ಬೆಳಗಾವಿ : ಕೋಲಾರ ಚಿನ್ನದ ಗಣಿ(ಕೆಜಿಎಫ್) ಬಿಇಎಂಎಲ್ ಸಂಸ್ಥೆ ವ್ಯಾಪ್ತಿಯಲ್ಲಿನ ಬಳಕೆಯಾಗ 967 ಎಕರೆ ಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು, ವಿಧಾನ ಪರಿಷತ್ತಿನ ಕಲಾಪದಲ್ಲಿ ಪರಿಷತ್ ಸದಸ್ಯ ಗೋವಿಂದರಾಜು ಪರವಾಗಿ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮುರುಗೇಶ್ ನಿರಾಣಿ, ಕೋಲಾರ ಚಿನ್ನದ ಗಣಿ(ಕೆಜಿಎಫ್) 13 ಸಾವಿರ ಎಕರೆ ಜಮೀನಿನ ವ್ಯಾಪ್ತಿಯನ್ನು ಚಿನ್ನದ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಈಗ ಗಣಿಗಾರಿಕೆ ನಿಲ್ಲಿಸಲಾಗಿದೆ. ಹೆಚ್ಚುವರಿಯಾಗಿ ಉಳಿದಿರುವ ಭೂಮಿಯನ್ನು ವಾಪಾಸ್ಸು ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಜೊತೆ ಸಂವಹನ ನಡೆಸಲಾಗಿತ್ತು. ಆರಂಭದಲ್ಲಿ 3500 ಎಕರೆಯನ್ನು ಮರಳಿಕೊಡುತ್ತೇವೆ ಎಂದು ಕೇಂದ್ರ ತಿಳಿಸಿತ್ತು. ರಾಜ್ಯ ಸರ್ಕಾರ ಸರ್ವೇ ನಡೆಸಿದಾಗ ಬಹಳಷ್ಟು ಭೂಮಿ ಒತ್ತುವರಿಯಾಗಿರುವುದು ಕಂಡುಬಂದಿದೆ ಎಂದು ಉತ್ತರಿಸಿದ್ದಾರೆ.
ಇದನ್ನು ಓದಿ: KGF; ಇದು ಸಿನಿಮಾ ಕಥೆಯಲ್ಲ ಹುತಾತ್ಮರಾದ ವೀರಗಾಥೆ
ಕೆಜಿಎಫ್ ನಲ್ಲಿ ಬಿಇಎಂಎಲ್ ಕಾರ್ಖಾನೆ ಸ್ಥಾಪಿಸಲು ರಾಜ್ಯ ಸರ್ಕಾರ ಸುಮಾರು 1870.30 ಎಕರೆ ಜಮೀನು ಉದ್ದೇಶಿತ ಸಂಸ್ಥೆಗೆ ಜಮೀನು ಉಪಯೋಗಿಸಿಕೊಂಡು ಬಾಕಿ ಉಳಿದಿರುವ 971.33 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜುರಾತಿ ಅನ್ವಯ ಎಲ್ಲಾ ಋಣ ಭಾರದಿಂದ ಮುಕ್ತಗೊಳಿಸಿ ಕಂದಾಯ ಇಲಾಖೆಗೆ ವಶಪಡಿಸಿಕೊಳ್ಳಲು ಕೋಲಾರ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಈಗಾಗಲೇ ಕೆಲವರು ಅಲ್ಲಿ ಮನೆಗಳನ್ನು ನಿರ್ಮಿಸಿರುವುದನ್ನು ಜಿಲ್ಲಾಧಿಕಾರಿ ಗುರುತಿಸಿದ್ದಾರೆ. ಸರ್ವೇ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದಾಗ ಅಲ್ಲಿನ ಸಮಿತಿ ಚರ್ಚೆ ನಡೆಸಿ, ಕೇವಲ 3500 ಎಕರೆಯನ್ನಷ್ಟೇ ಅಲ್ಲ ಪೂರ್ತಿಭೂಮಿಯನ್ನು ವಾಪಾಸ್ ನೀಡುತ್ತೇವೆ. ಸಾಲದ ಹೊಣೆಗಾರಿಕೆಯೊಂದಿಗೆ ಭೂಮಿಯನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಭೂಮಿಯ ಮೌಲ್ಯಕ್ಕಿಂತ ಸಾಲವೇ ಹೆಚ್ಚಿದೆ. ಅದಕ್ಕಾಗಿ ಒಮ್ಮೆಲೇ ಎಲ್ಲಾ ಭೂಮಿ ಬೇಡ. ಮೊದಲ ಹಂತದಲ್ಲಿ 3500 ಎಕರೆ ಮಾತ್ರ ನೀಡಿ. ನಂತರ ಎರಡನೇ ಹಂತದಲ್ಲಿ ಉಳಿದ ಭೂಮಿ ಪಡೆದುಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇಂದ್ರದೊಂದಿಗೆ ಸಂವಹನದ ನಂತರ ಪ್ರತಿಕ್ರಿಯೆ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.