ಸಂಘಟನೆ ಬಲಿಷ್ಟವಾಗಿದ್ದರೆ, ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡರೆ ಮಾತ್ರ ಚುಣಾವಣೆ ಗೆಲ್ಲಲು ಸಾಧ್ಯ: ಖರ್ಗೆ

ನವದೆಹಲಿ: ಪಕ್ಷ ಮತ್ತು ದೇಶದ ಕಡೆಗಿನ ನಮ್ಮ ಜವಾಬ್ದಾರಿಯ ದೊಡ್ಡ ಭಾಗವೆಂದರೆ ಉನ್ನತ ಮಟ್ಟದಿಂದ ಕೆಳಮಟ್ಟದವರೆಗೂ ಸಾಂಸ್ಥಿಕ ಹೊಣೆಗಾರಿಕೆಯಾಗಿದೆ. ಕಾಂಗ್ರೆಸ್‌ ಪಕ್ಷದ ಸಂಘಟನೆ ಬಲಿಷ್ಟವಾಗಿದ್ದರೆ, ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಂಡಲ್ಲಿ ಮಾತ್ರ ನಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ದೇಶ ಸೇವೆ ಮಾಡಲು ಸಾಧ್ಯʼ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್‌ ಪಕ್ಷ ಮುನ್ನಡೆಸುವ ಸಮಿತಿ ಸದಸ್ಯರ ಮೊದಲ ಸಭೆ ಇಂದು ನಡೆದಿದೆ. ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಆರಂಭಿಕ ಭಾಷಣದಲ್ಲಿ, ಮುಂದಿನ 30 ರಿಂದ 90 ದಿನಗಳಲ್ಲಿ ಜನರ ಸಮಸ್ಯೆಗಳ ಕುರಿತು ಚಳವಳಿಯ ಮಾರ್ಗಸೂಚಿಯನ್ನು ಸಲ್ಲಿಸುವಂತೆ ರಾಜ್ಯ ಉಸ್ತುವಾರಿಗಳಿಗೆ ತಿಳಿಸಿದ್ದಾರೆ. ಪಕ್ಷದಲ್ಲಿ ಅತ್ಯಂತ ಜವಾಬ್ದಾರಿಯುತ ವ್ಯಕ್ತಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ, ಕೆಲವರು ಕಡಿಮೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಸ್ವೀಕಾರಾರ್ಹವೂ ಅಲ್ಲ ಎಂದರು.

ಮೇಲ್ಮಟ್ಟದಿಂದ ಕೆಳಮಟ್ಟದವರೆಗೂ ಪಕ್ಷದ ಸಾಂಸ್ಥಿಕ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗದವರು ತಮ್ಮ ಸಹೋದ್ಯೋಗಿಗಳಿಗೆ ದಾರಿ ಮಾಡಿಕೊಡಬೇಕಾಗುತ್ತದೆ ಎಂದಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಇತಿಹಾಸ ಬರೆಯುತ್ತಿದೆ ಎಂದು ಶ್ಲಾಘಿಸಿರುವ ಮಲ್ಲಿಕಾರ್ಜುನ ಖರ್ಗೆ ಯಾತ್ರೆಯು ಇದೀಗ ಆಂದೋಲನದ ರೂಪವನ್ನು ಪಡೆದುಕೊಂಡಿದೆ ಎಂದರು.

ಬಿಜೆಪಿ ಪಕ್ಷದ ನಡೆಯನ್ನು ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನನ್ನ ಹೇಳಿಕೆಯನ್ನು ಬಿಜೆಪಿ ಗುಜರಾತ್‌ ಚುನಾವಣಾ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಕೀಯ ಎಂದರೆ ವ್ಯಕ್ತಿಗಳಲ್ಲ, ನೀತಿಗಳು. “ದ್ವೇಷದ ಬೀಜಗಳನ್ನು” ಬಿತ್ತುವ ಮತ್ತು “ವಿಭಜನೆಯ ಫಲವನ್ನು ಕೊಯ್ಯುವ” ಆಡಳಿತ ಶಕ್ತಿಗಳ ವಿರುದ್ಧ ಹೋರಾಡುವುದು ಪಕ್ಷದ ಸದಸ್ಯರ ಕರ್ತವ್ಯ ಎಂದು ಹೇಳಿದ್ದಾರೆ.

ಸಭೆಯಲ್ಲಿ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲಾ, ನಾಯಕರಾದ ಪಿ ಚಿದಂಬರಂ, ಆನಂದ್ ಶರ್ಮಾ, ಮೀರಾ ಕುಮಾರ್ ಮತ್ತು ಅಂಬಿಕಾ ಸೋನಿ ಸಭೆಯಲ್ಲಿ ಭಾಗವಹಿಸಿದ್ದರು.

ಎಐಸಿಸಿ ಅಧ್ಯಕ್ಷರಾಗಿ ಅಕ್ಟೋಬರ್‌ನಲ್ಲಿ ಖರ್ಗೆ ಅಧಿಕಾರ ವಹಿಸಿಕೊಂಡ ನಂತರ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಬದಲಿಗೆ ಸ್ಟೀರಿಂಗ್ ಸಮಿತಿಯನ್ನು ರಚಿಸಿದರು. 47 ಸದಸ್ಯರ ಪಕ್ಷವನ್ನು ಮುನ್ನಡೆಸುವ ಸಮಿತಿ ಇದಾಗಿದ್ದು, ಸಿಡಬ್ಲ್ಯೂಸಿಯ ಹೆಚ್ಚಿನ ಸದಸ್ಯರು ಈ ಸಮಿತಿಯಲ್ಲಿದ್ದಾರೆ.

ಕೆಲವೇ ದಿನಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ದೆಹಲಿಯಲ್ಲಿ ಪಾಲಿಕೆ ಚುನಾವಣೆಗಳು ನಡೆಯುತ್ತಿದ್ದು ಮತ್ತು ಗುಜರಾತ್ ರಾಜ್ಯ ವಿಧಾನಸಭೆಯ ಎರಡನೇ ಹಂತದ ಮತದಾನ ಸೋಮವಾರ ನಡೆಸುತ್ತಿರುವ ಹೊತ್ತಲ್ಲೇ ಈ ಸಭೆ ನಡೆಯುತ್ತಿದೆ.

Donate Janashakthi Media

Leave a Reply

Your email address will not be published. Required fields are marked *