ಕೇಸರೀಕರಣದ ಪಠ್ಯ ಪರಿಷ್ಕರಣೆ ವಿರುದ್ಧ ಬೃಹತ್ ಪ್ರತಿಭಟನಾ ಆಕ್ರೋಶ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಮಾಡುವ ಮೂಲಕ ಸಂಪೂರ್ಣ ಕೋಮುವಾದಿಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಇಂದು (ಜೂನ್ 18) ನಗರದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆದಿದೆ. ನಗರದ ಕೆಎಸ್ಆರ್ ರೈಲು ನಿಲ್ದಾಣದಿಂದ ಹೊರಟ ಬೃಹತ್‌ ಮೆರವಣಿಗೆಯು ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಮಾವಣೆಗೊಂಡಿತು.

ಪರಿಷ್ಕೃತ ಆಗಿರುವ ಪಠ್ಯಪುಸ್ತಕಗಳನ್ನು ರದ್ದುಮಾಡಬೇಕು. ರೋಹಿತ್ ಚಕ್ರತೀರ್ಥರನ್ನು ಬಂಧಿಸಬೇಕು ಹಾಗೂ ಸಚಿವ ಬಿಸಿ ನಾಗೇಶ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ, ಹಳೆಯ ಪಠ್ಯಪುಸ್ತಕಗಳನ್ನು ವಿತರಿಸಬೇಕೆಂದು ಆಗ್ರಹಿಸಲಾಯಿತು.

ಎಲ್ಲಾ ಸಮನ ಮನಸ್ಕರು ಸೇರಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಕುವೆಂಪು ಹೋರಾಟ ಸಮಿತಿ, ಸ್ವಾಮೀಜಿಗಳು, ಕನ್ನಡ ಪರ ಸಂಘಟ‌ನೆಗಳು, ವಿದ್ಯಾರ್ಥಿ ಸಂಘಟನೆಗಳು, ಸಾಹಿತಿ, ಚಿಂತಕರು, ಸಾರಿಗೆ ಒಕ್ಕೂಟ, ಸಿಐಟಿಯು ಸೇರಿದಂತೆ ಹಲವು ಸಂಘಟನೆಗಳು ಭಾಗಿಯಾಗಿವೆ.

ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿದ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಪರಿಷ್ಕರಣೆಯಾದ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬಾರದು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ನಂಜಾವದೂತ ಸ್ವಾಮೀಜಿಗಳು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಿಂದ ಬಂದ ಕುವೆಂಪು ಜ್ಯೋತಿ ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ವಿಶ್ವಮಾನವ ಭಾವುಟ ಬಿಡುಗಡೆ ಮಾಡಲಾಯಿತು. ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ, ನಂಜಾವದೂತ ಸ್ವಾಮೀಜಿ, ಜ್ಞಾನ ಪ್ರಕಾಶ್, ಡಿ.ಕೆ ಶಿವಕುಮಾರ್ ಅವರಿಂದ ನೂತನವಾಗಿರುವ ಜೈ ವಿಶ್ವಮಾನವ ಎಂದು ಬರೆದಿರುವ ನೂತನ ಭಾವುಟ ಬಿಡುಗಡೆ ಮಾಡಲಾಗಿದೆ.

