ಬೆಂಗಳೂರು ಜ,13: ಖಾಲಿ ಇರುವ 7 ಸಚಿವ ಸ್ಥಾನಕ್ಕೆ ಬರೋಬ್ಬರಿ 25 ಜನ ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆ ಈ ಎಲ್ಲ ಬೆಳವಣಿಗೆಗಳನ್ನು ಹುಟ್ಟು ಹಾಕಿದೆ. ಕೆಲವರಿಗೆ ಕೋಕ್ ಭಾಗ್ಯವೂ ಸಿಗಲಿದೆ ಎಂಬ ಚರ್ಚೆಗಳಿವೆ.
ಮಕರ ಸಂಕ್ರಾಂತಿಯ ಮುನ್ನಾದಿನವಾದ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, 8 ಶಾಸಕರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮಧ್ಯಾಹ್ನ 3.50 ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಯಾರ್ಯಾರು ಮಂತ್ರಿಗಳಾಗಲಿದ್ದಾರೆ ಎಂಬುದರ ಗುಟ್ಟನ್ನು ಇನ್ನೂ ಪಕ್ಷದ ವರಿಷ್ಠರು ಬಿಟ್ಟು ಕೊಟ್ಟಿಲ್ಲವಾದರೂ ನಂಬಲರ್ಹ ಮೂಲಗಳ ಪ್ರಕಾರ, ಏಳು ಜನ ಹೊಸಬರು ಸಂಪುಟ ಸೇರಲಿದ್ದು, ಒಬ್ಬ ಹಾಲಿ ಸಚಿವರನ್ನು ಕೈಬಿಟ್ಟು ಒಬ್ಬ ಹೊಸಬರನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಯಾರನ್ನು ಕೈಬಿಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಎಸ್. ಅಂಗಾರ, ಮುನಿರತ್ನ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ, ಪೂರ್ಣಿಮಾ ಶ್ರೀನಿವಾಸ ಹೊಸದಾಗಿ ಮಂತ್ರಿಗಳಾಗುವ ಸಾಧ್ಯತೆ ಇದೆ. ಹಾಲಿ ಸಚಿವರಾಗಿರುವವರ ಪೈಕಿ ಯಾರನ್ನು ಕೈಬಿಡುತ್ತಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಎಚ್. ನಾಗೇಶ್ ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಿಜಿಪಿ ಮೂಲಗಳು ತಿಳಿಸಿವೆ ಇದನ್ನು ಪುಷ್ಠಿಕರಿಸುವಂತೆ ಅಬಕಾರಿ ಸಚಿವ ಎಚ್. ನಾಗೇಶ್ ಕೈ ಬಿಡುವ ಸೂಚನೆ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಸಿಎಂ ಗೃಹ ಕಚೇರಿ ಎದರು ಪ್ರತಿಭಟನೆ ನಡೆಸಿದ್ದಾರೆ.
ಯಲಬುರ್ಗಾದ ಹಾಲಪ್ಪ ಆಚಾರ್, ಗಂಗಾವತಿಯ ಪರಣ್ಣ ಮನವಳ್ಳಿ, ರೂಪಾಲಿ ನಾಯ್ಕ್, ಬಿಎಸ್ಪಿ ಶಾಸಕ ಎನ್ ಮಹೇಶ್, ರಾಜೂಗೌಡ, ಸೇರಿದಂತೆ ಬರೋಬ್ಬರಿ 25 ಜನರ ಪಟ್ಟಿಯೇ ಇದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್ 3:30 ಕ್ಕೆ ಅಂತಿಮ ಸಚಿವರ ಪಟ್ಟಿಯನ್ನು ರವಾನೆ ಮಾಡಲಿದ್ದು, ಅದನ್ನು ಸಿಎಂ ಯಡಿಯೂರಪ್ಪ ರಾಜ್ಯಪಾಲರಿಗೆ ನೀಡಲಿದ್ದಾರೆ.