ಖಾಸಗಿ ಬಸ್ ದರ ಏರಿಕೆ ಹಿನ್ನಲೆ: ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಡಿವೈಎಫ್‌ಐ ಆಗ್ರಹ

ಬೆಂಗಳೂರು :  ಲಾಕ್‌ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಚಾರ ಆರಂಭಿಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗೀ ಬಸ್ಸುಗಳ ಮಾಲಕರ ಒಕ್ಕೂಟಗಳು ಶೇಕಡಾ 25% ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಏರಿಕೆ ಮಾಡಿರುವುದನ್ನು ಮತ್ತು ದರ ಏರಿಕೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯದೆ ಒಪ್ಪಿಗೆ ನೀಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವಿರೋಧಿಸಿದೆ.

ಕೋವಿಡ್‌ ನಿರ್ಬಂಧ , ಸತತ ಲಾಕ್‌ಡೌನ್‌ ಗಳಿಂದ ಖಾಸಗೀ ಬಸ್ಸು ಮಾಲಕರು ಮಾತ್ರವಲ್ಲದೇ ಜನಸಾಮಾನ್ಯರೂ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ಅದರಲ್ಲೂ ಖಾಸಗೀ ಬಸ್ಸುಗಳನ್ನು ಪ್ರಯಾಣಕ್ಕಾಗಿ ಬಳಸುವವರು ಬಹುತೇಕ ಬಡ ವಿಭಾಗಕ್ಕೆ ಸೇರಿದ ಕೂಲಿಕಾರರು, ಸಣ್ಣಪುಟ್ಟ ಅಂಗಡಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವವರು. ಈ ರೀತಿ ತೀರಾ ಕಡಿಮೆ ಸಂಬಳ ಪಡೆಯುವ ಬಡವರ್ಗಕ್ಕೆ ಶೇಕಡಾ 20 ರಷ್ಟು ಬಸ್ಸು ದರ ಏರಿಕೆಯು ದೊಡ್ಡದಾಗಿ ಬಾಧಿಸಲಿದೆ ಎಂದು ಸಂಘಟನೆಯು ಆರೋಪಿಸಿದೆ.

ಖಾಸಗೀ ಬಸ್ಸು ಮಾಲಕರು ಕೊರೊನಾ ಲಾಕ್‌ಡೌನ್ ನಿರ್ಬಂಧ ಶೇಕಡಾ 50 ಪ್ರಯಾಣಿಕರಿಗೆ ಮಾತ್ರ ಅವಕಾಶಗಳಂತಹ ಹಾಗೂ ಸರಕಾರದ ಇತರೆ ನಿಯಮಗಳನ್ನು ಮತ್ತು ಡೀಸಲ್ ದರ ಏರಿಕೆಯನ್ನು ಮುಂದಿಟ್ಟುಕೊಂಡು ಅಥವಾ ಇನ್ನಿತರ ಯಾವುದೇ ಕಾರಣಗಳಿಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ನಡೆಸದೆ, ಸಾರ್ವಜನಿಕರ ಅಹವಾಲು ಪಡೆಯದೆ ಪ್ರಯಾಣ ದರ ಏರಿಕೆಗೆ ನಿಯಮಗಳು ಅನುಮತಿ ನೀಡುವುದಿಲ್ಲ. ಸಾರಿಗೆ ಪ್ರಾಧಿಕಾರದ ಸಭೆ ನಡೆಸಿ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ ಬಸ್ಸು ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಾದ ಕ್ರಮ ಅಲ್ಲ ಎಂದು ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್‌ ಅವರು ತಿಳಿಸಿದರು.

ಡಿವೈಎಫ್‌ಐ ಸಂಘದ ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಅವರು ʻʻಜಿಲ್ಲಾಧಿಕಾರಿಗಳು ಸಭೆ ನಡೆಸದೆ ಖಾಸಗೀ ಬಸ್ಸು ಪ್ರಯಾಣ ದರ ಏರಿಕೆಗೆ ಒಪ್ಪಿಗೆ ನೀಡಿರುವುದು ಖಾಸಗೀ ಬಸ್ಸು ಪ್ರಯಾಣಕ್ಕೆ ಸಂಬಂಧಪಟ್ಟು ರಾಜ್ಯ ಸರಕಾರ ರೂಪಿಸಿರುವ  ನಿಯಮಗಳ ಉಲ್ಲಂಘನೆ. ಕೋವಿಡ್ ಕಾರಣಕ್ಕೆ ಏರಿಕೆ ಮಾಡಿದ ದರಗಳ ಕಾಲಮಿತಿ ಮತ್ತು ಅವುಗಳ ಕಾನೂನುಬದ್ದ ವ್ಯವಸ್ಥೆಗಳ ಕುರಿತು ಚರ್ಚಿಸಲು ತಕ್ಷಣವೇ ಜಿಲ್ಲಾಡಳಿತ ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕು. ಸಾರ್ವಜನಿಕರ ಅಭಿಪ್ರಾಯ, ನಿಯಮಗಳ ಆಧಾರದಲ್ಲಿ ಬಸ್ಸು ಮಾಲಕರ ಸಮಸ್ಯೆ ಹಾಗೂ ದರ ಏರಿಕೆಗೆ ಸಂಬಂಧಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಹೇಳಿದರು ಎಂದು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *