ನವದೆಹಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡ ಲೋಪ ಎದುರಾಗಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದಲೇ ಆಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು.
ಇಂದು ಸದನವನ್ನು ಉದ್ದೇಶಿಸಿ ರಾಜ್ಯಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ʻʻಪ್ರಧಾನಿ ಮೋದಿ ಜನರಲ್ಲಿ ಪಾತ್ರೆಗಳನ್ನು ಬಡಿಯಲು, ಮೇಣದಬತ್ತಿಗಳನ್ನು ಬೆಳಗಿಸುವಂತೆ ಮನವಿ ಮಾಡಿದರು. ಜನರು ವಿಶ್ವಾಸದಿಂದ ಎಲ್ಲವನ್ನೂ ಮಾಡಿದರು. ಆದರೆ ಅವರು ನೀಡಿದ ಆದ್ಯತೆಯ ಭರವಸೆಗಳನ್ನು ಈಡೇರಿಸಲಿಲ್ಲ. ಜನರಿಗೆ ನಿರಾಶೆ ಮಾಡಿದ್ದಾರೆ. ಅವರ ಮೇಲಿನ ಗಂಭೀರ ಆರೋಪವನ್ನು ಪರಿಗಣಿಸುವ ಬದಲು ಅವರು ಆರೋಗ್ಯ ಮಂತ್ರಿಯನ್ನು ಬಲಿಪಶು ಮಾಡಿದರು ಎಂದರು.
ಇದನ್ನು ಓದಿ: ಸರಕಾರದ ವೈಫಲ್ಯವನ್ನು ಬಿಚ್ಚಿಟ್ಟಿದೆಯಾ ಸಂಪುಟ ಸರ್ಜರಿ? ಭರ್ತಿಯಾಗಿದ್ದರೂ ಇಬ್ಬರ ಕೈಯಲ್ಲಿದೆ ಆಡಳಿತದ ಕೀಲಿ ಕೈ!!
ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಸರ್ ಮೂಲಕ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಸಾಲು ಸಾಲು ನಿಯಮಗಳನ್ನು ಸಾರ್ವಜನಿಕರಿಗಾಗಿ ಜಾರಿಗೊಳಿಸಿ, ಸರಕಾರ ಜನರಲ್ಲಿ ಮನವಿ ಮಾಡಿತು. ಆದರೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಯ ಸಮಯದಲ್ಲಿ ಅವರು ಏನು ಮಾಡುತ್ತಿದ್ದರು? ನೀವೇ ಹೊರಡಿಸಿದ ಕಠಿಣ ನಿಯಮಗಳನ್ನು ನೀವೇ ಉಲ್ಲಂಘನೆ ಮಾಡಿದ್ದರಿ. ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮಗೆ ಅದರ ಗೌರವ ಸಲ್ಲಬೇಕು. ಮುನ್ಸೂಚನೆ ನೀಡದೆ ಕೇಂದ್ರವು ರಾತ್ರಿಯಿಡೀ ಲಾಕ್‌ಡೌನ್ ವಿಧಿಸುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ಸಂದರ್ಭ ಸರ್ಕಾರವು ಜನರ ಬಗ್ಗೆ ಕಾಳಜಿ ವಹಿಸಿಲ್ಲ. ಆಮ್ಲಜನಕದ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇರುವ ಸಂದರ್ಭ ಸರಕಾರವು ಎಡವಿದೆ. ಇಡೀ ಸರಕಾರದ ಕಾರ್ಯನಿರ್ವಹಣೆಯೇ ಲೋಪಗೊಂಡಿರುವಾಗ ಹಿಂದಿನ ಆರೋಗ್ಯ ಮಂತ್ರಿ ರಾಜೀನಾಮೆ ಪಡೆದು ಲೋಪ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಈಗ ಕೊವಿಡ್-19 ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇವತ್ತು ಕೊವಿಡ್ ಬಗ್ಗೆ ಚರ್ಚೆಯಾಗುವುದಿಲ್ಲವೆಂದು ನಾವು ಅಂದುಕೊಂಡಿದ್ದೆವು. ಬೇರೆ ಬೇರೆ ವಿಷಯಗಳನ್ನು ಚರ್ಚೆ ಮಾಡುವುದಿತ್ತು. ನೀವು ಕೊವಿಡ್ ವಿಷಯವನ್ನು ಚರ್ಚೆಗೆ ತಂದಿದ್ದೀರಿ. ಎಲ್ಲರಿಗೂ ಈ ಬಗ್ಗೆ ಚರ್ಚೆ ನಡೆಯಬೇಕು ಎಂದಿತ್ತು. ಚರ್ಚೆಗೆ ಯಾವ ವಿಷಯ ಬರುತ್ತೋ ಅದರ ಲಾಭ ಸರ್ಕಾರಕ್ಕೂ ಸಿಗುತ್ತದೆ, ಜನರಿಗೂ ಸಮಧಾನವಾಗುತ್ತದೆ. ಹಾಗಾಗಿಯೇ ಇದು ಚರ್ಚೆ ಆಗಬೇಕೆಂದು ನಾವು ಒತ್ತಾಯಿಸಿದ್ದೆವು. ನೋಟಿಸ್ ಕೂಡಾ ನೀಡಿದ್ದೆವು. ಆದರೆ ಇವತ್ತು ನಾನು ಮಾತನಾಡಲು ನಿಂತಾಗ ನಾಲ್ಕೈದು ಸದಸ್ಯರು ನನ್ನ ಮುಂದೆ ಬಂದು ನಿಂತು ನನ್ನ ಹಕ್ಕನ್ನು ಕಸಿದಾಗ ನೀವು ಸುಮ್ಮನೆ ಕೂತರೆ ಅದು ನೋವಿನ ಸಂಗತಿ. ನಾನು ಅವಮಾನಕ್ಕೊಳಗಾದೆ. ಇದು ಸರಿಯಲ್ಲ. ನನಗೆ 50 ವರ್ಷದ ಅನುಭವವಿದೆ.
ಇದನ್ನು ಓದಿ: ಕೋವಿಡ್ 2 ನೇ ಅಲೆ : ಸೋಂಕು, ಸಾವಿನ ಸಂಖ್ಯೆ ಹೆಚ್ಚಳ, ಕಣ್ಮುಚ್ಚಿ ಕುಳಿತಿರುವ ಸರಕಾರ
ವೈದ್ಯರು ಮತ್ತು ಅರೆವೈದ್ಯರು ಸೇರಿದಂತೆ ಕೊವಿಡ್ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ಕೊವಿಡ್ -19 ರ ಎರಡನೇ ಅಲೆಯ ವೇಳೆ ದೆಹಲಿಯಲ್ಲಿ ‘ಆಕ್ಸಿಜನ್ ಲ್ಯಾಂಗರ್’ ನಡೆಸುವ ಮೂಲಕ ಇತರರಿಗೆ ಸಹಾಯ ಮಾಡಿದ ಜನರಿಗೆ ನಾನು ವಂದಿಸುತ್ತೇನೆ. ಬೆಂಬಲವಾಗಿ ಹೊರಬಂದ ಪ್ಲಾಸ್ಮಾ ದಾನಿಗಳಿಗೆ ನಾನು ವಂದಿಸುತ್ತೇನೆ. ಸರಕಾರವು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಇತ್ತೀಚಿಗಿನದ್ದು ಹೊರತು ಪಡಿಸಿದರೆ ನಾನು ಈವರೆಗೆ ಒಂದೇ ಒಂದು ಚುನಾವಣೆ ಸೋತಿಲ್ಲ. ಅಲ್ಲಿ ಯಾರ‍್ಯಾರು ಮಧ್ಯಪ್ರವೇಶಿಸಿದರು ಎಂಬುದು ಗೊತ್ತಿದೆ. ಅವರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಅದೇನೇ ಇರಲಿ, ನಾವು ಮಾತನಾಡಲು ಸಿದ್ಧವಾದಾಗ ತಾಳ್ಮೆಯಿಂದ ನಾವು ನಮ್ಮ ನಿಲುವು ವ್ಯಕ್ತಪಡಿಸುತ್ತೇವೆ. ಆದರೆ ಎರಡು ಮೂರು ವರ್ಷಗಳ ಹಿಂದೆ ಏನು ಸಮಸ್ಯೆ ಇತ್ತೋ ಅದನ್ನೇ ಅವರು ಹೇಳುತ್ತಾರೆ. ಅದನ್ನು ಸರಕಾರ ಸರಿಪಡಿಸಬೇಕಿತ್ತು ಎಂದು ಖರ್ಗೆ ಹೇಳಿದ್ದಾರೆ.