ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳ ಶೇಕಡಾ ಐವತ್ತು ಬೆಡ್ ಗಳಲ್ಲಿ ಉಚಿತ ಚಿಕಿತ್ಸೆಗೆ ಆದೇಶವನ್ನು ತಕ್ಷಣವೇ ಜಾರಿಗೊಳಿಸಲು, ಆಯುಷ್ಮಾನ್ ಅಡಿ ಐಸಿಯು, ವೆಂಟಿಲೇಟರ್ ಬೆಡ್ ಗಳಲ್ಲಿ ಉಚಿತ ಚಿಕಿತ್ಸೆ ನೀಡಲು ನಿರಾಕರಿಸುವ, ಸರಕಾರ ನಿಗದಿ ಪಡಿಸಿದ ದರವನ್ನು ಮೀರಿ ಕೊರೊನಾ ರೋಗಿಗಳಿಗೆ ದುಬಾರಿ ಬಿಲ್ ವಿಧಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕೆಪಿಎಮ್ಇ ಕಾಯ್ದೆ ಅಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಆಗ್ರಹಿಸಿ ಡಿವೈಎಫ್ಐ ಜಿಲ್ಲಾ ಸಮಿತಿ ಕರೆ ನೀಡಿದ್ದ ಮನೆ ಮನೆ ಪ್ರತಿಭಟನೆ ನಡೆದಿದೆ.
ಇದನ್ನು ಓದಿ: ಕೋವಿಡ್ ನಿಭಾವಣೆಯಲ್ಲಿ ವಿಫಲರಾದ ಸರಕಾರದ ವಿರುದ್ಧ ಆಕ್ರೋಶಗೊಂಡ ರೈತ-ಕಾರ್ಮಿಕರು
ಸರಕಾರಿ ಕೋಟಾದಡಿ ಮೀಸಲಿಟ್ಟು ಉಚಿತ ಚಿಕಿತ್ಸೆ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಆದೇಶ ಇಷ್ಟರವರಗೆ ಜಾರಿಗೆ ಬಂದಿಲ್ಲ. ಕೇವಲ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರವೇ ನಿಗದಿಪಡಿಸಿದ ದುಬಾರಿ ದರ ಪಟ್ಟಿಯಡಿ ಚಿಕಿತ್ಸೆ ಪಡೆಯುವ ಅನಿವಾರ್ಯ ಸ್ಥಿತಿಗೆ ಜನಸಾಮಾನ್ಯ ಕೊರೊನಾ ಸೋಂಕಿತರನ್ನು ದೂಡಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ಬೆಡ್ ಗಳಲ್ಲಿ ಎಪಿಎಲ್, ಬಿಪಿಎಲ್ ತಾರತಮ್ಯವಿಲ್ಲದೆ ಆಯುಷ್ಮಾನ್ ಅಡಿ ಉಚಿತ ಚಿಕಿತ್ಸೆಯ ಆದೇಶ ಜಾರಿಯಾಗಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ಸುಳ್ಳು ಆಂಕಿ ಅಂಶಗಳನ್ನು ಬಳಸಿಕೊಂಡು ಆಯುಷ್ಮಾನ್ ಅಡಿ ಚಿಕಿತ್ಸೆ ನಿರಾಕರಿಸುತ್ತಿವೆ. ಇದಲ್ಲದೆ ಖಾಸಗಿ ಕೋಟಾದ ರೋಗಿಗಳಿಗೆ, ಆಯುಷ್ಮಾನ್ ಯೋಜನೆಯ ರೋಗಿಗಳಿಗೆ ಸರಕಾರ ನಿಗದಿ ಪಡಿಸಿದ ದರ ಮಾತ್ರವಲ್ಲದೆ ನಿಯಮ ಬಾಹಿರವಾಗಿ ಲಕ್ಷಾಂತರ ರೂಪಾಯಿ ಅಕ್ರಮ ಬಿಲ್ ವಿಧಿಸುವ, ದುಬಾರಿ ಔಷಧಿಗಳನ್ನು ಖರೀದಿಸುವಂತೆ ಬಲವಂತ ಮಾಡುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಕೊರೊನಾ ಸೋಂಕಿತ ರೋಗಿಗಳು ತೀರಾ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ ಎಂದು ಡಿವೈಎಫ್ಐ ಸಂಘಟನೆಯು ಆರೋಪಿಸಿದೆ.
ಇದನ್ನು ಓದಿ: “ಬದುಕಿನ ಹಕ್ಕು” ಆದ್ಯತೆಯಾಗಬೇಕು
ಈ ಕುರಿತು ಹಲವು ದೂರುಗಳನ್ನು ನೀಡಿದ್ದರೂ ಖಾಸಗಿ ಆಸ್ಪತ್ರೆಗಳ ಪ್ರಬಲ ಲಾಬಿ ಯಾವುದೇ ಹಿಂಜರಿಗೆ ಇಲ್ಲದೆ ತನ್ನ ಚಾಳಿಯನ್ನು ಮುಂದುವರಿಸುತ್ತಿದೆ ಎಂದು ಡಿವೈಎಫ್ಐ ಸತತವಾಗಿ ಇದರ ವಿರುದ್ಧ ಧ್ವನಿ ಎತ್ತಿದೆ, ಆದರೆ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ತಿಳಿಸಿದರು.
ಈ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಐವತ್ತು ಶೇಕಡಾ ಬೆಡ್ ಗಳನ್ನು ಸರಕಾರಿ ಕೋಟಾದ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಆದೇಶ ಜಾರಿಗೊಳಿಸುವುದು, ಐಸಿಯು, ವೆಂಟಿಲೇಟರ್ ಬೆಡ್ ಗಳನ್ನು ಆಯುಷ್ಮಾನ್ ಅಡಿ ನೀಡಲು ನಿರಾಕರಿಸುವ, ಸರಕಾರ ನಿಗದಿ ಪಡಿಸಿದ ದರ ಮಾತ್ರವಲ್ಲದೆ, ನಿಯಮ ಬಾಹಿರವಾಗಿ ದುಬಾರಿ ಬಿಲ್ ವಿಧಿಸುವ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿ ಮನೆ ಮನೆ ಪ್ರತಿಭಟನೆಗೆ ನಡೆಸಿದರು.
ಡಿವೈಎಫ್ಐ ಸಂಘದ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯ ಮುಂದೆ ಭಿತ್ತಿ ಪತ್ರ ಹಿಡಿದು ನಿಂತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.