ಹಿರಿಯ ವಕೀಲ ಸಿ‌ಎಚ್ ಹನುಮಂತರಾಯ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯ ಸಹಿಸಲು ಆಗುತ್ತಿಲ್ಲ. ಕೂಡಲೇ ಸಚಿವ ಬಿ ಸಿ‌ ನಾಗೇಶ್ ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಈ ಸಮಿತಿಯಲ್ಲಿ ಮೂಲಭೂತವಾಗಿ‌ ದೊಡ್ಡ ತಪ್ಪಾಗಿದೆ.  ಆದೇಶವೇ ಇಲ್ಲದೆ ಪರಿಷ್ಕೃತಗೊಂಡ ಪಠ್ಯ ಪುಸ್ತಕಗಳ ಪಾಡೇನು? ಡಾ. ಬಿಆರ್ ಅಂಬೇಡ್ಕರ್, ಬಸವಣ್ಷ ಅವರ ವಿಚಾರಗಳನ್ನು ತಿರುಚಿದರು. ಶಂಕರ ಎನ್ನುವ ಪದಕ್ಕೆ ಅನರ್ಥ ಬರುವಂತೆ ನಡೆದುಕೊಂಡರು. ಸಂತ ಶಿಶುನಾಳ ಶರೀಫರ ವಿಚಾರಗಳನ್ನು ಕಿತ್ತುಹಾಕಿದ್ದಾರೆ. ಬುದ್ಧನ ಪಾಠವನ್ನು ತೆಗೆದು ಹಾಕಿದರು. ನಿರುದ್ಯೋಗ ಸಮಸ್ಯೆ ಕೈಬಿಡಲಾಗಿದೆ. ಕೆಲವೊಂದು ಸಿದ್ಧಾಂತಗಳನ್ನು ಮುನ್ನಲೆಗೆ ತರಲು ಮುಂದಾದರು.  ಈ ಸಿದ್ಧಾಂತಗಳು ದೂರವಾಗಬೇಕು. ಬಸವಣ್ಣ ಅವರ ವಿಚಾರಕ್ಕೂ ಕೈ ಹಾಕಿದರು. ಸಾಹಿತ್ಯ, ನಾಡಗೀತೆಗೆ ಅಪಮಾನ‌ ಮಾಡಿದರು. ಮುಂದೆ ಹೇಗೆ ಹೆಜ್ಜೆ ಇಡಬೇಕು ಎಂದು ಗಮನಿಸಬೇಕಾಗಿದೆ. ಮುಖ್ಯಮಂತ್ರಿಗಳು ಸ್ವಲ್ಪ ಆಚೆ ಬಂದು‌ ನೋಡಬೇಕು ಎಂದು ಆಗ್ರಹಿಸಿದರು.

ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ನಾವೆಲ್ಲ ತಪ್ಪು ಮಾಡಿದ್ದೇವೆ. ಅವರಿಗೆ ರಾಗಿ, ಭತ್ತ, ಎಣ್ಣೆ, ಮೆಟ್ಟು ಹೊಲಿದು ಕೊಟ್ಟೇವೆ. ತುಪ್ಪ, ಗುಡಿ ಸೇರಿದಂತೆ ಎಲ್ಲವೂ ಮಾಡಿಕೊಡುತ್ತಿದ್ದೇವೆ. ನಾವು ಹೊರಗಡೆ ನಿಂತು, ನೀವು ಮಹನ್ ಪೂಜ್ಯರು ಎಂದು ತಲೆ ಮೇಲೆ ಕೂರಿಸಿಕೊಂಡಂತಾಗಿದೆ. ಅದಕ್ಕಾಗಿ ನಮ್ಮ ತಲೆ ಮೇಲೆ ಕಾಲಿಟ್ಟಿದ್ದಾರೆ ಎಂದರು.

ಕೆಲ ವರ್ಷಗಳ ಹಿಂದೆ, ಡಾಕ್ಟರ್ ರಾಜಕುಮಾರ ಅವರು ಕುವೆಂಪು ಬಗ್ಗೆ ಮಾತಾಡಿ ಎಂದರೇ‌ ಕುವೆಂಪು ಅವರ ಬಗ್ಗೆ ಮಾತಾಡುವಷ್ಟು ನಾನು ಬೆಳಿದಿಲ್ಲ ಎಂದಿದ್ದರು. ಈಗಿನವರು, ಕುವೆಂಪು ಅವರ ಬೂಟಿನ ದೂಳಿನ ಸಮವಿಲ್ಲ. ಬಸವಣ್ಣನವರ ಕಾಲಿನ ದೂಳಿನ ಸಮವಿಲ್ಲ. ಮೊದಲು ಶಾಲೆಯ ಗೋಡೆ ಮೇಲೆ ಗಾಂಜಾ, ತಂಬಾಕು ನಿಷೇಧ ಎಂದು ಬರೆಯುಲಾಗುತ್ತಿತ್ತು. ಆದರೆ, ಈಗ ಅದರ ಅವಶ್ಯಕತೆ ಇಲ್ಲ. ಏಕೆಂದರೆ, ಪಠ್ಯಪುಸ್ತಕಗಳಲ್ಲಿಯೇ ಗಾಂಜಾ ಅಫೀಮ್ ಎಂಬುಂತೆ ಕೋಮುವಾದ ತುಂಬಲಾಗಿದೆ. ಶಾಲೆಗಳು ನಿಮ್ಮ ಆರ್‌ಎಸ್‌ಎಸ್  ಶಾಖೆಗಳಾ ಎಂದು ಪ್ರಶ್ನಿಸಿದರು.

