ನವದೆಹಲಿ: ಕೇಂದ್ರ ಸರಕಾರ ದೂರಸಂಪರ್ಕ ವಲಯದ ಸುಧಾರಣೆಗಳ ಹೆಸರಿನಲ್ಲಿ ಕೈಗೊಂಡಿರುವ ನಿರ್ಧಾರ ಸಾರ್ವಜನಿಕ ವಲಯದ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್. ವಿರುದ್ಧ ಯಾವುದೇ ನಾಚಿಕೆಯಿಲ್ಲದೆ ತಾರತಮ್ಯ ಮಾಡುತ್ತಿದೆ, 1.31ಲಕ್ಷ ಕೋಟಿ ರೂ.ಗಳ ಆದಾಯ ಖಾಸಗಿ ದೂರಸಂಪರ್ಕ ಕಂಪನಿಗಳ ಪಾಲಾಗುವಂತೆ ಮಾಡುತ್ತಿದೆ, ಇದು ಅತ್ಯಂತ ಖಂಡನಾರ್ಹ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಹೇಳಿದೆ.
ಕೇಂದ್ರ ಸಂಪುಟ, ಖಾಸಗಿ ಕಂಪನಿಗಳು ತೆರಬೇಕಾಗಿದ್ದ 1.31ಲಕ್ಷ ಕೊಟಿ ರೂ.ಗಳನ್ನು ಪಾವತಿ ಮಾಡುವುದನ್ನು ನಾಲ್ಕು ವರ್ಷ ಮುಂದೂಡುವುದಕ್ಕೆ ಅವಕಾಶ ಕೊಡಲು ನಿರ್ಧರಿಸಿದೆ. ಇದು ಅಂತಿಮವಾಗಿ ಜನಗಳಿಗೆ ಸೇರಿದ ಹಣ. ಸುಪ್ರಿಂ ಕೋರ್ಟ್ ಇದು ಈ ಖಾಸಗಿ ಕಂಪನಿಗಳು ತೆರಬೇಕಾದ ಹಣ ಎಂಬುದನ್ನು ಎತ್ತಿಹಿಡಿದಿದ್ದು, ಅದನ್ನೂ ಉಪೇಕ್ಷಿಸಿ ಈ ನಿರ್ಣಯವನ್ನು ಸರಕಾರ ಕೈಗೊಂಡಿದೆ.
ಇದಲ್ಲದೆ, ನಾಲ್ಕು ವರ್ಷಗಳ ನಂತರವೂ ಈ ಬಾಕಿಯನ್ನು ತೆರಲಾಗದಿದ್ದರೆ, ಅವನ್ನೆಲ್ಲ ಇಕ್ವಿಟಿಯಾಗಿ ಪರಿವರ್ತಿಸಲಾಗುವುದು ಎಂದೂ ಕೇಂದ್ರ ಸರಕಾರ ಹೇಳಿದೆ.
ಒಂದೆಡೆಯಲ್ಲಿ ಖಾಸಗಿ ಕಂಪನಿಗಳಿಗೆ ಈ ಭಾರೀ ಬಕ್ಷೀಸನ್ನು ಕೊಟ್ಟು ರಾಷ್ಟ್ರೀಯ ಬೊಕ್ಕಸಕ್ಕೆ ಭಾರೀ ನಷ್ಟುಂಟುಮಾಡುವಾಗಲೇ, ಬಿ.ಎಸ್.ಎನ್..ಎಲ್.ಗೆ ಸರಕಾರ ತೆರಬೇಕಾದ ರೂ. 39,000 ಕೋಟಿ ರೂ.ಗಳನ್ನು ಕೊಡದೆ ಅದು ತನ್ನ ಕಾರ್ಯನಿರ್ವಹಣಾ ದಕ್ಷತೆಯನ್ನು ಮತ್ತು ಸಂಪರ್ಕ ಜಾಲವನ್ನು ವಿಸ್ತರಿಸಲಾಗದಂತೆ ಅಡ್ಡಿಯುಂಟು ಮಾಡಿದೆ, ಈ ಮೂಲಕ ಕೂಡ ಖಾಸಗಿ ವಲಯದ ದೂರಸಂಪರ್ಕ ಕಂಪನಿಗಳಿಗೆ ಪ್ರಯೋಜನ ದಕ್ಕುವಂತೆ ಮಾಡಲಾಗುತ್ತಿದೆ ಎಂದು ಸಿಐಟಿಯು ಬಲವಾಗಿ ಟೀಕಿಸಿದೆ.
