- ಮಹಿಳೆಯ ಕುಟುಂಬದವರಿಂದ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ: ದೂರು
ಅಲಹಾಬಾದ್: ಕೇವಲ ವಿವಾಹದ ಉದ್ದೇಶದಿಂದ ಆದ ಮತಾಂತರವು ಮಾನ್ಯವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಪ್ರಕರಣವೊಂದರಲ್ಲಿ ಹೇಳಿದೆ.
ಹೊಸದಾಗಿ ಮದುವೆಯಾದ ದಂಪತಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ಈ ಹೇಳಿಕೆ ನೀಡಿದೆ. ತಮ್ಮ ವೈವಾಹಿಕ ಜೀವನಕ್ಕೆ ತೊಂದರೆ ನೀಡದಂತೆ ಪೊಲೀಸರಿಗೆ ಮತ್ತು ಮಹಿಳೆಯ ತಂದೆಗೆ ನಿರ್ದೇಶನ ನೀಡಲು ಕೋರಿ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕಳೆದ ತಿಂಗಳು ಪ್ರಿಯಾನ್ಶಿ ಅಲಿಯಾಸ್ ಸಮ್ರೀನ್ ಮತ್ತು ಆಕೆಯ ಪತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಮೂರ್ತಿ ಎಂ.ಸಿ. ತ್ರಿಪಾಠಿ ಈ ಆದೇಶವನ್ನು ನೀಡಿದ್ದಾರೆ.
ಅರ್ಜಿಯಲ್ಲಿ, ಈ ವರ್ಷ ಜುಲೈನಲ್ಲಿ ದಂಪತಿ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಮಹಿಳೆ ಕುಟುಂಬ ಸದಸ್ಯರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದ್ದರು.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಅರ್ಜಿದಾರರು ಜೂನ್ 29, 2020 ರಂದು ಮದುವೆಗೂ ಒಂದು ತಿಂಗಳು ಮೊದಲು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರು ಜುಲೈ 31, 2020 ರಂದು ತಮ್ಮ ಮದುವೆಯನ್ನು ದೃಢೀಕರಿಸಿರುವುದು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಯುತ್ತಿದೆ. ಈ ಮತಾಂತರವು ವಿವಾಹದ ಉದ್ದೇಶಕ್ಕಾಗಿ ಮಾತ್ರ ನಡೆದಿದೆ ಎಂದು ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ ತಿಳಿಸಿದೆ.
2014ರಲ್ಲಿ ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವ ನೂರ್ ಜಹಾನ್ ಬೇಗಂ ಅವರ ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಈ ಪ್ರಕರಣದಲ್ಲಿ ಹಿಂದೂ ಬಾಲಕಿ ಇಸ್ಲಾಂಗೆ ಮತಾಂತರಗೊಂಡ ನಂತರ ಮದುವೆಯಾದ ಕಾರಣ ವಿವಾಹಿತ ದಂಪತಿಗೆ ರಕ್ಷಣೆ ನೀಡುವಂತೆ ನೂರ್ ಜಹಾನ್ ಬೇಗಂ ನ್ಯಾಯಾಲಯವನ್ನು ಕೋರಿದ್ದರು. ಈ ಪ್ರಕರಣದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು.