ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ಗಳ ಶುಲ್ಕ ಏರಿಕೆ ಪ್ರಸ್ತಾವನೆಗೆ ಸಮ್ಮತಿ ನೀಡಿರುವ ರಾಜ್ಯ ಸರ್ಕಾರದ ನಿಲುವು ಅತ್ಯಂತ ಅಪ್ರಜಾತಾಂತ್ರಿಕ ಹಾಗು ಅನೈತಿಕ ಎಂದು ಎಐಡಿಎಸ್ಓ ಆರೋಪಿಸಿದೆ.
ಖಾಸಗಿ ಇಂಜಿನಿಯರಿಂಗ್ ಕೋರ್ಸ್ಗಳ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ, ಹಿಂದಿನ ದರವನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಮಾನ್ಯ ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಎಐಡಿಎಸ್ಓ ಸ್ವಾಗತಸಿದೆ. ಆದರೆ ಇದರಲ್ಲಿ ಹಲವು ಅನುಮಾನಗಳಿವೆ ಎಂಬ ಪ್ರಶ್ನೆಯನ್ನು ಹೊರಹಾಕಿದೆ.
ವೃತ್ತಿಪರ ಕೋರ್ಸ್ಗಳ ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜು ಸಂಸ್ಥೆಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಅವರ ಜೊತೆಗೆ ಸಭೆ ಜರುಗಿತ್ತು.
ಆದರೆ ಇದೇ ಸಭೆಯಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘವು ತನ್ನ ಒಂದು ಅಹವಾಲನ್ನು ಮಾನ್ಯ ಸಚಿವರಿಗೆ ನೀಡಿ, ಈ ಶೈಕ್ಷಣಿಕ ವರ್ಷದ ಶುಲ್ಕವು ಪ್ರತಿ ವರ್ಷದಂತೆ ಮುಂದುವರೆಯಲು ಸಮ್ಮತಿಸಿ, ಅದರ ಬದಲಾಗಿ ಪ್ರತಿ ವರ್ಷವು ಶೇ.10ರಂತೆ ಶುಲ್ಕ ಏರಿಕೆ ಮಾಡಲು ಸರ್ಕಾರ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡಬೇಕು ಎಂಬುದನ್ನು ಪ್ರಸ್ತಾಪಿಸಿದ್ದಾರೆ.
ಈ ಪ್ರಸ್ತಾವನೆಗೆ ಸರ್ಕಾರ ಸಮ್ಮತಿ ನೀಡಿದೆ ಎಂದು ಖಾಸಗಿ ಮ್ಯಾನೇಜ್ಮೆಂಟ್ಗಳು ಪತ್ರಿಕೆಗಳಿಗೆ ನೀಡಿರುವ ಹೇಳಿಕೆಯಿಂದ ತಿಳಿದು ಬಂದಿದೆ. ಒಂದು ಕಡೆಯಿಂದ ಕೊಟ್ಟು ಮತ್ತೊಂದು ಕಡೆಯಿಂದ ಕಸಿಯುತ್ತಿರುವ ಸರ್ಕಾರದ ಈ ನಿರ್ಧಾರ ಅತ್ಯಂತ ಅಪ್ರಜಾತಾಂತ್ರಿಕ ಅಷ್ಟೇ ಅಲ್ಲ, ಅನೈತಿಕ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ(ಎಐಡಿಎಸ್ಓ) ಟೀಕಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಎಐಡಿಎಸ್ಓ ಸಂಘಟನೆಯು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಕೋವಿಡ್ ಹಿನ್ನೆಲೆಯಲ್ಲಿ ಜನಸಾಮಾನ್ಯರು, ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದಾರೆ. ಶಿಕ್ಷಣದ ವ್ಯಾಪಾರೀಕರಣ ಎಷ್ಟರ ಮಟ್ಟಿಗೆ ತೀವ್ರವಾಗಿ ಬೆಳೆಯುತ್ತಿದೆಯೆಂದರೆ, ದೊಡ್ಡ ಸಂಖ್ಯೆಯ ಗ್ರಾಮೀಣ, ಬಡ ಕುಂಟುಂಬ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಮಯದಲ್ಲಿ ‘ಜನಪರ ಸರ್ಕಾರ’ ವಿದ್ಯಾರ್ಥಿ ಶುಲ್ಕವನ್ನು ರದ್ದುಗೊಳಿಸಬೇಕಿತ್ತು. ವಿದ್ಯಾರ್ಥಿ ವೇತನಗಳನ್ನು ಹೆಚ್ಚಿಗೆ ಮಾಡಬೇಕಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಸರ್ಕಾರವು ಖಾಸಗಿ ಮ್ಯಾನೇಜ್ಮೆಂಟ್ಗಳ ಹಿತಾಸಕ್ತಿಗೆ ಮಣಿದಿರುವುದು ಅತ್ಯಂತ ವಿಷಾದನೀಯ ಎಂದು ಆರೋಪಿಸಿದ್ದಾರೆ.
ಮುಂದುವರೆದು, ಯಾವುದೇ ಶೈಕ್ಷಣಿಕ ಶುಲ್ಕದ ವಿಚಾರವಾಗಿ ಸರ್ಕಾರ ಮತ್ತು ಖಾಸಗಿ ಮ್ಯಾನೇಜ್ಮೆಂಟ್ಗಳು ಮಾತ್ರವೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಅವರಿಗೆ ಇಲ್ಲ. ಅದು ಅಪ್ರಜಾತಾಂತ್ರಿಕವಾಗುತ್ತದೆ. ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರೊಂದಿಗೆ ಚರ್ಚಿಸಿ ಶುಲ್ಕದ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಪ್ರಜಾತಾಂತ್ರಿಕ. ಈಗಿನ ಶುಲ್ಕ ಏರಿಕೆ ನಿರ್ಧಾರವು, ಸರ್ಕಾರದ ಶಿಕ್ಷಣ ವಿರೋಧಿ ಧೋರಣೆ ಮತ್ತು ಖಾಸಗಿ ಮ್ಯಾನೇಜ್ಮೆಂಟ್ ಪರವಾದ ಧೋರಣೆಯನ್ನು ತೋರಿಸುತ್ತದೆ. ಈ ಕೂಡಲೇ, ರಾಜ್ಯ ಸರ್ಕಾರವು ಶೇ.10 ರಷ್ಟು ಏರಿಕೆ ಮಾಡುವ ಬಗ್ಗೆ ನೀಡಿರುವ ಸಮ್ಮತಿಯನ್ನು ಹಿಂಪಡೆಯಬೇಕು, ಯಾವುದೇ ರೀತಿಯ ಶುಲ್ಕ ಏರಿಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.