ಪೊಲೀಸ್ಸಿನವರು ಸಣ್ಣಪುಟ್ಟದಕ್ಕೆ ಸ್ವಯಂ ದೂರು ದಾಖಲಿಸಿಕೊಳ್ಳುತ್ತಾರೆ. ಆದರೆ, ಕುವೆಂಪು ಅವರಿಗೆ ಮಾಡಿದ ಅಪಮಾನಕ್ಕೆ ಈಗ ಯಾಕೆ ಸುಮ್ಮನೆ ಇದ್ದೀರಾ‌ ಸ್ವಯಂ ದೂರು ದಾಖಲು ಯಾಕೆ ಮಾಡಿಕೊಳ್ಳುತ್ತಿಲ್ಲ. ಮುಖ್ಯಮಂತ್ರಿಗಳು ಬಂದು, ಪಠ್ಯಪುಸ್ತಕ ವಿತರಣೆ ಮಾಡಲ್ಲ ಎನ್ನಬೇಕು ಮತ್ತು ಬರಗೂರು ರಾಮಚಂದ್ರಪ್ಪ ಅವರ ಪಠ್ಯಪುಸ್ತಕ ಮುಂದುವರಿಸುತ್ತೇವೆ ಎಂದು ಹೇಳಬೇಕು ಎಂದರು.

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರು, ಮೊನ್ನೆ ಹೋರಾಟ ಸಮಿತಿ ಭೇಟಿ ಮಾಡಿತ್ತು. ಹಿರಿಯ ವಕೀಲ ಹನುಮಂತ್ರಾಯಪ್ಪ ಎಲ್ಲಾ ವಾಸ್ತವಾಂಶಗಳ ಪರಿಸ್ಥಿತಿಯನ್ನು ವಿವರಿಸಿದರು. ನಂಜಾವಧೂತ ಸ್ವಾಮೀಜಿ ಯಾರಿಗೂ ಹೆದರೋದಿಲ್ಲ ಎಂದಿದ್ದಾರೆ. ಸರ್ಕಾರಕ್ಕೆ ಅಂತಿಮ ಕರೆ ಕೊಟ್ಟಿದ್ದಾರೆ. ಅವರು ಐಕ್ಯತೆಗೆ ನಾನು ಆಭಾರಿ. ಡಿ ಕೆ ಶಿವಕುಮಾರ್ ಕಠಿಣವಾದ ಶಬ್ದ ಬಳಸಿದರು. ಪುಸ್ತಕನೇ ಹರಿದು ಹಾಕಿದರು. ಪುಸ್ತಕದ ಮೇಲೆ ಅಷ್ಟೊಂದು ಆವೇಶ ಅವರಿಗಿದೆ. ಒಂದು ಕಾರ್ಯಕ್ರಮ ಹಾಕಿದರೆ, ಹೇಗೆ ಅಂತ್ಯಗೊಳಿಸಬೇಕು ಎಂದು ಗೋಕಾಕ್ ಚಳುವಳಿ ಮಾದರಿ ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ನಾನು ಮುಸ್ಲಿಂ ಆಗಿ, ಜನತಾದಳದವನಾಗಿ ಬಂದಿಲ್ಲ. ನಾನು ಬಸವಣ್ಣ, ಕುವೆಂಪು ಹಿಂಬಾಲಕನಾಗಿ ಬಂದಿದ್ದೀನಿ. ಬಸವಣ್ಣ ಕೇಶವ ಕೃಪದಲ್ಲಿ ತುಂಬಾ ದಿನ‌ ಇರೋಕೆ ಆಗಲ್ಲ. ನೀನು ಬಸವ ಕೃಪದವನು ಎಂಬುದನ್ನು ಮರೆಯಬೇಡ. ಭಾರತ ಜನನಿಯ ತನುಜಾತೆ ಮುಖ್ಯ. ಮೊದಲು ಅಮ್ಮನನ್ನು ನೋಡಿ. 2024ಕ್ಕೆ ಇತಿಹಾಸ ಮತ್ತೆ ಬರಲಿದೆ. ಬಸವಣ್ಣನವರ ಸರ್ಕಾರ ತರ್ತೀವಿ ಎಂದರು.

