ಚಳಿಗಾಲದ ಅಧಿವೇಶನ: 12 ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳು ಪ್ರತಿಭಟನೆ

ನವದೆಹಲಿ: ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು 12 ರಾಜ್ಯಸಭಾ ಸಂಸದರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಲೋಕಸಭೆಯಲ್ಲಿ ಪಟ್ಟುಹಿಡಿದ ವಿರೋಧ ಪಕ್ಷಗಳು ಸದನವನ್ನು ಬಹಿಷ್ಕರಿಸಿ, ಹೊರನಡೆದರು. ಈ ಕಾರಣದಿಂದಾಗಿ ಮಧ್ಯಾಹ್ನ 2 ಗಂಟೆಯವರೆಗೆ ಸದನವನ್ನು ಮುಂದೂಡಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರನಡೆದ ಸಂಸದರು ಸಂಸತ್​ ಭವನದ ಹೊರಗಿರುವ ಗಾಂಧಿ ಭವನದ ಎದುರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇದನ್ನು ಓದಿ: ಸಂಸತ್‌ ಅಧಿವೇಶನದಲ್ಲಿ ತೀವ್ರ ಗದ್ದಲ: 12 ರಾಜ್ಯಸಭೆ ಸದಸ್ಯರು ಅಮಾನತು

ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಅಮಾನತುಗೊಳಿಸುವ ಆದೇಶದ ಬಗ್ಗೆ ರಾಜ್ಯಸಭೆಯ 12 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿರುವ ಕ್ರಮವನ್ನು ಹಿಂತೆಗೆದುಕೊಳ್ಳುವುದಿಲ್ಲ ಸಮರ್ಥಿಸಿಕೊಂಡರು. ಆದೇಶ ಹಿಂಪಡೆಯಬೇಕೆಂಬ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯಸಭಾ ಅಧ್ಯಕ್ಷರು ಮತ್ತು ಉಪರಾಷ್ಟ್ರಪತಿಯೂ ಆದ ವೆಂಕಯ್ಯ ನಾಯ್ಡು ಅವರಲ್ಲಿ ಸಂಸದರ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದರು.

ಪ್ರತಿಪಕ್ಷಗಳ 16 ಮಂದಿ ಸದಸ್ಯರು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ, ಅಮಾನತುಗೊಂಡಿರುವ 12 ಸದಸ್ಯರ ಮೇಲಿನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಯ್ಯ ನಾಯ್ಡು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ನಾನು ಪರಿಗಣಿಸುತ್ತಿಲ್ಲ. ಅಮಾನತು ಹಿಂಪಡೆಯುವುದಿಲ್ಲ ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಸದನದಿಂದ ಹೊರನಡೆದು ಪ್ರತಿಭಟನೆ ವ್ಯಕ್ತಪಡಿಸಿದರು.

ಇದನ್ನು ಓದಿ: ಲೋಕಸಭೆಯಲ್ಲಿ ವಿವಾದಿತ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ರ ಅಂಗೀಕಾರ

ವೆಂಕಯ್ಯ ನಾಯ್ಡು ಅವರು ಕಳೆದ ಮುಂಗಾರು ಅಧಿವೇಶನದಲ್ಲಿ ನಡೆದ ಕಹಿ ಘಟನೆ ಇನ್ನೂ ನಮ್ಮಲ್ಲಿ ಹೆಚ್ಚಿನವರನ್ನು ಕಾಡುತ್ತಲೇ ಇದೆ. ಸದನದ ಕೆಲವು ಹಿರಿಯರು ಘಟನೆಯ ವಿರುದ್ಧವಾಗಿ ತಮ್ಮ ಆಕ್ರೋಶ ಹೊರಹಾಕುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಇಂತಹ ಪ್ರತಿಕ್ರಿಯೆಗಳು ವಿಷಯವನ್ನು ಸೂಕ್ತವಾಗಿ ನಿಭಾಯಿಸಲು ನನಗೆ ಸಹಾಯ ಮಾಡುತ್ತಿತ್ತು ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಳಿಗಾಲದ ಅಧಿವೇಶನದ ಮೊದಲ ದಿನ ಕೃಷಿ ಕ್ಷೇತ್ರದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಗೆ ಸಂಸತ್ತು ಆತುರದಲ್ಲಿ ಧ್ವನಿಮತದ ಒಪ್ಪಿಗೆ ನೀಡಿದೆ. ಚರ್ಚೆ ನಡೆಸದೆ ಕೇವಲ 4 ನಿಮಿಷದಲ್ಲಿ ಹಿಂತೆಗೆದುಕೊಂಡ ಬಗ್ಗೆ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *