವಿನ ವ್ಯಾಮೋಹಕ್ಕೆ ಹೆಣ್ಣು ಭ್ರೂಣ ಹತ್ಯೆಗೆ ಕಾರಣಗಳಾಗಿವೆ. ಸದ್ಯ ಏಳು ಭ್ರೂಣ ಮೃತದೇಹಗಳು ಬೆಳಗಾವಿಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿದೆ. ವರದಿ ಬಂದ ಮೇಲೆ ಮತ್ತಷ್ಟು ಆಸ್ಪತ್ರೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.

ಬೆಳಗಾವಿ ಗಡಿ ಜಿಲ್ಲೆಯಾಗಿದ್ದು, ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ. ಹೆಣ್ಣುಭ್ರೂಣ ಎಂಬ ಕಾರಣಕ್ಕೆ ಅದನ್ನು ತೆಗೆಸುವ ಕೃತ್ಯ ಎಸಗಿರುವ ಅನುಮಾನ ಹೆಚ್ಚಾಗುವಂತೆ ಮಾಡಿದೆ. ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ನಿಷೇಧವಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಕಾನೂನಿನ ಭಯವೇ ಇಲ್ಲ ಎಂಬಂತಾಗಿದೆ.

Donate Janashakthi Media

Leave a Reply

Your email address will not be published. Required fields are marked *