ಪರಿಷ್ಕರಣೆಗೊಂಡಿರುವ ಪುಸ್ತಕವನ್ನು ವೇದಿಕೆ ಮೇಲೆಯೇ ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ನಾನು ಇದನ್ನು ಸುಟ್ಟು ಹಾಕಬೇಕು ಎಂದು ಬಂದೆ‌. ಆದರೆ ವೇದಿಕೆ ಮೇಲೆ ಸುಡಲು ಆಗಲ್ಲ. ಹಾಗಾಗಿ ಹರಿದು ಹಾಕುತ್ತಿದ್ದೇನೆ ಎಂದರು.

ಈ ಹೋರಾಟದೊಂದಿಗೆ ನಾವು ಇದ್ದೇವೆ ಎಂದು ಹೇಳಲು ಬಂದಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಹೋರಾಟ ತಂದುಕೊಟ್ಟ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದೇನೆ. ನಾವು ವಿಧಾನಸಭೆಯಲ್ಲಿ ಮಾತಾಡಬೇಕು. ಆದರೆ ಸಮಯ ಬಂದಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ಸು ಪಡೆಯುವವರೆಗೂ ಹೋರಾಟ ಮಾಡ್ತೇವೆ. ಯಾರ‍್ಯಾರು ಈ ಹೋರಾಟ ಬುನಾದಿ ಹಾಕಿದ್ದೀರಿ ಅವರಿಗೆ ಸಾಷ್ಟಾಂಗ ನಮಸ್ಕಾರ ಎಂದರು.

ಬರಗೂರು ರಾಮಚಂದ್ರಪ್ಪ ಅವರ ಪಠ್ಯ ರಾಜ್ಯದ ಸ್ವತ್ತು. ಅವರ ಪಠ್ಯಪುಸ್ತಕ ಎಂದಿಗೂ ಯಾರು ಸಹ ವಿರೋಧ ಮಾಡಲಿಲ್ಲ. ಮುಂದೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತೆ. ಬಂದಾಗ ನೀವು ಮಾಡಿದ ಪರಿಷ್ಕರಣೆ ಕೆಳಗೆ ಇಳಿಸುತ್ತೇವೆ. ರಾಜಕಾರಣ ಬೇರೆ ರೀತಿ ವ್ಯಾಖ್ಯಾನ ಮಾಡ್ತೇವೆ‌ ನಾಡಿನ ಸಂಸ್ಕೃತಿ ಉಳಿಸಲು ಹೋರಾಟ ಮಾಡುತ್ತಿದ್ದೀರಿ. ಮೂರು ಸಾವಿರಕ್ಕೂ ಹೆಚ್ಚು ಮಠಾದೀಶರು ಇದ್ದಾರೆ. ನಮ್ಮ ರಾಜಕಾರಣಕ್ಕೆ ನಿಮ್ಮ ಬೆಂಬಲ ಬೇಡ. ಆದರೆ, ಎಲ್ಲಾ ಜಾತಿ, ಧರ್ಮಗಳಿಗೆ ಅಪಮಾನ ಆಗಿದೆ‌. ಹಳ್ಳಿ ಹಳ್ಳಿಯಲ್ಲು ಹೋರಾಟ ಮಾಡೋಣ ಎಂದರು.

ಈ ವೇಳೆ ರ‍್ಯಾಲಿಗೆ ಅವಕಾಶ ನೀಡದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಯಲ್ಲಿ ನಂಜಾವಧೂತ  ಸ್ವಾಮೀಜಿ, ಜ್ಞಾನ ಪ್ರಕಾಶ್ ಸ್ವಾಮೀಜಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ರಾಜ್ಯ ಒಕ್ಕಲಿಗ ಸಂಘಟನೆ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಾಲಕೃಷ್ಣ, ಕೆಪಿಸಿಸಿ ‌ಅಧ್ಯಕ್ಷ ಡಿ.ಕೆ ಶಿವಕುಮಾರ್, ಶಾಸಕ ರಂಗನಾಥ್, ಎಂ ಕೃಷ್ಣಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಸಿ.ಎಸ್ ಧ್ವಾರಕನಾಥ್, ಮುಖ್ಯ ಮಂತ್ರಿ ಚಂದ್ರು ಸಾ.ರಾ ಗೋವಿಂದ್, ಅಕೈ ಪದ್ಮಾಶಾಲಿ ಎಸ್‌ ಜಿ ಸಿದ್ದರಾಮಯ್ಯ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್, ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸೇರಿದಂತೆ ಅನೇಕ ಪ್ರಗತಿಪರ ಹೋರಾಟಗಾರರು ಭಾಗಿಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *