ಕುಶಾಲನಗರ: ಕೇಸರಿ ಶಾಲು ಹಾಕುವ ವಿಚಾರವಾಗಿ ಒಂದೇ ಗುಂಪಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ನಗರದ ಸುಂದರನಗರ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ಇದಾಗಿದ್ದು, ಪ್ರಥಮ ವರ್ಷದ ವಿದ್ಯಾರ್ಥಿ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಸುಂದರನಗರ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಸಂದೀಪ(20) ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಕಾಲೇಜಿಗೆ ಸ್ಕಾರ್ಫ್ ಹಾಕಿ ಬರುತ್ತಿದ್ದುದನ್ನು ವಿರೋಧಿಸಿ ಸುಂದರನಗರ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲನ್ನು ಹಾಕಿ ಪ್ರತಿಭಟಿಸುತ್ತಿದ್ದರು. ಈ ವೇಳೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸಂದೀಪ, ವಿಕ್ರಂ ಎಂಬ ಪ್ರಥಮ ವರ್ಷದ ವಿದ್ಯಾರ್ಥಿ ಸ್ನೇಹಿತನಿಗೆ ಶಾಲು ಹಾಕುವಂತೆ ತಿಳಿಸಿದಾಗ ವಿಕ್ರಂ ಅದನ್ನು ವಿರೋಧಿಸಿದ್ದಾನೆ. ಈ ಸಂದರ್ಭ ವಿಕ್ರಂ ಹಾಗೂ ಸಂದೀಪರವರ ಗುಂಪಿನ ನಡುವೆ ಕಾಲೇಜು ಕ್ಯಾಂಪಸ್ ನ ಒಳ ಭಾಗದಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ವಿಕ್ರಂ ಎಂಬ ಯುವಕ ಸಂದೀಪ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿ ಸಂದೀಪ ಎಂಬಾತನ ಹೆಗಲು ಹಾಗೂ ಬೆನ್ನಿಗೆ ಚಾಕುವಿನ ಇರಿತದಿಂದ ಗಾಯವಾಗಿದ್ದು, ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಗೋಪಾಲ್ ಸರ್ಕಲ್ ನ ಶ್ರೀದೇವಿ ಬಾರ್ ನ ಸಮೀಪ ವಿಕ್ರಂ ಹಾಗೂ ದನುಷ್ ಎಂಬವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ವಿಕ್ರಂ ತಲೆ ಹಾಗೂ ಕೈಗೆ ಪೆಟ್ಟಾಗಿದ್ದು, ಸಂದೀಪ ಹಾಗೂ ವಿಕ್ರಂ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ಎರಡೂ ಗುಂಪಿನವರನ್ನು ಪೋಲೀಸರು ಠಾಣೆಯಲ್ಲಿ ವಿಚಾರಣೆಗೆ ಒಳ ಪಡೆಸಿದ್ದಾರೆ.