ಇಷ್ಟೇ ಅಲ್ಲ, ಭಾರೀ ದೊಡ್ಡ ಟೆಲಿಕಾಂ ವಲಯದ ಸುಧಾರಣೆ ಎಂದು ಹೇಳಲಾಗುವ ಇದರಲ್ಲಿ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್. ಗಳು 4ಜಿ ಸೇವೆಗಳೂ ಸೇರಿದಂತೆ ತಮ್ಮ ಸೇವೆಗಳನ್ನು ಉತ್ತಮಪಡಿಸಲು ಯಾವುದೇ ನೆರವನ್ನು ನೀಡಿಲ್ಲ. ಈಗಾಗಲೇ ಸರಕಾರ ಬಿ.ಎಸ್.ಎನ್.ಎಲ್. ತನ್ನ ಆಯ್ಕೆಯ ಮೂಲಗಳಿಂದ 4ಜಿ ಸಾಧನಗಳನ್ನು ಖರೀದಿಸದಂತೆ ಅಡ್ಡಗಾಲು ಹಾಕಿದೆ. ಕೇವಲ ದೇಶೀ ಮೂಲಗಳಿಂದಲೇ ಖರೀದಿಸಬೇಕು ಎಂದು ವಿಧಿಸಿರುವ ಸರಕಾರ ಖಾಸಗಿ ಕಂಪನಿಗಳು ಮಾತ್ರ ಜಾಗತಿಕ ಮಾರಾಟಗಾರರಿಂದ ಇಂತಹ ಸಾಧನಗಳನ್ನು ಖರೀದಿಸಲು ಮುಕ್ತ ಅವಕಾಶ ನೀಡಿದೆ. ಯಾವುದೇ ಭಾರತೀಯ ಕಂಪನಿಯ ಬಳಿ ಸಾಬೀತಾದ 4ಜಿ ತಂತ್ರಜ್ಞಾನವಿಲ್ಲ. ಈ ಮೂಲಕ ಸರಕಾರ ಉದ್ದೇಶಪೂರ್ವಕವಾಗಿಯೆ ಬಿ.ಎಸ್.ಎನ್.ಎಲ್. 4ಜಿ ಸೇವೆಗಳನ್ನು ಆರಂಭಿಸುವಲ್ಲಿ ಅಡ್ಡಿ-ಆತಂಕಗಳನ್ನೊಡ್ಡಿದೆ. ಇದಲ್ಲದೆ, 100% ಎಫ್‍ಡಿಐಗೆ ಅವಕಾಶ ಕೊಟ್ಟು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಟೆಲಿಕಾಂ ವಲಯವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಲು ಬಿಟ್ಟಿದೆ. ಇದು ರಾಷ್ಟ್ರೀಯ ಭದ್ರತೆಯ ಮೇಲೂ ದುಷ್ಪರಿಣಾಮ ಬೀರುವಂತದ್ದು ಎಂದು ಸಿಐಟಿಯು ಟೀಕಿಸಿದೆ.
ಟೆಲಿಕಾಂ ವಲಯದಲ್ಲಿ ಇಂತಹ ನಾಚಿಕೆಗೆಟ್ಟ ತಾರತಮ್ಯಪೂರ್ಣ ಧೋರಣೆ ಈ ರಾಷ್ಟ್ರೀಯ ಆಸ್ತಿಗಳ, ಅದರಲ್ಲೂ ಮೂಲರಚನಾ ಆಸ್ತಿಗಳ ಸಂಪೂರ್ಣ ಖಾಸಗೀಕರಣದ ಮತ್ತು ಸಾರ್ವಜನಿಕ ಖಜಾನೆಯಿಂದ ದೇಶಿ-ವಿದೇಶಿ ಖಾಸಗಿ ಕಾರ್ಪರೇಟ್‍ಗಳಿಗೆ ಹಣ ಹರಿದುಹೋಗಲು ಬಿಡುವ ಈ ಕೆಂದ್ರ ಸರಕಾರದ ಭವ್ಯ ಯೋಜನೆಯ ಅಭಿನ್ನ ಅಂಗ ಎಂದು ಬಲವಾಗಿ ಟೀಕಿಸಿರುವ ಸಿಐಟಿಯು ಸರಕಾರದ ಇಂತಹ ಸಾರ್ವಜನಿಕ ವಲಯ-ವಿರೋಧಿ ಮತ್ತು ರಾಷ್ಟ್ರ-ವಿರೋಧಿ ಹುನ್ನಾರಗಳನ್ನು ವಿರೋಧಿಸಬೇಕು ಎಂದು ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ.